ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಆನ್‌ಲೈನ್‌ ತರಗತಿ ಸ್ಥಗಿತ: ರುಪ್ಸ

Last Updated 20 ಡಿಸೆಂಬರ್ 2020, 19:25 IST
ಅಕ್ಷರ ಗಾತ್ರ

ಬೆಂಗಳೂರು: ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘವು (ರುಪ್ಸ) ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ, ಸೋಮವಾರದಿಂದ (ಡಿ.21) ಆನ್‌ಲೈನ್‌ ತರಗತಿ ನಡೆಸುವುದಿಲ್ಲ ಎಂದು ಹೇಳಿದೆ.

‘ಕೋವಿಡ್ ನೆಪವೊಡ್ಡಿ ಶಾಲೆಗಳ ಮಾನ್ಯತೆ ನವೀಕರಿಸಲು ನಿರಾಕರಿಸಲಾಗುತ್ತಿದೆ. ಇದರಿಂದ ಸಾವಿರಾರು ಮಕ್ಕಳ ಭವಿಷ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನ ಕೆಲವು ಆದೇಶಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಇದನ್ನು ವಿರೋಧಿಸಿ ಸಂಘದ 12 ಸಾವಿರ ಸದಸ್ಯ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಲಿವೆ’ ಎಂದು ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರದ ದ್ವಂದ್ವ ನೀತಿಗಳಿಂದ ಸುಮಾರು 10 ಸಾವಿರ ಶಾಲೆಗಳ ಶಿಕ್ಷಕರು ಬೀದಿ ಪಾಲಾಗಬೇಕಾಗಿದೆ. ಪ್ರತಿಭಟನೆಯ ಮೊದಲ ಹಂತವಾಗಿ ಆನ್‌ಲೈನ್‌ ತರಗತಿ ಸ್ಥಗಿತಗೊಳಿಸುವ ನಿರ್ಧಾರ ಮಾಡಿದ್ದೇವೆ. ನಮ್ಮ ಬೇಡಿಕೆಗಳಿಗೆ ಸರ್ಕಾರವು ಮುಂದೆಯೂ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಅವರು ಹೇಳಿದ್ದಾರೆ.

ಬೆಂಬಲ ಇಲ್ಲ:ಖಾಸಗಿ ಶಿಕ್ಷಣ ಸಂಸ್ಥೆಗಳ ಇತರೆ ಸಂಘಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿಲ್ಲ.ಕರ್ನಾಟಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌), ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮ) ಮತ್ತು ಸಿಬಿಎಸ್‌ಇ ಶಾಲೆಗಳ ಸಂಘಗಳು, ತಮ್ಮ ಸದಸ್ಯ ಶಾಲೆಗಳಲ್ಲಿ ಎಂದಿನಂತೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಲಿವೆ ಎಂದು ಹೇಳಿವೆ.

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ‘ಆನ್‌ಲೈನ್‌ ತರಗತಿ ಸ್ಥಗಿತಕ್ಕೆ ಸಂಬಂಧಿಸಿದಂತೆ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ರುಪ್ಸದ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ. ನಾವು ಆನ್‌ಲೈನ್‌ ತರಗತಿ ಸ್ಥಗಿತಗೊಳಿಸುವುದಿಲ್ಲ. ಸರ್ಕಾರ ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಿದರೆ, ಕೋವಿಡ್‌ ಮಾರ್ಗಸೂಚಿಯನ್ವಯ ತರಗತಿಗಳನ್ನು ನಡೆಸಲು ನಾವು ಸಿದ್ಧ ಇದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT