ಪೀಣ್ಯ ದಾಸರಹಳ್ಳಿ: ಇಲ್ಲಿನ ಕಾಳಸ್ತ್ರಿ ನಗರದ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಎಸ್. ಮುನಿರಾಜು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಅವರು, ‘ಸರ್ಕಾರಿ ಶಾಲಾ ಕಾಲೇಜಿನಲ್ಲಿ ಓದಿದಂತಹ ಅನೇಕರು ಇಂದು ವಿವಿಧ ಇಲಾಖೆಗಳಲ್ಲಿ ಒಳ್ಳೆಯ ಹುದ್ದೆಗಳಲ್ಲಿ ಇದ್ದಾರೆ. ಅವರಂತೆ ನೀವೂ ಚೆನ್ನಾಗಿ ಓದಿ, ದೇಶಕ್ಕೆ ಕೀರ್ತಿ ತರುವ ಪ್ರತಿಭೆಗಳಾಗಬೇಕು' ಎಂದು ಹಾರೈಸಿದರು.
‘ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದರಿಂದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆಯಂತಹ ವಿಚಾರಗಳನ್ನು ತಿಳಿದುಕೊಳ್ಳಬಹುದು. ಹಾಗಾಗಿ, ಎಲ್ಲರೂ ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಅಮೃತ, ವಾಣಿಶ್ರೀ, ಉಪನ್ಯಾಸಕ ರಾಘವೇಂದ್ರ,ಎಸ್ ಡಿ ಎಂ ಸಿ ಸದಸ್ಯ ಪ್ರಬಾನಾಥ್, ಪಾಲಿಕೆ ಮಾಜಿ ಸದಸ್ಯೆ ಉಮಾದೇವಿ ನಾಗರಾಜು ಕಾರ್ಯಕ್ರಮದಲ್ಲಿ ಹಾಜರಿದ್ದರು.