ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷನ್ ವಿತರಣೆ: ನಿಮ್ಮ‌ ಸಮಸ್ಯೆಗೆ ಸಚಿವರ ಉತ್ತರ ಇಲ್ಲಿದೆ

Last Updated 18 ಏಪ್ರಿಲ್ 2020, 8:26 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಡ್‌ ಇಲ್ಲದಿದ್ದರೂ ಪರವಾಗಿಲ್ಲ ಆದರೆ, ಅದಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ನೀಡಿರುವ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿ ಆಧಾರಿತವಾಗಿ ಪಡಿತರ ವಿತರಿಸಲಾಗುವುದು ಎಂದು ಆಹಾರ ಸಚಿವ ಎಂ.ಗೋಪಾಲಯ್ಯಮಾಹಿತಿ ನೀಡಿದರು.

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಜನರ ಪ್ರಶ್ನೆಗಳಿಗೆಉತ್ತರಿಸಿದರು. ಈ ವೇಳೆ ಮಾತನಾಡಿದ ಅವರು,ಕಾರ್ಡ್‌ಗಳು‌ ಎಲ್ಲಿ ನೋಂದಣಿಯಾಗಿದ್ದರೂ ಸರಿ. ದೇಶದಲ್ಲಿ ಈಗಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸದ್ಯ ಎಲ್ಲಿ ವಾಸವಿದ್ದೀರೋ ಅಲ್ಲಿಯೇಪ್ರತಿಯೊಬ್ಬರಿಗೂಪಡಿತರ ನೀಡಲಾಗುವುದು ಎಂದುಹೇಳಿದರು.

‘ಸರ್ಕಾರದಿಂದ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಒಂದು ತಿಂಗಳಿಗೆ 10 ಕೆಜಿ ಅಕ್ಕಿ (ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ5 ಕೆಜಿ) ಹಾಗೂ ಕುಟುಂಬಕ್ಕೆ 2 ಕೆ.ಜಿ ಗೋಧಿ, 1 ಕೆಜಿ ಬೇಳೆ ನೀಡಲಾಗುತ್ತದೆ. ಇದು ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಿಗೆ ಅನ್ವಯ ವಾಗಲಿದೆ’ಎಂದು ಮಾಹಿತಿ ನೀಡಿದರು.

ಹಣ ಕೇಳಿದರೆ ಈಗ ನನ್ನನ್ನು ಪ್ರಶ್ನಿಸುತ್ತಿರುವಂತೆಯೇ ಪ್ರಶ್ನಿಸಿ
‘ಮೂರು ತಿಂಗಳ ಅವಧಿಗೆ ಪಡಿತರವನ್ನು ಸರ್ಕಾರದ ಉಚಿತವಾಗಿ ನೀಡುತ್ತಿದೆ. ಯಾರೇ ಹಣ ಕೇಳಿದರೂ ಕೊಡಬೇಡಿ. ಅಧಿಕಾರಿಗಳೇನು ಅವರ ಮನೆಯಿಂದ ಪಡಿತರ ವಿತರಿಸುತ್ತಿಲ್ಲ. ಅದನ್ನು ಪ್ರಶ್ನಿಸಬೇಕಾದದ್ದು ನಿಮ್ಮ ಹಕ್ಕು’ ಎಂದು ಏರುದನಿಯಲ್ಲಿ ಹೇಳಿದರು.

‘ಒಂದು ವೇಳೆ ನೀಡಬೇಕಿರುವ ಪ್ರಮಾಣಕ್ಕಿಂತಕಡಿಮೆ ಪಡಿತರನೀಡುತ್ತಿದ್ದರೆ, ಮಾಹಿತಿ ಕೊಡಿ. ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಹಣ ಕೇಳುತ್ತಿದ್ದಾರೆ ಎಂದು ಹಲವರು ದೂರು ಹೇಳಿಕೊಂಡರು. ಆಗ, ‘ಕೇಂದ್ರ ಮತ್ತು ರಾಜ್ಯದ ಸರ್ಕಾರ ಕಡುಬಡವರಿಗಾಗಿ ಉಚಿತವಾಗಿ ನೀಡುತ್ತಿರುವ ಯೋಜನೆ ಇದು.ಪ್ರಜಾವಾಣಿ ಫೋನ್‌ಇನ್‌ನಲ್ಲಿ ನನ್ನನ್ನು ಪ್ರಶ್ನಿಸುತ್ತಿರುವಂತೆಯೇ ನ್ಯಾಯಬೆಲೆ ಅಂಗಡಿಯವರನ್ನೂ ಧೈರ್ಯವಾಗಿ ಪ್ರಶ್ನಿಸಿ’ಎಂದು ಪ್ರೋತ್ಸಾಹಿಸಿದರು.

ಮುಂದುವರಿದು, ರಾಜ್ಯದಲ್ಲಿರುವ 19,800 ನ್ಯಾಯಬೆಲೆ ಅಂಗಡಿಗಳಿಗೂ ಪ್ರತಿ ತಿಂಗಳ ಒಂದನೇ ತಾರೀಖು ಪಡಿತರ ಕಳುಹಿಸಿಕೊಡಲಾಗುತ್ತದೆ ಎಂದರು.

ರೇಷನ್‌ ಕಾರ್ಡ್‌ ಇದ್ದರೂ ಪಡಿತರ ನೀಡುತ್ತಿಲ್ಲ ಎಂದು ದೂರು ನೀಡಿದ ಹಲವರ ದೂರವಾಣಿ ಸಂಖ್ಯೆ ಪಡೆದುಕೊಂಡ ಸಚಿವರು ಇಂದು ಸಂಜೆಯೊಳಗೆಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕುಂದು ಕೊರತೆ ಆಲಿಸಲು ಸಹಾಯವಾಣಿ
ಜನರ ಕುಂದುಕೊರತೆ ಆಲಿಸಲು ಸಹಾಯವಾಣಿ ಇದೆ. ಜನರು 1967ಗೆ ಕರೆ ಮಾಡಬಹುದು. ಪ್ರತಿದಿನ ಸಂಜೆ ವರದಿ ಪಡೆದುಕೊಳ್ಳುತ್ತಿದ್ದೇನೆ. ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಸಾದ್ಯವಾದಷ್ಟು ಉತ್ತಮ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

10 ಜನರಿದ್ದರೆ 100 ಕೆಜಿ ಅಕ್ಕಿ
ನಮ್ಮ ಕುಟುಂಬದಲ್ಲಿ 10 ಜನರಿದ್ದಾರೆ. ಆದರೆ, ಕೇವಲ 35 ಕೆ,ಜಿ ಅಕ್ಕಿ ನೀಡಲಾಗುತ್ತಿದೆ.ಇದು ಸಾಲುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ಕುಟುಂಬದಲ್ಲಿ 10 ಜನರಿದ್ದರೆ ಅಂತಹವರ ಕುಟುಂಬಕ್ಕೆ ತಿಂಗಳಿಗೆ 100 ಕೆಜಿ ಅಕ್ಕಿ ನೀಡಬೇಕು. ನ್ಯಾಯ ಬೆಲೆ ಅಂಗಡಿಯಲ್ಲಿ ಸರಿಯಾಗಿ ಕೇಳಿ ಪಡೆದುಕೊಳ್ಳಿ ಎಂದು ತಿಳಿಸಿದರು.

1 ಲಕ್ಷಕ್ಕೂ ಹೆಚ್ಚುಅರ್ಜಿಗಳಿವೆ!
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ವರ್ಷವಾಯಿತು. ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡಿ ಸಾಕಾಗಿದೆ ಎಂದು ಸಮಸ್ಯೆ ಹೇಳಿಕೊಂಡ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯಿಸಿದ ಸಚಿವರು, ‘ಈಗಾಗಲೇ 1 ಲಕ್ಷಕ್ಕೂ ಹೆಚ್ಚುಅರ್ಜಿಗಳು ಸಲ್ಲಿಕೆಯಾಗಿವೆ. ಕೊರೊನಾ ಮುಗಿದ ನಂತರ ಅರ್ಹರಿಗೆ ಕಾರ್ಡ್ ವಿತರಿಸಲಾಗುತ್ತದೆ’

‘ಇದೀಗ ಮೂರು ತಿಂಗಳಿಗೆ ಉಚಿತವಾಗಿ ಪಡಿತರ ನೀಡಲಾಗುತ್ತದೆ.ಅರ್ಜಿ ಸಲ್ಲಿಸುವ ವೇಳೆ ನೀಡಿರುವ ಮೊಬೈಲ್ ‌ ನಂಬರ್‌ಗೆ ಒಟಿಪಿ ಬರುತ್ತದೆ. ಅದರ ಮೂಲಕಪಡಿತರ ವಿತರಿಸಲಾಗುತ್ತೆ.ಸ್ವೀಕರಿಸಿ’ ಎಂದು ಸಲಹೆ ನೀಡಿದರು.

ಮನೆಮನೆಗಳಿಗೇ ಹೋಗಿ ವಿತರಣೆ
ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ಪ್ರದೇಶಗಳಲ್ಲಿ ಮನೆಮನೆಗಳಿಗೇ ತೆರಳಿ ಪಡಿತರ ಹಾಗೂ ತರಕಾರಿಯನ್ನುತಲುಪಿಸಲಾಗುವುದು.

ಮಾತ್ರವಲ್ಲದೆ,ರೆಡ್‌ ಜೋನ್‌, ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿಅಲ್ಲಿನ ಸ್ಥಿತಿಗತಿಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ನಗರ ಆಯುಕ್ತರಿಗೆ ಸೂಚನೆ ನೀಡಲಾಗಿದೆ.ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಕಾರ್ಡ್‌ ಬಿಟ್ಟು ಬಂದಿದ್ದೇವೆ. ಏನು ಮಾಡೋದು?
ಮಹಿಳೆಯೊಬ್ಬರು ಕರೆ ಮಾಡಿ ಈ ರೀತಿ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, ‘ರೇಷನ್‌ ಕಾರ್ಡ್‌ ಫೋಟೊ ಇಲ್ಲವೇ, ಜೆರಾಕ್ಸ್ ಅಥವಾ ಆಧಾರ್ ಕಾರ್ಡ್‌ ಇದ್ದರೆ ನ್ಯಾಯಬೆಲೆ ಅಂಗಡಿಗೆ ಹೋಗಿ ಅಕ್ಕಿ ಪಡೆಯಿರಿ. ನಿಮ್ಮ ಬಳಿ ಯಾವ ದಾಖಲೆಯೂ ಇಲ್ಲದಿದ್ದರೆ ಏನೂ ಮಾಡಲಾಗದು’ ಎಂದರು.

ಹೊರ ರಾಜ್ಯಗಳ ಕಾರ್ಮಿಕರಿಗೆರೇಷನ್
ಬೇರೆ ರಾಜ್ಯದಿಂದ ಬಂದು ರಾಜ್ಯದಲ್ಲಿ ಉಳಿದುಕೊಂಡಿರುವ ಕೂಲಿ ಕಾರ್ಮಿಕರಬಳಿ ದಾಖಲೆಗಳಿದ್ದರೆ, ಅವರಿಗೂ ರೇಷನ್ ನೀಡಲಾಗುತ್ತದೆ. ಅವರಿಗೆ ಕೇಂದ್ರ ಸರ್ಕಾರದಿಂದ ಬರುವ ಪಡಿತರವನ್ನು ವಿತರಿಸಲಾಗುವದು ಎಂದು ಗೋಪಾಲಯ್ಯ ಹೇಳಿದರು.

ತಹಶೀಲ್ದಾರರಿಗೆ ತಿಳಿಸಿ
ಹೊರ ರಾಜ್ಯದಿಂದ ಬಂದವರ ಬಳಿ ಯಾವ ದಾಖಲೆಗಳೂ ಇಲ್ಲದಿದ್ದರೆ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ತಿಳಿಸಿ. ಆಹಾರ ವ್ಯವಸ್ಥೆ ಮಾಡಲಾಗುತ್ತದೆ.

ಅಡುಗೆ ಮಾಡಿಕೊಳ್ಳುವ ಅವಕಾಶವಿದೆ ಎಂದಾದರೆ, ಆಹಾರದ ಕಿಟ್‌ ಆನ್ನೂ ನೀಡುತ್ತೇವೆ ಎಂದರು.

ಅಂತ್ಯೋದಯ ಕಾರ್ಡ್‌ನವರಿಗೆ 35 ಕೆಜಿ ಅಕ್ಕಿ
ಅಂತ್ಯೋದಯ ಕಾರ್ಡ್‌ಗೆ ನೀಡಬೇಕಿರುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸಲಾಗುತ್ತಿದೆ ಎಂದು ಹಲವರು ದೂರು ನೀಡಿದರು. ಅದಕ್ಕೆ ಪ್ರತಿಯಾಗಿ,ಪ್ರತಿಯೊಂದು ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ಅಕ್ಕಿ ನೀಡಬೇಕು. ತಿಂಗಳಿಗೆ 35 ಅಕ್ಕಿ ನೀಡಲಾಗುತ್ತದೆ. ಅದರಂತೆ ಎರಡು ತಿಂಗಳಿಗೆ 70 ಕೆ.ಜಿ ನೀಡಬೇಕು. ಕಡಿಮೆ ಕೊಟ್ಟರೆ ಮಾಹಿತಿ ನೀಡಿ. ಅಧಿಕಾರಿಗಳಿಗೆ ಮಾಹಿತಿ ನೀಡಿಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಶೇ.97ರಷ್ಟು ಪಡಿತರ ವಿತರಣೆ
ರಾಜ್ಯದ ಶೇ. 97 ರಷ್ಟು ಜನರು ಪಡಿತರ‌ ಸ್ವೀಕರಿಸಿದ್ದಾರೆ. ಇಷ್ಟು ಪ್ರಮಾಣದಲ್ಲಿ ಈ ಹಿಂದೆ ರೇಷನ್‌ ಪಡೆದಿರಲಿಲ್ಲ.ಜನರಲ್ಲಿ ಮುಂದೆ ಆಹಾರ ಸಿಗುತ್ತೋ ಇಲ್ಲವೋ ಎಂಬ ಆತಂಕವವಿದೆ. ಸರ್ಕಾರ ವಿತರಿಸುವ ಪಡಿತರಕ್ಕೆ ಕೊರತೆ ಉಂಟಾಗುವುದಿಲ್ಲ. ಜನರು ಧೈರ್ಯವಾಗಿರಿ ಎಂದು ಅಭಯ ನೀಡಿದರು.

ರಾಜ್ಯದಲ್ಲಿ 1 ಕೋಟಿ 27 ಲಕ್ಷ ಕಾರ್ಡ್‌ಗಳಿವೆ. ಅದರಲ್ಲಿ 1 ಕೋಟಿ 19 ಸಾವಿರ ಕಾರ್ಡ್‌ಗಳಿಗೆ ಕೇಂದ್ರ ನೆರವು ನೀಡುತ್ತಿದೆ. ಅಕ್ಕಿ, ಬೇಳೆ ಖರೀದಿಗಾಗಿ ರಾಜ್ಯ ಸರ್ಕಾರ ₹ 148 ಕೋಟಿ ಅನುದಾನ ನೀಡಲು ನಿರ್ಧರಿಸಿದೆ.

ಬಿಪಿಎಲ್‌ ಕಾರ್ಡ್‌ಗಳಿಗಾಗಿ 5.70 ಲಕ್ಷ ಹೊಸ ಅರ್ಜಿಗಳು ಬಂದಿವೆ. 1 ಲಕ್ಷದ 7 ಸಾವಿರ ಎಪಿಎಲ್‌ ಕಾರ್ಡ್‌ದಾರರು ಪಡಿತರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 67 ಸಾವಿರ ಕಾರ್ಡ್‌ದಾರರಿಗೆ ₹ 15 ರಂತೆ ಅಕ್ಕಿ ನೀಡಲಾಗುವುದು.

ರಾಜ್ಯದಲ್ಲಿರುವ 19,800 ನ್ಯಾಯಬೆಲೆ ಅಂಗಡಿಗಳಲ್ಲೂ ಏಕಕಾಲದಲ್ಲಿ ಪಡಿತರ ವಿತರಿಸಲು ನಿರ್ಧರಿಸಲಾಗಿದೆ.

ಭತ್ತ ಬಿಳಿಜೋಳ ಖರೀದಿಗೆ ಏಪ್ರಿಲ್‌ 20 ರಿಂದ ನೋಂದಣಿ‌ ಆರಂಭಿಸಲಾಗುತ್ತದೆ.

ಅಡುಗೆ ಅನಿಲದ ಬಗ್ಗೆ..
ಪ್ರಧಾನ ಮಂತ್ರಿ ಉಜ್ವಲ ಅನಿಲ ಯೋಜನೆ ಅಡಿಯಲ್ಲಿ ಒಟ್ಟು 31.17 ಲಕ್ಷ ಕಾರ್ಡ್‌ಗಳು ಇವೆ. 29 ಲಕ್ಷದ 23 ಗ್ರಾಹಕರ ಖಾತೆಗಳಿಗೆ ಹಣ ಹಾಕಲಾಗಿದೆ. ಅದರಲ್ಲಿ 8 ಲಕ್ಷ ಜನರು ಈಗಾಗಲೇ ಗ್ಯಾಸ್ ಬುಕ್ ಮಾಡಿದ್ದಾರೆ. 6 ಕ್ಕೂ ಹೆಚ್ಚು ಕುಟುಂಬಕ್ಕೆ ಸಿಲಿಂಡರ್‌ ನೀಡಲಾಗಿದೆ.

ಮುಖ್ಯಮಂತ್ರಿಗಳ ಅನಿಲ ಯೋಜನೆ ಆಡಿಯಲ್ಲಿ ಸುಮಾರು 1 ಲಕ್ಷ ಕಾರ್ಡ್‌ಗಳ ಇವೆ. ಎಲ್ಲರಿಗೂ ಮೂರು ತಿಂಗಳಿಗೆ ಉಚಿತವಾಗಿ ಮೂರು ಸಿಲಿಂಡರ್‌ ನೀಡಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ₹ 25 ಕೋಟಿ ಅನುದಾನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT