ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಅಭಿವೃದ್ಧಿ: ಹೇಳಿದ್ದು ₹1,556 ಕೋಟಿ, ನೀಡುವುದು ₹411 ಕೋಟಿ!

ಪ್ರವಾಹ ನಿಯಂತ್ರಣಕ್ಕಾಗಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ l ಹಣಕಾಸು ಲಭ್ಯತೆ ಇಲ್ಲದ ಕಾರಣ ಅನುದಾನಕ್ಕೆ ಕತ್ತರಿ
Last Updated 13 ಫೆಬ್ರುವರಿ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸಲು ರಾಜ
ಕಾಲುವೆ ಅಭಿವೃದ್ಧಿಗಾಗಿ ₹1,556.15 ಕೋಟಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಸದ್ಯಕ್ಕೆ ಈ ಉದ್ದೇಶಕ್ಕೆ ₹411.31 ಕೋಟಿಯನ್ನು ಮಾತ್ರ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದು, ಇದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

2021ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೂ ಹಾನಿ ಉಂಟಾಗಿತ್ತು. ಹಲವೆಡೆ ರಾಜಕಾಲುವೆಗಳ ತಡೆಗೋಡೆಗಳು ಶಿಥಿಲಗೊಂಡಿದ್ದವು.

ರಾಜಕಾಲುವೆಗಳನ್ನು ಬಲಪಡಿಸುವ ಕಾಮಗಾರಿಗಳಿಗೆ ₹1,479.55 ಕೋಟಿ ಅನುದಾನ ಬಿಡುಗಡೆ ಮಾಡು
ವಂತೆ ಬಿಬಿಎಂ‍ಪಿಯು ನಗರಾಭಿವೃದ್ಧಿ ಇಲಾಖೆಗೆ ಆರಂಭದಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಇದರಲ್ಲಿ ಬಿಟಿಎಂ ಬಡಾ
ವಣೆ ಮತ್ತು ಜಯನಗರ ಕ್ಷೇತ್ರಗಳ ರಾಜಕಾಲುವೆಗಳ ಅಭಿವೃದ್ಧಿಯ ಪ್ರಸ್ತಾವಗಳು ಇರಲಿಲ್ಲ. ಬಳಿಕ ಬಿಟಿಎಂ ಬಡಾವಣೆಗೆ ₹ 35 ಕೋಟಿ ಹಾಗೂ ಜಯನಗರಕ್ಕೆ ₹41.50 ಕೋಟಿ ಸೇರಿಸಿ ಒಟ್ಟು₹ 1,556.15 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪರಿಷ್ಕೃತ ಪ್ರಸ್ತಾವವನ್ನು ಬಿಬಿಎಂಪಿ ಸಿದ್ಧಪಡಿಸಿತ್ತು.

61.32 ಕಿ.ಮೀ ಪ್ರಥಮ ಹಂತದ ರಾಜಕಾಲುವೆಗಳು ಹಾಗೂ 104.87 ಕಿ.ಮೀ ಉದ್ದದ ದ್ವಿತೀಯ ಹಂತದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವ 306 ಕಾಮಗಾರಿಗಳ ಅನುಷ್ಠಾನಕ್ಕೆ ಬಿಬಿಎಂಪಿ ಕ್ರಿಯಾಯೋಜನೆ ತಯಾರಿಸಿತ್ತು. ಇದಕ್ಕೆ ಸಚಿವ ಸಂಪುಟ ಅನುಮೋದನೆಯನ್ನೂ ನೀಡಿತ್ತು. ಆದರೆ, ಹಣಕಾಸು ಲಭ್ಯತೆ ಇಲ್ಲದ ಕಾರಣಕ್ಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಈ ಅನುದಾನಕ್ಕೆ ಕತ್ತರಿ ಹಾಕಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ.

ರಾಜಕಾಲುವೆ ದುರಸ್ತಿಗೆ ಸಂಬಂಧಿಸಿದ ಪ್ರಸ್ತಾವ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಅವಶ್ಯಕತೆಗಿಂತಲೂ ಅಧಿಕ ಮೊತ್ತಕ್ಕೆ ಅಂದಾಜುಪಟ್ಟಿ ತಯಾರಿಸಲಾಗಿತ್ತು. ಬಿಜೆಪಿಯ ಶಾಸಕರು ಪ್ರತಿನಿಧಿಸುವ ಕ್ಷೇತ್ರವೊಂದರಲ್ಲಿ ₹ 20 ಕೋಟಿ ವೆಚ್ಚದಲ್ಲಿ ರಾಜಕಾಲುವೆ ದುರಸ್ತಿ ನಡೆಸಬಹುದಾದ ಕಡೆ ₹ 70 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗೆ ಅಂದಾಜುಪಟ್ಟಿ ರೂಪಿಸಿದ್ದ ಅಂಶ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿತ್ತು. ಹಾಗಾಗಿ, ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯಕ್ಕೆ ಬರುವಂತೆ ನಗರಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಇದೇ 9ರಂದು ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದೆ. ತುರ್ತು ಅವಶ್ಯಕತೆ ಇರುವ ಕಾಮಗಾರಿಗಳನ್ನಷ್ಟೇ ಈ ವರ್ಷ ಕೈಗೊಂಡು, ಉಳಿದವುಗಳನ್ನು ಮುಂದಿನ ವರ್ಷಗಳಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಈ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪರಿಷ್ಕೃತ ಪಟ್ಟಿಯ ಪ್ರಕಾರ ಬಿಟಿಎಂ ಬಡಾವಣೆ, ಬಸವನಗುಡಿ, ಚಾಮರಾಜಪೇಟೆ, ಜಯನಗರ, ಗೋವಿಂದರಾಜನಗರ, ಪದ್ಮನಾಭನಗರ, ರಾಜಾಜಿನಗರ, ಶಿವಾಜಿನಗರ ಹಾಗೂ ಆನೇಕಲ್‌ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸದ್ಯಕ್ಕೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

***


‘ರಾಜಕಾಲುವೆ ದುರಸ್ತಿ: ಅನುದಾನ ಕಡಿತ ಸರಿಯಲ್ಲ’"
ಕಳೆದ ಮಳೆಗಾಲದಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಮೂರು– ನಾಲ್ಕು ಬಾರಿ ಪ್ರವಾಹ ಉಂಟಾಗಿ ಸಾವಿರಾರು ಮನೆಗಳಿಗೆ ಹಾನಿ ಉಂಟಾಗಿತ್ತು. ರಾಜಕಾಲುವೆಗಳು ಸಮರ್ಪಕವಾಗಿಲ್ಲದಿರುವುದೇ ಈ ಅನಾಹುತಕ್ಕೆ ಪ್ರಮುಖ ಕಾರಣ. ಇದನ್ನು ಆಧರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಮ್ಮ ಕ್ಷೇತ್ರದ ರಾಜಕಾಲುವೆ ದುರಸ್ತಿಗೆ ತುರ್ತಾಗಿ ₹ 125 ಕೋಟಿ ಅನುದಾನ ಒದಗಿಸುವಂತೆ ಬಿಬಿಎಂಪಿ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಒಪ್ಪಿಗೆಯನ್ನೂ ಸೂಚಿಸಿತ್ತು. ಕೆಲವು ಕಾಮಗಾರಿಗಳಿಗೆ ಟೆಂಡರ್‌ ಕೂಡಾ ಆಹ್ವಾನಿಸಿದ್ದರು. ಈ ಹಂತದಲ್ಲಿ ಅನುದಾನವನ್ನು ₹ 15 ಕೋಟಿಗೆ ಕಡಿತ ಮಾಡುವ ಸರ್ಕಾರದ ನಡೆ ಸರಿಯಲ್ಲ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ.

- ಆರ್‌.ಮಂಜುನಾಥ್‌,ಶಾಸಕರು, ದಾಸರಹಳ್ಳಿ

****

‘ರಾಜಕಾಲುವೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು’

ಪ್ರವಾಹ ಉಂಟಾಗುವ ಸಮಸ್ಯೆ ನೀಗಿಸಲು ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕಿದೆ. ಅನುದಾನ ಕಡಿತ ಮಾಡುವ ಮೂಲಕ ಈ ಸರ್ಕಾರ ಅದರಲ್ಲೂ ರಾಜಕೀಯ ಮಾಡಲು ಹೊರಟಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುವ ಮುಖ್ಯಮಂತ್ರಿಯವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅನುದಾನ ಹಂಚಿಕೆಯ ಪರಿಷ್ಕೃತ ಪಟ್ಟಿಯಲ್ಲಿ ಆಡಳಿತ ಪಕ್ಷದ ಕೆಲವೇ ಶಾಸಕರಿಗೆ ಬಹುಪಾಲು ಅನುದಾನ ಮೀಸಲಿಟ್ಟಿದ್ದಾರೆ. ಇದರಿಂದಾಗಿ ಬೆಂಗಳೂರಿನ ಅಭಿವೃದ್ಧಿ ಹಿನ್ನಡೆ ಆಗಲಿದೆ. ಜನರು ಸಮಸ್ಯೆಯಿಂದ ನರಳುವುದು ಮುಂದುವರಿಯಲಿದೆ.

- ಕೃಷ್ಣ ಬೈರೇಗೌಡ, ಶಾಸಕ, ಬ್ಯಾಟರಾಯನಪುರ

****


‘ಗೊಂದಲವನ್ನು ಮುಖ್ಯಮಂತ್ರಿಯವರೇ ಸರಿಪಡಿಸಲಿ’

ಮುಖ್ಯಮಂತ್ರಿಯವರು ಇತ್ತೀಚೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಗರದ ಶಾಸಕರ ಜೊತೆ ಸಭೆ ನಡೆಸಿದ್ದರು. ರಾಜಕಾಲುವೆ ಅಭಿವೃದ್ಧಿಗೆ ₹ 1,556 ಕೋಟಿ ವೆಚ್ಚದ ವಿಸ್ತೃತ ಯೋಜನೆ ಸಿದ್ಧಪಡಿಸಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರೇ ಆ ಸಭೆಯಲ್ಲಿ ಮಾಹಿತಿ ನೀಡಿದ್ದರು. ಇದೀಗ ಕೆಲವು ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಗೊಂದಲವನ್ನು ಮುಖ್ಯಮಂತ್ರಿಯವರು ಸರಿಪಡಿಸುತ್ತಾರೆಎಂಬ ವಿಶ್ವಾಸ ಇದೆ.

- ಸತೀಶ್‌ ರೆಡ್ಡಿ,ಶಾಸಕ, ಬೊಮ್ಮನಹಳ್ಳಿ ಕ್ಷೇತ್ರ

****

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ಈ ವರ್ಷದಲ್ಲಿ ಎಷ್ಟು ಅನುದಾನ ನೀಡಬೇಕು ಎಂಬ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

- ರಾಕೇಶ್‌ ಸಿಂಗ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT