ಮಂಗಳವಾರ, ಅಕ್ಟೋಬರ್ 20, 2020
25 °C
ಎರಡು–ಮೂರು ಕಂತು ಒಮ್ಮೆಗೇ ಪಾವತಿಸಲು ಒತ್ತಾಯ * ವರ್ಗಾವಣೆ ಪತ್ರ ನೀಡುವ ಬೆದರಿಕೆ

ಶಾಲಾ ಶುಲ್ಕ: ಇಕ್ಕಟ್ಟಿನಲ್ಲಿ ಪೋಷಕರು

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದ್ಯಾರ್ಥಿಗಳ ದಾಖಲಾತಿ ವೇಳೆ ಎರಡು ಮೂರು ಕಂತುಗಳ ಶುಲ್ಕವನ್ನು ಒಟ್ಟಿಗೇ ಕಟ್ಟಬೇಕು ಎಂದು ಖಾಸಗಿ ಶಾಲೆಗಳು ಒತ್ತಡ ಹೇರುತ್ತಿವೆ. ಶುಲ್ಕ ಪಾವತಿಸದವರಿಗೆ ಆನ್‌ಲೈನ್‌ ತರಗತಿಗೆ ಅವಕಾಶ ನೀಡುತ್ತಿಲ್ಲ, ವರ್ಗಾವಣೆ ಪ್ರಮಾಣಪತ್ರ (ಟಿ.ಸಿ) ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. 

‘ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕವನ್ನು ಪಡೆಯುವಂತೆ ಸರ್ಕಾರ ಸೂಚನೆ ನೀಡಿದೆ. ಶುಲ್ಕ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರಬಾರದು ಎಂದೂ ಹೇಳಿದೆ. ಆದರೆ, ಶುಲ್ಕ ಪಾವತಿಸಿಸದಿದ್ದೆ ಟಿ.ಸಿ ಕೊಟ್ಟು ಕಳಿಸುತ್ತೇವೆ ಎಂದು ಶಾಲಾ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪೋಷಕರೊಬ್ಬರು ದೂರಿದರು.

‘ಮಹಾಲಕ್ಷ್ಮಿ ಲೇಔಟ್‌ನ ಲಿಟಲ್‌ ಲಿಲ್ಲೀಸ್ ಶಾಲೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದಾರೆ. ಜೂನ್‌ನಿಂದ ಆಗಸ್ಟ್‌ ವರೆಗೆ ಮೊದಲ ಕಂತು ಪಾವತಿಸಿದ್ದೇವೆ. ಆಗಲೇ, ಎರಡನೇ ಕಂತು ಕೇಳುತ್ತಿದ್ದಾರೆ. ಇಬ್ಬರು ಮಕ್ಕಳ ಎರಡು ಕಂತುಗಳನ್ನು ಒಮ್ಮೆಲೆ ಕಟ್ಟಲು ಕಷ್ಟವಾಗುತ್ತದೆ. ತಿಂಗಳಿಗೆ ಇಂತಿಷ್ಟು ಪಾವತಿಸಲು ಅವಕಾಶ ಕೇಳಿದರೂ ಶಾಲೆಯವರು ಕೊಡುತ್ತಿಲ್ಲ’ ಎಂದು ಪೋಷಕಿ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಶುಲ್ಕ ಕಟ್ಟಿದ ವಿದ್ಯಾರ್ಥಿಗಳಿಗೆ ಮಾತ್ರ ಪಾಠದ ವಿಡಿಯೊಗಳು ಮತ್ತು ನೋಟ್ಸ್‌ ಕಳಿಸಲಾಗುತ್ತಿದೆ. ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನು ‘ಬ್ಲಾಕ್‌’ ಮಾಡಲಾಗುತ್ತಿದೆ. ಪಠ್ಯಕ್ರಮ ದಲ್ಲಿ ಶೇ 20ರಷ್ಟು ಪಾಠಗಳೂ ಪೂರ್ಣಗೊಂಡಿಲ್ಲ’ ಎಂದು ಅವರು ವಿವರಿಸಿದರು. 

‘ಸರ್ಕಾರ ಹೇಳಿದಂತೆ ನಾಲ್ಕು ಕಂತುಗಳಲ್ಲಿಯೇ ಶುಲ್ಕ ಪಡೆಯುತ್ತಿದ್ದೇವೆ. ಬಹಳಷ್ಟು ಪೋಷಕರು ಮೊದಲ ಕಂತನ್ನೂ ಕಟ್ಟಿಲ್ಲ. ಶಿಕ್ಷಕರಿಗೆ ವೇತನ ಪಾವತಿಸಬೇಕಾಗಿದೆ. ಹಾಗಾಗಿ ಶುಲ್ಕ ಪಾವತಿಸಿದರೆ ಅನುಕೂಲವಾಗುತ್ತದೆ. ಸೆಪ್ಟೆಂಬರ್‌ನಿಂದ ಎರಡನೇ ಕಂತು ಪಾವತಿಸಬೇಕು. ಎರಡನೇ ಕಂತು ಪಾವತಿಸಲು ಸಮಯ ನೀಡುತ್ತೇವೆ’ ಎಂದು ಲಿಟಲ್‌ ಲಿಲ್ಲೀಸ್‌ ಶಾಲೆಯ ಸಿಬ್ಬಂದಿ ಹೇಳಿದರು. 

‘ಪಠ್ಯಕ್ರಮದಂತೆ ಪಾಠಗಳು ನಡೆ ಯುತ್ತಿವೆ. ಎಲ್ಲ ವಿದ್ಯಾರ್ಥಿಗಳಿಗೂ ವಾಟ್ಸ್‌ಆ್ಯಪ್‌ ಮೂಲಕ ವಿಡಿಯೊ ಮತ್ತು ನೋಟ್ಸ್‌ ಕಳಿಸಲಾಗುತ್ತಿದೆ’ ಎಂದರು. 

‘ಬೆಂಗಳೂರು ದಕ್ಷಿಣದ ಶೈಕ್ಷಣಿಕ ಜಿಲ್ಲೆಯಲ್ಲಿಯೂ ಹಲವು ಶಾಲೆಗಳ ವಿರುದ್ಧ ದೂರು ಬಂದಿದೆ. ಆರ್ಕಿಡ್‌ ಶಾಲೆಗಳ ವಿರುದ್ಧ ಹಲವು ದೂರುಗಳು ಬಂದಿದ್ದವು. ಶುಲ್ಕ ಪಾವತಿಸಲು ಒತ್ತಡ ಹೇರಬಾರದು, ಶುಲ್ಕದಲ್ಲಿ ಕಡಿಮೆ ಮಾಡಿಕೊಳ್ಳಿ ಎಂದು ನಾನೇ ಮನವಿ ಮಾಡಿದರೂ ಕೇಳಲಿಲ್ಲ. ಈ ಶಾಲೆಗಳ ಪರವಾನಗಿ ರದ್ದುಗೊಳಿಸುವಂತೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದು ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆ ಉಪನಿರ್ದೇಶಕ ಅಶ್ವತ್ಥನಾರಾಯಣ ತಿಳಿಸಿದರು. 

‘ಆದೇಶದಲ್ಲಿ ಅಸ್ಪಷ್ಟತೆ’
‘ನಾಲ್ಕು ಕಂತುಗಳಲ್ಲಿ ಶುಲ್ಕ ತೆಗೆದುಕೊಳ್ಳಿ ಎಂದು ಸರ್ಕಾರ ಆದೇಶ ಮಾಡಿದೆ. ಕೇವಲ ಬೋಧನಾ ಶುಲ್ಕವೋ, ಎಲ್ಲ ಶುಲ್ಕಗಳ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಳ್ಳಬೇಕೋ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಲ್ಲದೇ, ಕಳೆದ ವರ್ಷದಷ್ಟೇ ಶುಲ್ಕ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಹೆಚ್ಚು ಶುಲ್ಕ ತೆಗೆದುಕೊಂಡ ಬಗ್ಗೆ ದೂರು ಬಂದ ಶಾಲೆಯವರನ್ನು ವಿಚಾರಿಸಿದರೆ, ಕಳೆದ ವರ್ಷವೂ ಇಷ್ಟೇ ಶುಲ್ಕ ತೆಗೆದುಕೊಂಡಿದ್ದೆವು ಎನ್ನುತ್ತಾರೆ. ಆದೇಶದಲ್ಲಿನ ಅಸ್ಪಷ್ಟತೆಯಿಂದ ಈ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಆದೇಶ ಮಾಡಿದ್ದರೂ ಹೆಚ್ಚು ಗೊಂದಲಗಳಿರುತ್ತಿರಲಿಲ್ಲ’ ಎಂದು ಅವರು ಹೇಳಿದರು. 

‘ಕೆಲವು ಖಾಸಗಿ ಶಾಲೆಗಳೂ ಸಂಕಷ್ಟದಲ್ಲಿವೆ. ಕಟ್ಟಡದ ಬಾಡಿಗೆ ಪಾವತಿಸಲಾಗದೆ ಬಾಗಿಲು ಮುಚ್ಚುತ್ತಿವೆ. ಶಿಕ್ಷಕರೂ ವೇತನವಿಲ್ಲದೆ ಕಷ್ಟದಲ್ಲಿದ್ದಾರೆ. ಪೋಷಕರ ಹಿತವನ್ನು ಕಾಪಾಡುವುದಕ್ಕೆ ನಾವು ಆದ್ಯತೆ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು