ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ್ಯುವರ್ಸ್‌’ 12ನೇ ಆವೃತ್ತಿಗೆ ತೆರೆ: ಆತ್ಮವಿಶ್ವಾಸ ಹೆಚ್ಚಿಸಿದ ಶೈಕ್ಷಣಿಕ ಮೇಳ

‘ಪ್ರಜಾವಾಣಿ’,-‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಎಡ್ಯುವರ್ಸ್‌’
Last Updated 3 ಜುಲೈ 2022, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕಾಲೇಜುಗಳಲ್ಲಿ ಇರುವ ಸೌಲಭ್ಯ, ಕೋರ್ಸ್‌ಗಳು, ಪ್ರವೇಶ ಶುಲ್ಕ, ಉದ್ಯೋಗಾವಕಾಶ, ಶೈಕ್ಷಣಿಕ ಸಾಲ... ಹೀಗೆ ವಿದ್ಯಾರ್ಥಿಗಳು, ಪೋಷಕರಲ್ಲಿನ ಸಾಲು ಸಾಲು ಅನುಮಾನಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಶೈಕ್ಷಣಿಕ ಮೇಳ ಮಾಡಿತು.

ಜಯಮಹಲ್ ಪ್ಯಾಲೇಸ್ ಹೋಟೆಲ್ ಗ್ರೌಂಡ್ಸ್‌ನಲ್ಲಿ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಎಡ್ಯುವರ್ಸ್‌: ಜ್ಞಾನದೇಗುಲ’ ಶಿಕ್ಷಣ ಮೇಳವು ಭಾನುವಾರ ಸಂಪನ್ನವಾಯಿತು.ಎರಡನೇ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡರು.

ಶೈಕ್ಷಣಿಕ ಮೇಳದ ಪ್ರಥಮ ದಿನವಾದ ಶನಿವಾರ ಸಿಇಟಿ ಮತ್ತು ಕಾಮೆಡ್–ಕೆ ಕುರಿತ ಉಪನ್ಯಾಸಗಳಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರು ಎರಡನೇ ದಿನ ಬಂದು, ಪ್ರಯೋಜನ ಪಡೆದುಕೊಂಡರು.

ಸಿಇಟಿ ಮತ್ತು ಕಾಮೆಡ್‌–ಕೆಗೆ ಸಂಬಂಧಿಸಿದ ವಿಚಾರಗೋಷ್ಠಿಗಳು ಮೆಚ್ಚುಗೆಗೆ ಪಾತ್ರವಾಯಿತು.ಕಾಮೆಡ್‌–ಕೆ ಪರಿಣತ ಶಾಂತಾರಾಮ ನಾಯಕ್‌ ಹಾಗೂಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಿರಿಯ ಸಹಾಯಕ ಉತ್ತಮ್ ಬಡಿಗೇರ ಅವರುಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

‘ಸಿಇಟಿ, ಕಾಮೆಡ್‌–ಕೆ ಸೀಟುಗಳ ಆಯ್ಕೆ ಪ್ರಕ್ರಿಯೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎನ್ನುತ್ತಾರೆ. ಆದರೆ, ವಿವರವಾಗಿ ಯಾರೂ ಹೇಳುವುದಿಲ್ಲ. ಇಲ್ಲಿ ಅದರ ಸಮಗ್ರ ಮಾಹಿತಿ ತಿಳಿದುಕೊಂಡೆವು’ ಎಂದು ಬಹಳಷ್ಟು ಪೋಷಕರು ಅಭಿಪ್ರಾಯ
ವ್ಯಕ್ತಪಡಿಸಿದರು.

ಈ ಬಾರಿ ಮೇಳದಲ್ಲಿ50ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ರಾಜ್ಯದ ವಿವಿಧ ಭಾಗಗಳ ಜತೆಗೆ ಮುಂಬೈ, ಪುಣೆ, ನವದೆಹಲಿ ಹಾಗೂ ಹೈದರಾಬಾದ್‌ನ ಶಿಕ್ಷಣ ಸಂಸ್ಥೆಗಳೂ ಪಾಲ್ಗೊಂಡಿದ್ದವು.

ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಎಂಸಿಎ, ಫ್ಯಾಷನ್ ಡಿಸೈನ್ ಸೇರಿದಂತೆ ವಿವಿಧ ಕೋರ್ಸ್‌ಗಳು ಹಾಗೂ ಕಾಲೇಜುಗಳ ವೈಶಿಷ್ಟ್ಯಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮಾಹಿತಿ ಒದಗಿಸಿದರು.

ಸಿಇಟಿ, ಕಾಮೆಡ್–ಕೆ ಗೊಂದಲ ನಿವಾರಣೆ

‘ಕಾಮೆಡ್–ಕೆ ಅಧೀನದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಪಡೆಯಲು ಬಯಸುವ ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೂ ನಿರಂತರವಾಗಿ www.comedk.org ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು. ಕಾಮೆಡ್‌–ಕೆ ಪರೀಕ್ಷೆ, ಸೀಟು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಸುತ್ತೋಲೆಗಳು ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ದಿನಕ್ಕೆ ಎರಡು ಮೂರಿ ಬಾರಿ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಅಗತ್ಯ ಮಾಹಿತಿಗಳು ಸಿಗುತ್ತವೆ’ ಎಂದು ಕಾಮೆಡ್‌–ಕೆ ಅಧಿಕಾರಿ ಪ್ರೊ. ಶಾಂತಾರಾಮ ನಾಯಕ್ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಿರಿಯ ಸಹಾಯಕ ಉತ್ತಮ್ ಬಡಿಗೇರ, ‘ಸಿಇಟಿ ಫಲಿತಾಂಶ ಶೀಘ್ರದಲ್ಲಿಯೇ ಪ್ರಕಟವಾಗಲಿದೆ.ಸೀಟು ಆಯ್ಕೆ ಸಂದರ್ಭ ಯಾವುದೇ ಒಂದು ಹಂತ ತಪ್ಪಿದರೂ ಸೀಟು ಕೈತಪ್ಪಿ ಹೋಗಬಹುದು. ಜಾಲತಾಣದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲು ಹೋಗಬಾರದು. ಕಾಲೇಜು ಮತ್ತು ಕೋರ್ಸ್‌ ಆಯ್ಕೆಯಲ್ಲಿ ಆದ್ಯತೆ ನೀಡುವಾಗ ಎಚ್ಚರ ವಹಿಸಬೇಕು.

ಕಡಿಮೆ ರ‍್ಯಾಂಕ್ ಬಂದವರು ನಿಗದಿತ ಕಾಲೇಜು ಸಿಗಲಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ಸೀಟು ಸಿಕ್ಕ ಕಾಲೇಜಿನಲ್ಲಿ ಚೆನ್ನಾಗಿ ಓದಿ, ಉತ್ತಮ ಸಾಧನೆ ಮಾಡಬಹುದು’ ಎಂದು ಸಲಹೆ ನೀಡಿದರು.

‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು– ಪ್ರಜಾವಾಣಿ ಚಿತ್ರ
‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು
– ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT