ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿ ಮುಟ್ಟುಗೋಲು: ಬಿಬಿಎಂಪಿಗೆ ‘ಕಾಯ್ದೆ ಬಲ’

ಆಸ್ತಿ ತೆರಿಗೆ ಪಾವತಿಸದಿದ್ದರೆ ಚರಾಸ್ತಿ ಮಾರಾಟ, ಬ್ಯಾಂಕ್‌ ಖಾತೆ ಜಪ್ತಿಗೆ ಅವಕಾಶ
Published 15 ಆಗಸ್ಟ್ 2024, 0:18 IST
Last Updated 15 ಆಗಸ್ಟ್ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಮಾಡದ ಆಸ್ತಿಗಳಲ್ಲಿರುವ ಚರಾಸ್ತಿ ಮಾರಾಟ, ಆಸ್ತಿಗಳ ಮುಟ್ಟುಗೋಲು ಮಾಡಿಕೊಳ್ಳುವ ಅಧಿಕಾರವನ್ನು ಬಿಬಿಎಂಪಿಗೆ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ಕಾಯ್ದೆ– 2020ರ ಸೆಕ್ಷನ್‌ 144, 147, 149 ಮತ್ತು 156ಗಳಿಗೆ ತಿದ್ದುಪಡಿಯನ್ನು ತಂದು, ‘ಆಸ್ತಿ ತೆರಿಗೆ ವಿಮರ್ಶೆ, ವಸೂಲಿ ಮತ್ತು ನಿರ್ವಹಣೆ’ಗಾಗಿ ಹೊಸ ನಿಯಮಗಳನ್ನು (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಿಯಮಗಳು–2024) ಜಾರಿಗೆ ತರಲಾಗಿದೆ.

ಆಸ್ತಿ ತೆರಿಗೆ ಪಾವತಿ ಮಾಡದ ಮಾಲೀಕರಿಗೆ ಈ ಹಿಂದೆ ನೋಟಿಸ್‌ ನೀಡಲಾಗುತ್ತಿದ್ದರೂ, ಕಾನೂನು ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಹೆಚ್ಚಿನ ಅವಕಾಶ ಇರಲಿಲ್ಲ. ಹೀಗಾಗಿ, ಹೊಸ ನಿಯಮಗಳನ್ನು ಜಾರಿಗೆ ತರುವ ಜೊತೆಗೆ ಬೇಡಿಕೆ ನೋಟಿಸ್‌, ವ್ಯಾಪಾರ ಪರವಾನಗಿ ರದ್ದು ನೋಟಿಸ್‌, ಎ ಖಾತಾ, ಬಿ ಖಾತಾಗಳ ಆಸ್ತಿ ತೆರಿಗೆಯನ್ನು ಪುನರ್‌ವಿಮರ್ಶೆ ಮಾಡುವ ಪ್ರತ್ಯೇಕ ನೋಟಿಸ್‌ಗಳ ಮಾದರಿಗಳೊಂದಿಗೆ ಹೊಸ ನಿಯಮಗಳನ್ನು ಅಧಿಸೂಚಿಸಲಾಗಿದೆ.

ಮಾಲೀಕರಿಗೆ ನೀಡುವ ‘ಬೇಡಿಕೆ ನೋಟಿಸ್‌’ನಲ್ಲಿ 30 ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ, ಸ್ವತ್ತುಗಳಲ್ಲಿನ ಚರಾಸ್ತಿ ಮಾರಾಟ, ಆಸ್ತಿ ಮುಟ್ಟುಗೋಲು (ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ದಾಖಲೆಗಳ ‘ಋಣಭಾರ’ದಲ್ಲಿ ಬಿಬಿಎಂಪಿ ಹೆಸರು ದಾಖಲು), ಬ್ಯಾಂಕ್‌ ಖಾತೆ ಜಪ್ತಿ, ಬಿಬಿಎಂಪಿ ಕಾಯ್ದೆ –2020ರ ಸೆಕ್ಷನ್‌ 325ರಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂಬುದನ್ನೂ ನಮೂದಿಸಲು ಹೊಸ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಸ್ತಿಯನ್ನು ಬಾಡಿಗೆ ಅಥವಾ ಗುತ್ತಿಗೆಗೆ ನೀಡಿರುವ ಮಾಲೀಕರು ‘ಬೇಡಿಕೆ ನೋಟಿಸ್‌’ಗೆ ಗಡುವಿನೊಳಗೆ ಸ್ಪಂದನ ದೊರೆಯದಿದ್ದರೆ, ಆಸ್ತಿಯಲ್ಲಿರುವವರಿಗೆ ‘ಬೇಡಿಕೆ ನೋಟಿಸ್‌’ ಜಾರಿ ಮಾಡಲಾಗುತ್ತದೆ. ಮಾಲೀಕರಿಗೆ ಪಾವತಿಸುವ ಬಾಡಿಗೆಯಲ್ಲಿ ಅವರು 15 ದಿನದಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ಮಾಲೀಕರು ಹಾಗೂ ಬಾಡಿಗೆದಾರರಿಬ್ಬರೂ ಗಡುವಿನೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ ಕಟ್ಟಡದಲ್ಲಿರುವ ಚರಾಸ್ತಿಯನ್ನು ಮೊದಲು ಜಪ್ತಿ ಮಾಡಿ, ಅದನ್ನು ಮಾರಾಟ ಮಾಡಿ ಆಸ್ತಿ ತೆರಿಗೆಗೆ ಜಮಾ ಮಾಡಿಕೊಳ್ಳಲಾಗುತ್ತದೆ.

ಆಸ್ತಿ ತೆರಿಗೆ ಪಾವತಿಸದ ಕಟ್ಟಡಗಳು ವ್ಯಾಪಾರ ಪರವಾನಗಿ ಹೊಂದಿದ್ದರೆ, ಪ್ರತ್ಯೇಕ ‘ಬೇಡಿಕೆ ನೋಟಿಸ್‌’ ನೀಡಿ, 30 ದಿನ ಗಡುವು ನೀಡಲಾಗುತ್ತದೆ. ಗಡುವು ಮುಗಿದ ಬಳಿಕ ವ್ಯಾಪಾರ ಪರವಾನಗಿ ರದ್ದುಪಡಿಸಲು ಹೊಸ ನಿಯಮಗಳಲ್ಲಿ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT