ಮಂಗಳವಾರ, ಜನವರಿ 31, 2023
27 °C
ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ವಜ್ರ ಮಹೋತ್ಸವ

ಆರ್ಥಿಕತೆ– ದೇಶಕ್ಕೆ 5ನೇ ಸ್ಥಾನ: ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರ್ಥಿಕತೆಯಲ್ಲಿ ಭಾರತ ಈಗ ವಿಶ್ವದಲ್ಲಿಯೇ 5ನೇ ಸ್ಥಾನದಲ್ಲಿದೆ. 2047ರ ವೇಳೆಗೆ ದೇಶವು ಮೊದಲ ಸ್ಥಾನಕ್ಕೆ ಬರಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ನಡೆದ ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲ ಯದ ವಜ್ರ ಮಹೋತ್ಸವದಲ್ಲಿ ಮಾತನಾ ಡಿದ ಅವರು, ‘2030ರ ವೇಳೆಗೆ ಭಾರತ 3ನೇ ಸ್ಥಾನದಲ್ಲಿ ಇರಲಿದೆ. ಇತರೆ ದೇಶಗಳಿಗೆ ಭಾರತ ಅಣ್ಣನ ಸ್ಥಾನದಲ್ಲಿ ಮಾರ್ಗದರ್ಶನ ನೀಡುತ್ತಿದೆ’ ಎಂದರು.

‘ಗುಣಮಟ್ಟದ ಶಿಕ್ಷಣದ ಜೊತೆಗೆ ಕೌಶಲಕ್ಕೂ ಒತ್ತು ನೀಡಲಾಗುತ್ತಿದೆ. ಕ್ರೀಡೆಯಲ್ಲಿ ದೇಶದ ಸಾಧನೆ ಉತ್ತಮ ವಾಗಿದೆ. ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು 17 ಪದಕ ಗಳಿಸಿದ್ದರು. ಮುಂದಿನ ಒಲಿಂಪಿಕ್ಸ್‌ನಲ್ಲಿ ರಾಮಯ್ಯ ವಿಶ್ವವಿದ್ಯಾಲಯದ ಒಬ್ಬ ಕ್ರೀಡಾಪಟು ಚಿನ್ನದ ಪದಕ ಗೆಲ್ಲುವಂತಾಗಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರೀಡಾ ವಾತಾವರಣ ನಿರ್ಮಿಸಲು ಸರ್ಕಾರ ಅಗತ್ಯ ನೆರವು ನೀಡಲಿದೆ’ ಎಂದು ಹೇಳಿದರು.

‘ಶೈಕ್ಷಣಿಕ ಸಂಸ್ಥೆಗಳು, ಆಯಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ದೇಶದಲ್ಲೇ ಮೊದಲಿಗೆ ಕರ್ನಾಟಕವು ಎನ್‌ಇಪಿ ಅನುಷ್ಠಾನಕ್ಕೆ ತಂದಿದೆ’ ಎಂದರು.

‘ಮಾತು, ಕೃತಿ, ಮನಸ್ಸು ಏಕರೂಪ ದಲ್ಲಿದ್ದರೆ ಮಹಾತ್ಮರು ಎನಿಸಿಕೊಳ್ಳಲಿದ್ದಾರೆ. ಎಂ.ಎಸ್‌.ರಾಮಯ್ಯ ಅವರು ಈ ಸಾಲಿಗೆ ಸೇರುತ್ತಾರೆ. ಶೈಕ್ಷಣಿಕ ಸಂಸ್ಥೆಯನ್ನು ಆರಂಭದಲ್ಲಿ ನಷ್ಟದಲ್ಲಿ ನಡೆಸಿದ್ದರು. ರಿಯಲ್‌ ಎಸ್ಟೇಟ್‌ ಮೂಲಕ ಹಣ ಗಳಿಸಬಹುದಿತ್ತು. ಆದರೆ, ಶಿಕ್ಷಣ ಸಂಸ್ಥೆ ನಿರ್ಮಿಸಿ ಯುವ ಪೀಳಿಗೆಯ ಬದುಕಿಗೆ ಎಂಎಸ್‌ಆರ್‌ ನೆರವಾದರು’ ಎಂದು ಸ್ಮರಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ.ಆರ್‌.ಜಯರಾಂ ಅವರು, ‘ಎಸ್‌.ನಿಜಲಿಂಗಪ್ಪ ಅವರ ಸಲಹೆಯಂತೆ ತಂದೆಯವರು ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಆರಂಭ ದಲ್ಲಿ 30ರಿಂದ 40 ವಿದ್ಯಾರ್ಥಿಗಳಷ್ಟೇ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದರು. ಸಂಸ್ಥೆ ನಡೆಸುವುದು ಕಷ್ಟವಾಗಿತ್ತು. ನಂತರದ ವರ್ಷಗಳಲ್ಲಿ ಬೇಡಿಕೆ ಬಂತು. ಈಗ ಉತ್ಕೃಷ್ಟವಾದ ಶಿಕ್ಷಣ ನೀಡಲಾಗುತ್ತಿದೆ. ಆರಂಭದಲ್ಲಿ ಎರಡು ವಿಭಾಗಗಳಿದ್ದವು. ಈಗ ಯುಜಿಯ 17, ಪಿಜಿಯ 15 ವಿಭಾಗ ಇವೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್‌.ಸೀತಾರಾಂ, ಕಾರ್ಯದರ್ಶಿ ಎಂ.ಆರ್‌.ರಾಮಯ್ಯ, ಪ್ರಾಂಶುಪಾಲ ಡಾ.ಎನ್‌.ವಿ.ಆರ್‌.ನಾಯ್ಡು, ಸಿಇಒ ರಾಮಪ್ರಸಾದ್‌, ವಿ.ಕೆ.ಅತ್ರೆ, ಜೆ.ಎನ್‌.ರೆಡ್ಡಿ, ಡಾ.ಎಚ್‌.ಪಿ.ಕಿಚ್ಚ ಹಾಜರಿದ್ದರು.

ಕನ್ನಡಿಗರಿಗೆ ಉದ್ಯೋಗ

‘ಗುಣಮಟ್ಟದ ಶಿಕ್ಷಣ ಅಗತ್ಯ. ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ನೀಡಲು ಕ್ರಮ ವಹಿಸಲಾಗಿದೆ. ಇಂದು ಪ್ರತಿಭೆ ಇಲ್ಲದಿದ್ದರೆ ಭವಿಷ್ಯ ರೂಪಿಸಿಕೊಳ್ಳಲಾಗದು. ಬೆಂಗಳೂರನ್ನು ನಿವೃತ್ತರ ಸ್ವರ್ಗವೆಂದು ಕರೆಯುತ್ತಿದ್ದರು. ಈಗ ಸಿಲಿಕಾನ್‌ ವ್ಯಾಲಿ, ವಿಜ್ಞಾನ ಹಾಗೂ ಆವಿಷ್ಕಾರ ನಗರಿ ಎನ್ನಲಾಗುತ್ತಿದೆ’ ಎಂದು ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

‘ಶಿಕ್ಷಣ ಕ್ಷೇತ್ರದ ಖಾಸಗೀಕರಣ ಬೇಡ ಎಂಬ ಒತ್ತಡವಿತ್ತು. ಭವಿಷ್ಯ ಆಲೋಚಿಸಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ನೀಡಲು ಖಾಸಗಿಯವರಿಗೆ ಅವಕಾಶ ನೀಡಲಾಯಿತು. ಇದು ದೊಡ್ಡ ಬದಲಾವಣೆಗೆ ಕಾರಣವಾಯಿತು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು