ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಲಸಿಗರ ಗೃಹಬಂಧನಕ್ಕೆ ತಯಾರಿ

ಸೊಂಡೆಕೊಪ್ಪ ಗ್ರಾಮದ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಬಳಕೆ
Last Updated 17 ನವೆಂಬರ್ 2019, 20:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ಮತ್ತು ಗಡಿಪಾರಿಗಾಗಿ ಕಾಯುತ್ತಿರುವ ವಿದೇಶಿಯರು ಕಾನೂನು ಪ್ರಕ್ರಿಯೆಯ ಮೂಲಕ ತಮ್ಮ ಸ್ವದೇಶಕ್ಕೆ ಮರಳುವವರೆಗೆ ಅವರನ್ನು ಅಲ್ಪಕಾಲದವರೆಗೆ ಬಂಧನದಲ್ಲಿರಿಸುವ ನಿಟ್ಟಿನಲ್ಲಿ ‘ಫಾರಿನರ್ಸ್‌ ಡಿಟೆನ್ಶನ್‌ ಸೆಂಟರ್‌’ ಅನ್ನು ರಾಜ್ಯ ಸರ್ಕಾರ ಶೀಘ್ರವೇ ಆರಂಭಿಸುತ್ತಿದೆ.

ಈ ಕೇಂದ್ರವು 2020ರ ಜನವರಿ 1ರಿಂದ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಸೊಂಡೇಕೊಪ್ಪದ ಗ್ರಾಮದಲ್ಲಿನ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಜೈಲಿನಿಂದ ಬಿಡುಗಡೆಯಾಗುವ ವಿದೇಶಿಯರನ್ನು ತಾತ್ಕಾಲಿಕವಾಗಿ ಈ ಕೇಂದ್ರದಲ್ಲಿ ‘ಸ್ಥಾನಬದ್ಧತೆ’ಯಲ್ಲಿ ಇರಿಸಲಾಗುತ್ತದೆ.

ಈ ಕೇಂದ್ರ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯ 2012ರಲ್ಲೇ ರಾ‌ಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ದಿಸೆಯಲ್ಲಿ ಈ ಕೇಂದ್ರದ ಉಸ್ತುವಾರಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 2013ರ ಮಾರ್ಚ್‌ 25ರಂದು 15 ವಿವಿಧ ಹುದ್ದೆಗಳನ್ನು ಸೃಷ್ಟಿಸಿತ್ತು.

ನವದೆಹಲಿ ಹಾಗೂ ಗೋವಾ ರಾಜ್ಯಗಳಲ್ಲಿ ‘ಫಾರಿನರ್ಸ್‌ ಡಿಟೆನ್ಶನ್‌ ಸೆಂಟರ್‌’ಗಳು ಸ್ಥಳೀಯ ಸಮಾಜ ಕಲ್ಯಾಣ ಇಲಾಖೆಯೇ ನಿಗಾದಲ್ಲಿವೆ. ಇಲ್ಲಿಯೂ ಈ ಕೇಂದ್ರದ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಸೊಂಡೆಕೊಪ್ಪದ ಕೇಂದ್ರದಲ್ಲಿ ಸದ್ಯ ಮೂಲಸೌಕರ್ಯಗಳ ಕೊರತೆಯಿದೆ.

ಈ ಕೇಂದ್ರದ ನಿರ್ವಹಣೆಗಾಗಿ ಒಬ್ಬ ವಾರ್ಡನ್‌, ಒಬ್ಬ ಕಿರಿಯ ವಾರ್ಡನ್‌, ಒಬ್ಬ ಪ್ರಥಮ ದರ್ಜೆ ಸಹಾಯಕ ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಅಗತ್ಯ ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದಲ್ಲಿ ಕಳೆದ ತಿಂಗಳು 20ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ‘ನಮ್ಮ ಮೂಲ ಉದ್ದೇಶ ಹಾಗೂ ಕರ್ತವ್ಯಗಳೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಹಾಗೂ ನಿಯಮಾವಳಿ ರೂಪಿಸುವುದು. ಆದರೆ, ಈ ರೀತಿ ಡಿಟೆನ್ಶನ್‌ ಸೆಂಟರ್‌ಗಳನ್ನೆಲ್ಲಾ ನಿರ್ವಹಿಸುತ್ತಾ ಹೋದರೆ ನಮ್ಮ ಕೆಲಸಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಆಕ್ಷೇಪಕ್ಕೆ ಗೃಹ ಇಲಾಖೆ ಅಧಿಕಾರಿಗಳು, ‘ಪೊಲೀಸ್ ಇಲಾಖೆ ಈ ಕೇಂದ್ರವನ್ನು ನಿರ್ವಹಿಸಿದರೆ ವಿದೇಶಿ ವಲಸಿಗರನ್ನು ಬಂಧನದಲ್ಲಿ ಇರಿಸಿದಂತೆ ಭಾಸವಾಗುತ್ತದೆ. ಅಲ್ಲದೇ ಇವರೆಲ್ಲಾ ಕೋರ್ಟ್‌ಗಳಿಂದ ಶಿಕ್ಷೆಗೆ ಒಳಗಾದ ಬಂಧಿಗಳೇನೂ ಅಲ್ಲ. ಕಾರಾಗೃಹ ಇಲಾಖೆಯಿಂದಲೂ ಈ ಕೇಂದ್ರವನ್ನು ನಡೆಸಲು ಸಾಧ್ಯವಿಲ್ಲ’ ಎಂದು ವಾದಿಸಿದ್ದರು.

ಸುದೀರ್ಘ ಚರ್ಚೆಯ ಬಳಿಕ, ‘ಸಮಾಜ ಕಲ್ಯಾಣ ಇಲಾಖೆ ವತಿಯಿಂದಲೇ ಈ ಕೇಂದ್ರವನ್ನು ನಿರ್ವಹಿಸುವುದು ಸೂಕ್ತ. ಸಮಾಜ ಕಲ್ಯಾಣ ಇಲಾಖೆ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ನಿರ್ವಹಿಸುತ್ತಿದೆ. ಅದೇ ರೀತಿ, ಈ ಕೇಂದ್ರವನ್ನೂ ನಿರ್ವಹಿಸಬೇಕು’ ಎಂದು ಸೂಚಿಸಲಾಗಿತ್ತು.

ಈ ಕೇಂದ್ರದ ಮೇಲ್ವಿಚಾರಣೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್‌ ವರಿಷ್ಠರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ರಾಜ್ಯ ಗುಪ್ತದಳ ಇಲಾಖೆಯಿಂದ ಒಬ್ಬ ಪ್ರತಿನಿಧಿ ಒಳಗೊಂಡಂತೆ ಒಂದು ಸಮಿತಿ ರಚನೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಈ ಕೇಂದ್ರವನ್ನು ನಡೆಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಸ್ಟ್ಯಾಂಡರ್ಸ್‌ ಆಪರೇಟಿಂಗ್‌ ಪ್ರೊಸೀಜರ್) ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯಲು ನಿರ್ದೇಶಿಸಲಾಗಿದೆ.

‘ರಾಜ್ಯದಲ್ಲಿರುವ ವಿದೇಶಿ ಅಕ್ರಮ ವಲಸಿಗರ ಸಂಖ್ಯೆ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಂಕಿಸಂಖ್ಯೆಗಳ ಪ್ರಕಾರ ಸುಮಾರು 23 ಸಾವಿರ ವಿದೇಶಿ ಪ್ರಜೆಗಳು ನಗರದಲ್ಲಿದ್ದಾರೆ. ಅವರಲ್ಲಿ 16 ಸಾವಿರ ಪ್ರಜೆಗಳ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿದ್ದು, ಉಳಿದವರ ಮಾಹಿತಿ ಸಂಗ್ರಹಿಸಬೇಕಿದೆ’ ಎಂದು ಮೂರು ವರ್ಷದ ಹಿಂದೆ ಸರ್ಕಾರ ತಿಳಿಸಿತ್ತು.

‘ರಾಜ್ಯದಲ್ಲಿ ಸದ್ಯ ಒಟ್ಟು 20 ದೇಶಗಳ 800ಕ್ಕೂ ಹೆಚ್ಚು ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ನೆಲೆಸಿದ್ದಾರೆ. ಇವರಲ್ಲಿ 200 ಮಂದಿ ಬಾಂಗ್ಲಾದವರು. ಉಳಿದವರು ಬಹುತೇಕ ಆಫ್ರಿಕಾ ರಾಷ್ಟ್ರಗಳ ನಾಗರಿಕರು’ ಎಂಬುದು ಗೃಹ ಇಲಾಖೆಯ ಉನ್ನತ ಮೂಲಗಳ ಹೇಳಿಕೆ.

‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ’

ಭಾರತ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರ. ಬಾಂಗ್ಲಾ ದೇಶೀಯರೂ ನಮ್ಮ ದೇಶದವರಂತೆಯೇ. ಅವರು ಇಲ್ಲಿ ಬಂದಿರುವುದು ಕೂಲಿ ಮಾಡಿ ಬದುಕಲಿಕ್ಕೆ. ಅವರ ಮೇಲೆ ನಾವು ಕ್ರಮಕ್ಕೆ ಮುಂದಾಗುವುದು ಗುಬ್ಬಿಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಆಗುತ್ತದೆ. ಇದು ಅನಾಗರಿಕ ಸಂಸ್ಕೃತಿ ಎನಿಸುತ್ತದೆ.

ಬಾಂಗ್ಲಾ ದೇಶೀಯರನ್ನು ಓಡಿಸುವುದರ ಹಿಂದೆ ಬಂಡವಾಳಶಾಹಿಗಳ ಹುನ್ನಾರ ಅಡಗಿದೆ. ಕೊಳೆಗೇರಿಗಳನ್ನು ಖಾಲಿ ಮಾಡಿಸಿ ಅಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸುವ ಆಲೋಚನೆ ಅವರದ್ದು. ಒಂದು ವೇಳೆ ಕಳುಹಿಸುವುದೇ ಆಗಿದ್ದರೆ ಮಾನವೀಯತೆ ನೆಲೆಯಲ್ಲೇ ಕ್ರಮ ಕೈಗೊಳ್ಳಬೇಕು.

ಅಮೆರಿಕದಲ್ಲೂ ಅಧ್ಯಕ್ಷ ಟ್ರಂಪ್‌ ಮೆಕ್ಸಿಕೊದ ಪ್ರಜೆಗಳನ್ನು ಓಡಿಸುವ, ಎರಡು ದೇಶಗಳ ನಡುವೆ ಗೋಡೆ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಆದರೆ, ಅದಕ್ಕೆ ಅಲ್ಲಿನ ಸಂಸದರು, ಅಧಿಕಾರಿಗಳು, ಮಾಧ್ಯಮಗಳು ಒಪ್ಪುತ್ತಿಲ್ಲ.ಕೆನಡಾ, ಇಂಗ್ಲೆಂಡ್‌ನಲ್ಲೂ ಸಾವಿರಾರು ಸಿಖ್ಖರು ಅಕ್ರಮವಾಗಿ ನೆಲೆಸಿದ್ದಾರೆ. ಲಕ್ಷಾಂತರ ಜನ ಆಫ್ರಿಕಾದಿಂದ ಭಾರತಕ್ಕೆ ಬರುತ್ತಿದ್ದಾರೆ. ಇದೆಲ್ಲಾ ಜಾಗತೀಕರಣದ ಪ್ರಭಾವ.

-ಬಿ.ಟಿ.ವೆಂಕಟೇಶ್‌,ಹೈಕೋರ್ಟ್‌ ವಕೀಲ

‘ಇವರೆಲ್ಲಾ ರಾಜಕಾರಣಿಗಳ ವೋಟ್ ಬ್ಯಾಂಕ್‌’

ಶಾಸಕರು, ಸಂಸದರು, ಉಪ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸ್ತರಗಳ ಚುನಾಯಿತ ಪ್ರತಿನಿಧಿಗಳು ಈ ವಿಷಯವನ್ನು ಹಲವು ವೇದಿಕೆಗಳಲ್ಲಿ ಪದೇ ಪದೇ ಪ್ರಸ್ತಾಪಿಸುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ನಮ್ಮ ರಾಜಕಾರಣಿಗಳು ಈ ಅಕ್ರಮ ನಿವಾಸಿಗರನ್ನು ತಮ್ಮ ವೋಟ್‌ ಬ್ಯಾಂಕುಗಳಾಗಿ ಪರಿವರ್ತಿಸಿಕೊಂಡಿದ್ದು ಇವರಿಗೆಲ್ಲಾ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ದೊರೆಯುವಂತೆ ನೋಡಿಕೊಂಡಿದ್ದಾರೆ. ಅಕ್ರಮ ವಾಸಿಗಳಿಂದ ದೇಶದ ಭದ್ರತೆಗೆ ಖಂಡಿತಾ ಅಪಾಯ ಬಂದೊದಗಬಲ್ಲುದು.

ಡಾ.ಕೆ.ಬಿ.ವಿಜಯಕುಮಾರ್,ಪಿಐಎಲ್‌ ಅರ್ಜಿದಾರ

‘ನಿಯಂತ್ರಣಾಧಿಕಾರ ಕೇಂದ್ರದ್ದು’

ವಿದೇಶೀಯರ ಕಾಯ್ದೆ–1946 ಪ್ರಕಾರ ವಿದೇಶಿಗರ ಚಟುವಟಿಕೆ ನಿಯಂತ್ರಿಸುವ ಪರಮಾಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಕಾಲ ಸನ್ನಿವೇಶಕ್ಕೆ ತಕ್ಕಂತೆ ಯಾವುದೇ ಪ್ರವಾಸಿಗರನ್ನು ದೇಶದಿಂದ ದೇಶಕ್ಕೆ ಬರಲು ಅನುಮತಿ ನೀಡುವುದು ಹಾಗೂ ಹೊರಹಾಕುವ ಹಕ್ಕು ಸರ್ಕಾರಕ್ಕಿದೆ.

ಭಾರತದಲ್ಲಿ ಯಾವುದೇ ವಿದೇಶಿಗರು ಅನಧಿಕೃತವಾಗಿ ಉಳಿದುಕೊಂಡರೆ ಶಿಕ್ಷಾರ್ಹ ಅಪರಾಧವೂ ಆಗುತ್ತದೆ. ಇದಕ್ಕೆ ನ್ಯಾಯಾಲಯ ಗರಿಷ್ಠ ಐದು ವರ್ಷಗಳವರೆಗೆ ಸಜೆ ವಿಧಿಸಬಹುದಾಗಿದೆ. ವಿದೇಶೀಯರ ಚಲನವಲನದ ಬಗ್ಗೆ ರಸ್ತೆ, ಜಲ, ವಾಯುಯಾನ ಸಾರಿಗೆ ಸಂಸ್ಥೆಗಳು ಮತ್ತು ವಸತಿಗೃಹಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕಾದ ಜವಾಬ್ದಾರಿ ಹೊಂದಿವೆ.

ಎಂ.ಅರುಣ್‌ ಶ್ಯಾಮ್‌, ಹೈಕೋರ್ಟ್‌ ವಕೀಲ

ನಗರದಲ್ಲಿರುವ ಅಕ್ರಮ ವಲಸಿಗರೆಷ್ಟು?

ನಗರದಲ್ಲಿ ನೆಲೆಸಿರುವ ಬಾಂಗ್ಲಾದ ಅಕ್ರಮ ನಿವಾಸಿಗಳನ್ನು ಗಡಿಪಾರು ಮಾಡುವಂತೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಡಾ.ಕೆ.ಬಿ.ವಿಜಯಕುಮಾರ್ 2019ರ ಸೆಪ್ಟೆಂಬರ್ 11ರಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ಅರ್ಜಿಯಲ್ಲಿನ ಮುಖ್ಯಾಂಶಗಳು:

* ವಿದೇಶೀಯರು ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ಅಕ್ರಮವಾಗಿ ನೆಲೆಸುವುದು ‘ವಿದೇಶೀಯರ ಕಾಯ್ದೆ–1946’ಕ್ಕೆ ವಿರುದ್ಧವಾದುದು.

* ಜೆಡಿಎಸ್‌ ಮುಖಂಡರೂ ಆದ ಶಾಸಕ ಎಚ್.ಡಿ.ಕುಮಾರಸ್ವಾಮಿ 2015ರ ಏಪ್ರಿಲ್‌ನಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಪತ್ರ ಬರೆದು, ‘ಬಾಂಗ್ಲಾದಿಂದ ಬಂದಿರುವ 40 ಸಾವಿರಕ್ಕೂ ಹೆಚ್ಚು ನಿವಾಸಿಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು.

* 2016ರ ನವೆಂಬರ್‌ 17ರಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ತಿಳಿಸಿದ್ದಂತೆ 2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.

* 2019ರ ಜುಲೈ 10ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೂ, ಕರ್ನಾಟಕದಲ್ಲಿ 40 ಸಾವಿರ ಬಾಂಗ್ಲಾದ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ರಾಜ್ಯಸಭೆಗೆ ತಿಳಿಸಿದ್ದರು. ಭಾರತೀಯರು ಮತ್ತು ವಲಸಿಗರನ್ನು ಪ್ರತ್ಯೇಕಿಸುವ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಪಟ್ಟಿಯನ್ನು ಬೆಂಗಳೂರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದರು.

* 2010ರಲ್ಲಿ 50 ಬಾಂಗ್ಲಾ ದೇಶೀಯರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಕಾಏಕಿ ಕಣ್ಮರೆಯಾಗಿದ್ದರು.

* 2017ರ ಡಿಸೆಂಬರ್‌ 19ರಂದು ವೈಟ್‌ಫೀಲ್ಡ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ವಿದೇಶೀಯರನ್ನು ಪತ್ತೆ ಹಚ್ಚಲಾಗಿತ್ತು. ಇವರಲ್ಲಿ ಆರು ಜನ ಬಾಂಗ್ಲಾ ಪ್ರಜೆಗಳಾಗಿದ್ದರು. ಇವರೆಲ್ಲಾ ನಕಲಿ ಆಧಾರ್‌ ಗುರುತಿನ ಚೀಟಿಗಳನ್ನು ಹೊಂದಿದ್ದರು.

* 2018ರ ಆಗಸ್ಟ್‌ 9ರಂದು ಅಂದಿನ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, ‘ನಗರದಲ್ಲಿ ನೆಲೆಸಿರುವ ಬಾಂಗ್ಲಾದ ಅಕ್ರಮ ನಿವಾಸಿಗಳನ್ನು ಅವರ ದೇಶಕ್ಕೆ ಕಳುಹಿಸಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದ್ದರು. ಆದರೆ, ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯದ ಪೊಲೀಸರ ಬಳಿ ಯಾವುದೇ ಸೂಕ್ತ ಯೋಜನೆ ಇಲ್ಲ.

* ಅಕ್ರಮ ವಲಸಿಗರನ್ನು ಗುರುತಿಸುವ, ಪ್ರತ್ಯೇಕಿಸುವ ಮತ್ತು ಗಡಿಪಾರು ಮಾಡುವ ದಿಸೆಯಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಆದ್ದರಿಂದ, ಸ್ಥಳೀಯ ಪೊಲೀಸರು ಮತ್ತು ಕಾನೂನು ಬದ್ಧ ಸಕ್ಷಮ ಪ್ರಾಧಿಕಾರಗಳು ಇಂತಹವರನ್ನು ಗುರುತಿಸಿ ಕೂಡಲೇ ಗಡಿಪಾರು ಮಾಡಬೇಕು.

* ಸ್ಥಳೀಯರ ಜೊತೆ ಸುಲಭವಾಗಿ ಬೆರೆಯಬಲ್ಲ ಬಾಂಗ್ಲಾ ದೇಶೀಯರು ಥೇಟ್‌ ಬೆಂಗಾಲಿಗಳಂತೆಯೇ ಕಾಣುವುದರಿಂದ ಅವರನ್ನು ತಕ್ಷಣಕ್ಕೆ ವಿದೇಶಿಯರು ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಭಾರತದ ಸಾಮಾಜಿಕ ಸಂರಚನೆಗೆ ಅಪಾಯ ತಂದೊಡ್ಡಬಲ್ಲದು.

* ಭಾರತದ ಏಕತೆ ಮತ್ತು ಸಮಗ್ರತೆ ಧಕ್ಕೆ ಉಂಟು ಮಾಡುವ ದೇಶ ವಿರೋಧಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಬಾಂಗ್ಲಾ ಪ್ರಜೆಗಳನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಹಲವು ಪ್ರಕರಣಗಳಲ್ಲಿ ಬಂಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.

* ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳಿಂದ ನಕಲಿ ನೋಟುಗಳ ಚಲಾವಣೆ, ಅತ್ಯಾಚಾರ, ಮಹಿಳೆಯರಿಗೆ ಕಿರುಕುಳ, ದರೋಡೆ, ಕಳವು, ಸಾರ್ವಜನಿಕ ಸ್ಥಳಗಳಲ್ಲಿ ಸುಲಿಗೆ ಮಾಡುವುದು ಮತ್ತು ಮಾದಕ ದ್ರವ್ಯಗಳನ್ನು ಮಾರುವುದು ಹೆಚ್ಚುತ್ತಿದೆ.

* ಅಕ್ರಮ ವಲಸಿಗರ ಕುರಿತಂತೆ ಪೊಲೀಸರು ಹೊಂದಿರುವ ಅಂಕಿ ಅಂಶಗಳನ್ನು ಹೈಕೋ‌ರ್ಟ್‌ಗೆ ಒಪ್ಪಿಸಬೇಕು ಮತ್ತು ಹೈಕೋರ್ಟ್, ಈ ವಿವರಗಳನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT