ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೂಲಸೌಕರ್ಯ ಇಲ್ಲದ ಉಪನೋಂದಣಾಧಿಕಾರಿ ಕಚೇರಿ

Last Updated 17 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ನಿಲುಗಡೆಗೆ ಜಾಗವಿಲ್ಲ, ಕುಡಿಯುವ ನೀರಿನ ಸೌಕರ್ಯ ಇಲ್ಲ, ಶೌಚಾಲಯ ಇಲ್ಲ, ಸಾರಿಗೆ ಸಂಪರ್ಕವಂತೂ ಇಲ್ಲವೇ ಇಲ್ಲ...

ಇದು ಚೋಳನಾಯಕನಹಳ್ಳಿಯಲ್ಲಿನ ಹೆಬ್ಬಾಳ ಉಪನೋಂದಣಾಧಿಕಾರಿ ಕಚೇರಿಯ ಚಿತ್ರಣ. ಇಲ್ಲಿನ ಬಾಡಿಗೆ ಕಟ್ಟಡವೊಂದರಲ್ಲಿ ಈ ಕಚೇರಿ ಇದೆ. ಆಸ್ತಿ ನೋಂದಣಿ, ವಿವಾಹ ನೋಂದಣಿಗಾಗಿ ನಿತ್ಯ ಈ ಕಚೇರಿಗೆ ನೂರಾರು ಜನರು ಬರುತ್ತಾರೆ. ರಸ್ತೆ ಬದಿಯಲ್ಲಿರುವ ಕಚೇರಿ ಬಳಿ ವಾಹನ ನಿಲುಗಡೆಗೆ ಜಾಗವೇ ಇಲ್ಲ.

ಸರ್ವರ್ ಸಮಸ್ಯೆ ಹಾಗೂ ದಾಖಲೆಗಳ ಸಂಗ್ರಹ ವಿಳಂಬದಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆ ದಿನಗಟ್ಟಲೆ ಹಿಡಿಯುತ್ತದೆ. ಬೆಳಿಗ್ಗೆ ಕಚೇರಿಗೆ ಬಂದರೆ ಆಸ್ತಿ ನೋಂದಣಿ ಕಾರ್ಯ ಮುಗಿಸುವಷ್ಟರಲ್ಲಿ ಸಂಜೆಯೇ ಆಗುತ್ತದೆ. ಬೆಳಿಗ್ಗೆಯಿಂದ ಸಂಜೆ ತನಕ ಕಾಯಬೇಕಾದ ನಾಗರಿಕರಿಗೆ ವಾಹನ ನಿಲುಗಡೆಗೆ ನಿಗದಿತ ಜಾಗವೇ ಇಲ್ಲ. ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ಮೊದಲೇ ಕಿರಿದಾದ ರಸ್ತೆಯಲ್ಲಿ ಬೇರೆ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಡಕಾಗುತ್ತಿದೆ. ರಸ್ತೆ ಬದಿಯಲ್ಲೂ ಕೆಲವೇ ವಾಹನಗಳ ನಿಲುಗಡೆಗೆ ಅವಕಾಶ ಇರುವುದರಿಂದ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಕಚೇರಿಗೆ ಬರುವ ಜನ ಪರದಾಡಬೇಕಾಗಿದೆ.

‘ಕಚೇರಿ ಇರುವ ರಸ್ತೆಗೆ ಬಿಎಂಟಿಸಿ ಬಸ್‌ ಬರುವುದಿಲ್ಲ. ಬಸ್‌ನಲ್ಲಿ ಬರುವ ನಾಗರಿಕರು ಎರಡು ಕಿಲೋ ಮೀಟರ್ ದೂರದಲ್ಲೇ ಇಳಿದು ನಡೆದುಕೊಂಡೇ ಕಚೇರಿಗೆ ಬರಬೇಕಾದ ಸ್ಥಿತಿ ಇದೆ. ಜನರಿಗೆ ಮೂಲಭೂತವಾಗಿ ಬೇಕಾಗಿರುವ‌ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಕರ್ಯ ಕಚೇರಿಯಲ್ಲಿ ಇಲ್ಲ. ಇರುವ ಶೌಚಾಲಯವು ನಿರ್ವಹಣೆ ಇಲ್ಲದೆ ಹಾಳಾಗಿ ಕಸ ಸುರಿಯುವ ಜಾಗವಾಗಿ ಮಾರ್ಪಟ್ಟಿದೆ. ಪಕ್ಕದಲ್ಲೇ ಹೋಟೆಲ್ ಮತ್ತು ಗುಜರಿ ಅಂಗಡಿಗಳಿದ್ದು, ಅಲ್ಲಿನ ಕಸ ಕೂಡ ಈ ಕಚೇರಿ ಆವರಣ ಸೇರುತ್ತಿದೆ’ ಎನ್ನುತ್ತಾರೆ ಸ್ಥಳೀಯರು.

‘ಎರಡನೇ ಮಹಡಿಯಲ್ಲಿರುವ ಈ ಕಟ್ಟಡಕ್ಕೆ ಲಿಫ್ಟ್ ಇದ್ದರೂ ಆಗಾಗ ಕೆಟ್ಟು ನಿಲ್ಲುತ್ತದೆ. ಆಸ್ತಿಯೊಂದರ ನೋಂದಣಿಗೆ ಕುಟುಂಬದ 31 ಸದಸ್ಯರೊಂದಿಗೆ ಬಂದಿದ್ದೆವು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಎರಡನೇ ಮಹಡಿಗೆ ಕರೆದೊಯ್ಯಲು ಸಾಧ್ಯವೇ ಆಗಲಿಲ್ಲ. ಬ್ಯಾಟರಾಯನಪುರದ ಉಪನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದು ಆಸ್ತಿ ನೋಂದಣಿ ಮಾಡಿಸಲಾಯಿತು. ಕಿಷ್ಕಿಂಧೆಯಂತಹ ಈ ಸ್ಥಳದಲ್ಲಿ ಕಚೇರಿ ನಡೆಸುವ ಬದಲು ಬೇರೆಡೆಗೆ ಸ್ಥಳಾಂತರ ಮಾಡುವುದು ಸೂಕ್ತ’ ಎಂದು ಹೆಬ್ಬಾಳದ ನಂದೀಶ್ ಹೇಳಿದರು.

‘ಕೋವಿಡ್‌ ಸಂದರ್ಭದಲ್ಲಿ ಯಾವುದೇ ನಿಯಮ ಪಾಲಿಸದ ಈ ಕಚೇರಿಗೆ ಹೋಗುವುದೆಂದರೆ ಭಯವಾಗುತ್ತದೆ. ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಆರ್.ಟಿ.ನಗರದ ರಾಘವೇಂದ್ರ ಒತ್ತಾಯಿಸಿದರು.

‘ಆರ್.ಟಿ. ನಗರಕ್ಕೆ ಕಚೇರಿ ಸ್ಥಳಾಂತರಿಸಲು ನೋಂದಣಿ ಮತ್ತು ಮುದ್ರಾಂಕ ಆಯುಕ್ತರು ಆದೇಶಿಸಿದ್ದಾರೆ. ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಕಂದಾಯ ಸಚಿವರು ಅದಕ್ಕೆ ಕಿವಿಗೊಡದೆ ಕಚೇರಿ ಸ್ಥಳಾಂತರ ಮಾಡಬೇಕು. ಆ ಮೂಲಕ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಹೆಬ್ಬಾಳ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಮೂಲಸೌಕರ್ಯ ಸಮಸ್ಯೆ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಉಪನೋಂದಣಾಧಿಕಾರಿ ಕೆ.ಆರ್.ನಾಗರಾಜ್ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT