‘ಸಾರಿ ಮಿಸ್‌, ಲೇಟ್‌ ಮಾಡಲ್ಲ’!

7
ತಡವಾಗಿ ಶಾಲೆಗೆ ಬರುವ ಮಕ್ಕಳಲ್ಲಿ ಶಿಸ್ತು ಮೂಡಿಸುವುದೋ ಹಾಗೇ ಬಿಡುವುದೋ: ಶೈಕ್ಷಣಿಕ ವಲಯದ ಜಿಜ್ಞಾಸೆ

‘ಸಾರಿ ಮಿಸ್‌, ಲೇಟ್‌ ಮಾಡಲ್ಲ’!

Published:
Updated:
Deccan Herald

ಬೆಂಗಳೂರು: ಎಷ್ಟೋ ಮಕ್ಕಳು ಆಟೊದಲ್ಲೋ, ವ್ಯಾನ್‌ನಲ್ಲೋ, ಅಪ್ಪನ ಬೈಕ್‌ನಲ್ಲೋ, ಅಮ್ಮನ ಸ್ಕೂಟಿಯಲ್ಲೋ ಅಥವಾ ಬಿಎಂಟಿಸಿ ಬಸ್‌ನಲ್ಲೋ ಶಾಲೆಗೆ ಬಂದು ಮುಟ್ಟುವಷ್ಟರಲ್ಲಿ ಅದಾಗಲೇ ಪ್ರಾರ್ಥನೆ ಶುರುವಾಗಿರುತ್ತದೆ. ಏದುಸಿರು ಬಿಡುತ್ತಲೇ ಓಡುತ್ತಾ ಬಂದರೂ ಪ್ರಾರ್ಥನೆ ತಪ್ಪಿಸಿಕೊಂಡವರೆಲ್ಲ ಗೇಟ್‌ನಲ್ಲೇ ನಿಲ್ಲಬೇಕಾಗುತ್ತದೆ.

ನಗರದ ಪ್ರತಿಶಾಲೆಯ ಮುಂದೆ ನಿತ್ಯ ಬೆಳಿಗ್ಗೆ ಕಾಣುವ ಚಿತ್ರಣ ಇದು. ಗೇಟ್‌ನಲ್ಲಿ ನಿಂತ ಶಿಕ್ಷಕಿಯರಿಗೆ, ‘ಸಾರಿ ಮಿಸ್‌, ಇನ್ಮೇಲೆ ಟೈಮ್‌ಗೆ ಸರಿಯಾಗಿ ಬರ್ತೀನಿ’ ಎಂದು ಮಕ್ಕಳು ಗೋಗರೆಯುವ ನೋಟ ಕೂಡ ಮಾಮೂಲಿ ಆಗಿರುತ್ತದೆ.

ತಡವಾಗಿ ಬಂದ ಮಕ್ಕಳನ್ನು ಕೆಲವು ಶಾಲೆಗಳಲ್ಲಿ ಗೇಟ್‌ನಿಂದ ಹೊರಗೆ ನಿಲ್ಲಿಸಿ, ಶಿಕ್ಷಿಸಿದರೆ, ಇನ್ನು ಕೆಲವು ಶಾಲೆಗಳಲ್ಲಿ ಮೈದಾನವನ್ನು ಪೂರ್ತಿ 2–3 ಸುತ್ತು ಓಡುವ ‘ಶಿಕ್ಷೆ’ಯನ್ನು ನೀಡಲಾಗುತ್ತದೆ ಎಂಬ ದೂರುಗಳು ಸಾಮಾನ್ಯ. ಇಂತಹ ದೂರುಗಳು ಕೆಲವೊಮ್ಮೆ ಶಾಲೆಯ ಅಂಗಳವನ್ನೂ ದಾಟಿ, ನಗರದಲ್ಲಿ ದೊಡ್ಡ ಸುದ್ದಿಯಾಗುವುದುಂಟು. ಬಾಲ್ಡ್‌ವಿನ್‌ ಶಾಲೆಯಲ್ಲಿ ಇತ್ತೀಚೆಗೆ ತಡವಾಗಿ ಬಂದ ಮಕ್ಕಳನ್ನು ಹೊರಗೆ ನಿಲ್ಲಿಸಿದ್ದ ಪ್ರಕರಣ ಈಗ ಅಂತಹ ಚರ್ಚೆಗೆ ಮತ್ತೆ ಗ್ರಾಸ ಒದಗಿಸಿದೆ.

ತಡವಾಗಿ ಬರುವ ಮಗುವಿಗೆ ಶಿಸ್ತು ಕಲಿಸುವ ಮನಸ್ಥಿತಿ ಶಾಲೆಯ ಶಿಕ್ಷಕರದಾದರೆ, ‘ದಟ್ಟಣೆ ಹೆಚ್ಚಿದ್ದರೆ, ತಡವಾಗುವುದು ಸಹಜ’ ಎಂಬ ಉತ್ತರ ಪೋಷಕರದು. ಈ ಮಧ್ಯೆ ‘ಒಂದು ಮಗು ತಡಮಾಡಿದರೆ, ಮುಂದಿನ ಎಲ್ಲಾ ಟ್ರಿಪ್‌ಗಳೂ ವಿಳಂಬವಾಗುತ್ತವೆ. ನಮ್ಮ ಕೈಯಲ್ಲಿ ಏನಿಲ್ಲ’ ಎಂದು ಶಾಲಾ ವಾಹನಗಳ ಚಾಲಕರು ಈ ಜಂಜಾಟದಿಂದ ಹೊರಗುಳಿಯುತ್ತಾರೆ.

ಆದರೆ, ಇಲ್ಲಿ ತಪ್ಪು ಯಾರದ್ದೇ ಆಗಿದ್ದರೂ ಸರಿಯಾದ ಸಮಯಕ್ಕೆ ಶಾಲೆಗೆ ಮುಟ್ಟದಿದ್ದರೆ, ಅದರ ಪರಿಣಾಮ ಎದುರಿಸುವುದು ಮಾತ್ರ ಮಕ್ಕಳು. ತಡವಾಗಿ ಹೋಗುವ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ, ಹೊಡೆತ ತಿನ್ನುವ, ಮೈದಾನದ ತುಂಬಾ ಓಡುವ ಶಿಕ್ಷೆಗೆ ಗುರಿಯಾಗುತ್ತವೆ. 

ಶಾಲೆಗಳು ನೀಡುವ ಈ ರೀತಿಯ ನಕಾರಾತ್ಮಕ ಶಿಕ್ಷೆಗಳು ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಮಕ್ಕಳಿಗೆ, ವಿಶೇಷವಾಗಿ ಅವರ ಪಾಲಕರಿಗೆ, ತಪ್ಪುಗಳನ್ನು ವಿವರಿಸಿ ಹೇಳಬೇಕೇ ಹೊರತು, ಶಿಕ್ಷೆ ನೀಡಬಾರದು. ಶಿಸ್ತು ಕಲಿಸಲು ಸಾಕಷ್ಟು ಮಾರ್ಗಗಳಿವೆ ಎನ್ನುತ್ತಾರೆ ಶಿಕ್ಷಣತಜ್ಞರು.

‘ಮಕ್ಕಳ ಹಕ್ಕುಗಳ ಕಾಯ್ದೆಯ ಸೆಕ್ಷನ್‌ 17ರ ಪ್ರಕಾರ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ ನೀಡಬಾರದು. ಆದರೆ, ಶಾಲೆಗಳು ಎಲ್ಲಾ ರೀತಿಯಿಂದಲೂ ಮಕ್ಕಳನ್ನು ಪೀಡಿಸುತ್ತಿವೆ. ಕತ್ತಲೆ ಕೋಣೆಯಲ್ಲಿ ಕೂಡಿಹಾಕುವುದು, ಗೇಟ್‌ ಆಚೆ ನಿಲ್ಲಿಸುವುದು, ಹೊಡೆಯುವುದು... ಹೀಗೆ ನಾನಾ ಶಿಕ್ಷೆಯನ್ನು ನೀಡುತ್ತವೆ’ ಎಂದು ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಬೇಸರ ವ್ಯಕ್ತಪಡಿಸುತ್ತಾರೆ.

ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನೀನಾ ಪಿ.ನಾಯಕ್‌, ‘ಶಾಲೆಗೆ ಮಕ್ಕಳು ತಡವಾಗಿ ಬಾರದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಶಾಲೆಗೆ ತಡವಾಗಿ ಬರುತ್ತಾರೆ ಎಂದು ಅವರನ್ನು ಗೇಟಿನಿಂದ ಆಚೆ ನಿಲ್ಲಿಸುವುದು, ಬೇರೆ ಮಕ್ಕಳ ಎದುರು ಅವಮಾನ ಮಾಡುವುದು ಸರಿಯಲ್ಲ’ ಎಂದು ಪ್ರತಿಪಾದಿಸುತ್ತಾರೆ.

‘ಖಂಡಿತವಾಗಿ ಮಕ್ಕಳು ಶಿಸ್ತು ಕಲಿಯಬೇಕು. ಅದನ್ನು ತಿಳಿಸುವುದಕ್ಕೆ ನಾನಾ ಮಾರ್ಗಗಳಿವೆ. ಮಕ್ಕಳು ಎಷ್ಟು ತಡವಾಗಿ ಬರುತ್ತಾರೆ, ಅಷ್ಟು ಸಮಯ ಶಾಲೆಯಲ್ಲಿಯೇ ಹೆಚ್ಚುವರಿಯಾಗಿ ಇರಿಸಿಕೊಂಡು ಉದ್ಯಾನಕ್ಕೆ ನೀರುಣಿಸುವುದು ಇಲ್ಲವೆ ಯಾವುದಾದರೂ ಪಾಠ ಓದುವಂತಹ ಕೆಲಸ ಕೊಡಬೇಕು. ಸ್ನೇಹಿತರ ಜೊತೆಗೆ ತಾನೂ ಹೋಗಬೇಕು ಎನ್ನುವ ಮನಸ್ಸು ಮಕ್ಕಳಿಗಿರುತ್ತದೆ. ತಡವಾಗಿ ಬಂದರೆ ತಾನೊಬ್ಬನೇ ಕುಳಿತುಕೊಳ್ಳಬೇಕಲ್ಲ ಎನ್ನುವುದು ಅವರ ಮನಸ್ಸಿಗೆ ಬಂದರೆ ತಾನಾಗಿಯೇ ಶಿಸ್ತು ಕಲಿಯುತ್ತಾರೆ’ ಎಂದು ಹೇಳುತ್ತಾರೆ.

‘ಬೆಳಿಗ್ಗೆ 8.20ರೊಳಗೆ ಶಾಲೆಯಲ್ಲಿರಬೇಕು ಎಂಬ ನಿಯಮವಿದೆ. ಮಕ್ಕಳು ಶಿಸ್ತು ಕಲಿಯಬೇಕು ಎನ್ನುವುದಕ್ಕಾಗಿ ಈ ನಿಯಮ ಮಾಡಿದ್ದೇವೆ. ತಡವಾಗಿ ಬರುವ ಮಕ್ಕಳನ್ನು ಕರೆದು ಸಮಯಕ್ಕೆ ಸರಿಯಾಗಿ ಬರಬೇಕೆಂದು ಬುದ್ಧಿ ಹೇಳುತ್ತೇವೆ. ಆದರೂ ಸರಿಯಾಗಲಿಲ್ಲ ಎಂದಾದರೆ ಪೋಷಕರನ್ನು ಕರೆದು ಎಚ್ಚರಿಕೆ ನೀಡುತ್ತೇವೆ’ ಎಂದು ಬಾಲ್ಡ್‌ವಿನ್‌ ಶಾಲೆಯ ಪ್ರಾಂಶುಪಾಲ ಆಂಡ್ರ್ಯೂ ಡಿಸೋಜ ಮಾಹಿತಿ ನೀಡುತ್ತಾರೆ.

‘ಮಕ್ಕಳಿಗಾಗಿಯೇ ಬೆಳಿಗ್ಗೆ ಐದಕ್ಕೆ ಎದ್ದು, ಅವರಿಗೆ ತಿಂಡಿ ಮಾಡುವುದು, ಸಮವಸ್ತ್ರ ಇಸ್ತ್ರಿ ಮಾಡುವುದು, ಶೂ, ಸಾಕ್ಸ್‌, ಟೈ, ಬೆಲ್ಟ್‌, ಪುಸ್ತಕಗಳನ್ನು ಜೋಡಿಸುವಷ್ಟರಲ್ಲಿ ಏಳು ಗಂಟೆ ಆಗಿ ಹೋಗಿರುತ್ತದೆ. ಮಕ್ಕಳು ಸ್ನಾನ ಮಾಡಿ ತಯಾರಾಗುವಷ್ಟರಲ್ಲಿ ಆಟೊ ಬಂದಿರುತ್ತದೆ. 8.25ರ ಒಳಗೆ ಶಾಲೆಯಲ್ಲಿರಬೇಕೆಂದರೆ, ಮುಕ್ಕಾಲು ಗಂಟೆ ಮುಂಚಿತವಾಗಿಯೇ ಮನೆಯಿಂದ ಹೊರಟಿರಬೇಕು. ಒಂದೊಂದು ದಿನ ತಡವಾಗುತ್ತದೆ. ಆಗೆಲ್ಲ ಶಿಕ್ಷಕರು, ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಪೋಷಕಿ ಲಲಿತಾ ದಿನಚರಿಯನ್ನು ತೆರೆದಿಡುತ್ತಾರೆ.

‘ಎರಡು–ಮೂರು ಟ್ರಿಪ್‌ನಲ್ಲಿ ಮಕ್ಕಳನ್ನು ಶಾಲೆಗೆ ಬಿಡುತ್ತೇವೆ. ಒಂದು ಟ್ರಿಪ್‌ನಲ್ಲಿ ಯಾವುದಾದರೂ ಮಗು ಐದು ನಿಮಿಷ ತಡ ಮಾಡಿದರೆ ಮುಂದಿನ ಎಲ್ಲಾ ಟ್ರಿಪ್‌ಗಳೂ ತಡವಾಗುತ್ತವೆ. ಆಗ ಅನಿವಾರ್ಯವಾಗಿ ಶಾಲೆಗೆ ಹೋಗುವಷ್ಟರಲ್ಲಿ ಸಮಯ ಮೀರಿರುತ್ತದೆ’ ಎಂದು ಶಾಲಾ ಆಟೊ ಚಾಲಕರು ಹೇಳುತ್ತಾರೆ.

**

‘ಸರ್ಕಾರಿ ಶಾಲೆಯಲ್ಲಿಯೂ ಶಿಕ್ಷೆ’

ಕೆಲ ದಿನಗಳ ಹಿಂದಷ್ಟೆ ನೆಲಮಂಗಲ ಸಮೀಪದ ಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಡವಾಗಿ ಬಂದ ಮೂರನೇ ತರಗತಿ ವಿದ್ಯಾರ್ಥಿಗಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದರು. ಇದಕ್ಕೆ ಪೋಷಕರಿಂದ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು.

**

ಮಕ್ಕಳನ್ನು ದಂಡಿಸುವ ವಿಚಾರಗಳು

* ಮಗು ಶಾಲೆಗೆ ತಡವಾಗಿ ಬಂದರೆ

* ತೊಟ್ಟಿರುವ ಸಮವಸ್ತ್ರ, ಟೈ, ಬೆಲ್ಟು, ಶೂ ಮತ್ತು ಕಾಲುಚೀಲಗಳು ಕೊಳಕಾಗಿದ್ದರೆ

* ತಲೆಗೂದಲನ್ನು ಸರಿಯಾಗಿ ಬಾಚಿರದಿದ್ದರೆ

* ಪುಸ್ತಕಗಳನ್ನು ಹರಿದುಕೊಂಡಿದ್ದರೆ

* ಹೋಂವರ್ಕ್‌ ಮಾಡಿರದಿದ್ದರೆ

**

ಅಂಕಿ–ಅಂಶ

2,700: ನಗರದಲ್ಲಿರುವ ಒಟ್ಟು ಖಾಸಗಿ ಶಾಲೆಗಳು

11.36 ಲಕ್ಷ: ನಗರದ ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿನ ಮಕ್ಕಳ ದಾಖಲಾತಿ 

1.5 ಲಕ್ಷ: ನಗರದಲ್ಲಿರುವ ಆಟೊಗಳು

5,500: ನಗರದಲ್ಲಿರುವ ಶಾಲಾ ವಾಹನಗಳು

**

ಬಾಲ್ಡ್‌ವಿನ್‌ ಶಾಲಾ ಪ್ರಕರಣದ ನಂತರ ಅದೇ ವಿಷಯಕ್ಕೆ ಸಂಬಂಧಿಸಿದಂತೆ 9 ಪೋಷಕರು ದೂರು ನೀಡಿದ್ದಾರೆ. ಮಕ್ಕಳ ಹಕ್ಕಗಳ ಆಯೋಗದಲ್ಲಿ ದೂರು ದಾಖಲಿಸಿದ್ದೇವೆ
–ನಾಗಸಿಂಹ ಜಿ.ರಾವ್‌, ಮಕ್ಕಳ ಹಕ್ಕುಗಳ ಹೋರಾಟಗಾರ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !