ಶನಿವಾರ, ಡಿಸೆಂಬರ್ 14, 2019
21 °C
ಕೆಸಿಡಿಸಿ: ಹೊಸ ಯಂತ್ರಗಳನ್ನು ಅಳವಡಿಸುವಂತೆ ಮೇಯರ್ ಸೂಚನೆ

ಸಂಸ್ಕರಣಾ ಘಟಕ: ಹಳೆ ಯಂತ್ರಗಳ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ (ಕೆಸಿಡಿಸಿ) ಸಂಸ್ಕರಣಾ ಘಟಕದಲ್ಲಿ ಹಳೆಯ ಯಂತ್ರಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದ್ದು, ಹೊಸ ಯಂತ್ರಗಳನ್ನು ಅಳವಡಿಸುವಂತೆ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದರು. 

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೂಡ್ಲು ಗೇಟ್ ಬಳಿಯ ಕೆಸಿಡಿಸಿ ಸಂಸ್ಕರಣಾ ಘಟಕವನ್ನು ಮೇಯರ್ ಬುಧವಾರ ಪರಿಶೀಲನೆ ನಡೆಸಿದರು. ‘ಘಟಕದ ಸುತ್ತಲೂ ಸ್ವಚ್ಛತೆ ಕಾಪಾಡುವ ಜತೆಗೆ ದುರ್ವಾಸನೆ ಶಮನ ಮಾಡಲು ಔಷಧ ಸಿಂಪಡಿಸಬೇಕು’ ಎಂದು ತಿಳಿಸಿದರು.

ಘಟಕದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಗೊಬ್ಬರದ ಬಗ್ಗೆ ಮೇಯರ್ ಮಾಹಿತಿ ಕೇಳಿದರು. ‌‘2018-19ನೇ ಸಾಲಿನಲ್ಲಿ ₹ 40.23 ಲಕ್ಷಕ್ಕೆ ಸಂಸ್ಕರಿಸಿದ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗಿದೆ. 2019–20ನೇ ಸಾಲಿನಲ್ಲಿ ಈವರೆಗೆ ₹ 34.29 ಲಕ್ಷ ಮೌಲ್ಯದ ಗೊಬ್ಬರ ಮಾರಾಟವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸಂಸ್ಕರಣಾ ಘಟಕಗಳ ಗೊಬ್ಬರದ ಖರೀದಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಗೆ ಪತ್ರ ಬರೆಯಲು ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.

ತ್ಯಾಜ್ಯ ನೀರು (ಲಿಚೆಟ್‌) ಸಂಗ್ರಹವಾಗುವ ಸ್ಥಳಕ್ಕೆ ಭೇಟಿ ನೀಡಿ, ಸಮರ್ಪಕ ನಿರ್ವಹಣೆ ಮಾಡುವಂತೆ ಸೂಚಿಸಿದರು. ‘ಘಟಕದಲ್ಲಿ ಉತ್ಪತ್ತಿ ಆಗುತ್ತಿರುವ ತ್ಯಾಜ್ಯ ನೀರನ್ನು ಕಾಡುಬೀಸನಹಳ್ಳಿಯಲ್ಲಿ ಜಲಮಂಡಳಿ ನಿರ್ಮಾಣ ಮಾಡಿರುವ ಎಸ್‌ಟಿಪಿ ಘಟಕಕ್ಕೆ ಕಳುಹಿಸಬೇಕು’ ಎಂದರು. 5 ಟನ್ ಸಾಮರ್ಥ್ಯದ ಹಳೆಯ ಬಯೋ ಮಿಥನೈಸೇಷನ್‌ ಘಟಕವನ್ನು ಪರಿಶೀಲಿಸಿ, ಅದನ್ನು ಮರುಚಾಲನೆ ಮಾಡುವಂತೆ ಸೂಚನೆ ನೀಡಿದರು. ‘ಈಗಾಗಲೇ ಪುನರ್ ನವೀಕರಣಮಾಡಲು ಕ್ರಮ ವಹಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇಂದೋರ್ ಮಾದರಿ ಅಳವಡಿಕೆ: ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ‘ಕಳೆದ ವಾರ ಇಂದೋರ್ ನಗರಕ್ಕೆ ಪ್ರವಾಸ ಮಾಡಿ, ಕಸ ವಿಲೇವಾರಿ ಕುರಿತು ಅಧ್ಯಯನ ನಡೆಸಲಾಗಿದೆ. ಅಲ್ಲಿ ವಿಲೇವಾರಿಗೆ ಕೈಗೊಂಡ ವಿಧಾನವನ್ನು ನಗರದಲ್ಲಿಯೂ ಅಳವಡಿಕೆ ಮಾಡಲಾಗುವುದು. ಕಸ ವಿಲೇವಾರಿ ಮಾಡುವ ಪ್ರಕ್ರಿಯೆ ಬಗ್ಗೆ ತಿಳಿಸಲು ಇಂದೋರ್‌ನಿಂದ ವಿಶೇಷ ತಜ್ಞರ ತಂಡ ಇದೇ 25ಕ್ಕೆ ನಗರಕ್ಕೆ ಬರಲಿದೆ. ಈ ವೇಳೆ ಪಾಲಿಕೆ ಅಧಿಕಾರಿಗಳು ಅವರ ಜೊತೆ ಕೈಜೋಡಿಸಿ, ಕಸದ ಸಮಸ್ಯೆ ನಿವಾರಣೆ ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

‘ಕೆಸಿಡಿಸಿ ಘಟಕವನ್ನು 1975ರಲ್ಲಿ 30 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆಯೇ ಘಟಕವನ್ನು ನಿರ್ವಹಣೆ ಮಾಡುತ್ತಿದ್ದು, ಘಟಕಕ್ಕೆ ಇದುವರೆಗೆ ₹ 60 ಕೋಟಿ ವ್ಯಯವಾಗಿದೆ. 500 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಘಟಕ ಹೊಂದಿದ್ದು, ಪ್ರತಿನಿತ್ಯ 80 ರಿಂದ 100 ಟನ್ ತ್ಯಾಜ್ಯವನ್ನು ವೈಜ್ಞಾನಿಕ
ವಾಗಿ ಸಂಸ್ಕರಣೆ ಮಾಡಲಾಗುತ್ತಿದೆ. ತ್ಯಾಜ್ಯದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್‌ಗಳನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಘಟಕದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಉಪಮೇಯರ್ ಸಿ.ಆರ್‌.ರಾಮ್ ಮೋಹನ್ ರಾಜು, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ವಿಶೇಷ ಆಯುಕ್ತ ರಂದೀಪ್, ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಇದ್ದರು.

 

ಪ್ರತಿಕ್ರಿಯಿಸಿ (+)