ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸದವರ ಮೇಲೆ ಹಲ್ಲೆಯಿಂದ ಬಂಧನ ಭೀತಿ; ನಿರ್ಮಾಪಕನ ಪತ್ನಿ, ಪುತ್ರ ಪರಾರಿ

* ಮನೆ ಕೆಲಸದ ಮಹಿಳೆ ಮೇಲೆ ಹಲ್ಲೆ * ಬೌನ್ಸರ್‌ಗಳ ಜೊತೆ ಮನೆಗೆ ನುಗ್ಗಿ ಕೃತ್ಯ
Last Updated 25 ಅಕ್ಟೋಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಎದುರು ಮನೆಯ ಕೆಲಸದ ಮಹಿಳೆ ಹಾಗೂ ಅವರ ತಾಯಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದ ಆರೋಪಿಗಳಾಗಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ, ಮಗ ಸ್ನೇಹಿತ್ (19) ಹಾಗೂ ಇತರರು, ಬಂಧನದ ಭೀತಿಯಲ್ಲಿ ಪರಾರಿಯಾಗಿದ್ದಾರೆ.

ಅ. 23ರಂದು ನಡೆದಿದ್ದ ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

‘ಮನೆ ಕೆಲಸ ಮಾಡುವ ಅನುರಾಧಾ ಎಂಬುವರು ದೂರು ನೀಡಿದ್ದಾರೆ. ಅಪರಾಧ ಸಂಚು (34), ಹಲ್ಲೆ (ಐಪಿಸಿ 323), ಲೈಂಗಿಕ ದೌರ್ಜನ್ಯ (ಐಪಿಸಿ 354), ಅತಿಕ್ರಮ ಪ್ರವೇಶ (ಐಪಿಸಿ 448), ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ರೇಖಾ ಜಗದೀಶ್, ಅವರ ಮಗ ಸ್ನೇಹಿತ್, ಚಾಲಕ ರಕ್ಷಿತ್, ಭುವನಾ, ಲತಾ ಹಾಗೂ ಬೌನ್ಸರ್‌ಗಳಾದ ನಿಖಿಲ್, ಕುಮಾರ್, ರೋಹಿತ್, ಅಶೋಕ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಅವರೆಲ್ಲ ತಲೆಮರೆಸಿಕೊಂಡಿದ್ದು, ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ತಿಳಿಸಿದರು.

ಕಸದ ವಿಚಾರಕ್ಕೆ ಜಗಳ: ‘ಅನುರಾಧಾ ಅವರು ಪುರುಷೋತ್ತಮ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಾರೆ. ಅದೇ ಮನೆಯ ಔಟ್‌ ಹೌಸ್‌ನಲ್ಲಿ ತಾಯಿ ಜೊತೆ ವಾಸವಿದ್ದರು. ಅ. 23ರಂದು ಅವರು ಮನೆಯ ಮುಂದೆ ಕಸಗೂಡಿಸುತ್ತಿದ್ದರು. ಎದುರು ಮನೆಯಲ್ಲಿ ವಾಸವಿರುವ ಸ್ನೇಹಿತ್ ಹಾಗೂ ಚಾಲಕ ರಕ್ಷಿತ್, ಮಹಿಳೆಯನ್ನು ದುರುಗುಟ್ಟಿ ನೋಡಿದ್ದರು.’

‘ಕಸಗೂಡಿಸುವ ವೇಳೆ ದೂಳು ಬರುವುದಾಗಿ ಹೇಳಿದ್ದ ಅನುರಾಧಾ, ಪಕ್ಕಕ್ಕೆ ಹೋಗುವಂತೆ ಇಬ್ಬರನ್ನೂ ಕೋರಿದ್ದರು. ಅಷ್ಟಕ್ಕೆ ಕೋಪಗೊಂಡ ಇಬ್ಬರು, ಮಹಿಳೆಯನ್ನು ನಿಂದಿಸಿದ್ದರು. ನೊಂದ ಮಹಿಳೆ, ಮನೆಯೊಳಗೆ ಹೋಗಿ ತಾಯಿಗೆ ವಿಷಯ ತಿಳಿಸಿದ್ದರು. ತಾಯಿ ಸಹ ಆರೋಪಿಗಳ ಬಳಿ ಹೋಗಿ ವರ್ತನೆಯನ್ನು ಪ್ರಶ್ನಿಸಿದ್ದರು. ಅವರನ್ನೂ ಆರೋಪಿಗಳು ನಿಂದಿಸಿದ್ದರು’ ಎಂದೂ ವಿವರಿಸಿದರು.

‘ಬೌನ್ಸರ್‌ಗಳಾದ ನಿಖಿಲ್, ರೋಹಿತ್, ಅಶೋಕ, ಕುಮಾರ್ ಜೊತೆಯಲ್ಲಿ ಅನುರಾಧಾ ಅವರ ಮನೆಗೆ ನುಗ್ಗಿದ್ದ ಆರೋಪಿಗಳು, ಪುನಃ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ರೇಖಾ ಜಗದೀಶ್, ಅವರ ಅಕ್ಕ ಲತಾ ಹಾಗೂ ಇತರ ಆರೋಪಿಗಳೂ ಇದ್ದರು’ ಎಂದೂ ತಿಳಿಸಿದರು.

‘ಎಲ್ಲ ಆರೋಪಿಗಳು ಸೇರಿ, ಅನುರಾಧಾ ಹಾಗೂ ಅವರ ತಾಯಿ ಮೇಲೆ ಹಲ್ಲೆ ಮಾಡಿದರು. ಬಟ್ಟೆ ಹರಿದು ದೌರ್ಜನ್ಯ ಎಸಗಿದ್ದರು. ಬಿಡಿಸಲು ಹೋದವರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಈ ಸಂಗತಿ ಮಹಿಳೆ ನೀಡಿರುವ ದೂರಿನಲ್ಲಿದೆ’ ಎಂದೂ ಹೇಳಿದರು.

ಮನೆಗೆ ಹೋಗಿ ವಿಚಾರಣೆ: ‘ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು, ನಾಪತ್ತೆಯಾಗಿದ್ದಾರೆ. ನೋಟಿಸ್‌ ನೀಡಿದರೂ ವಿಚಾರಣೆಗೆ ಬಂದಿರಲಿಲ್ಲ. ಹೀಗಾಗಿ, ಆರೋಪಿಗಳ ಮನೆಗೆ ಸೋಮವಾರ ಹೋಗಿ ಮಾಹಿತಿ ಕಲೆಹಾಕಲಾಯಿತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಕೃತ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT