ಸೋಮವಾರ, ಸೆಪ್ಟೆಂಬರ್ 26, 2022
20 °C

ಮುಡಾ ವ್ಯಾಪ್ತಿಯಲ್ಲಿ ಮುಚ್ಚಿಟ್ಟಿದ್ದ ₹5 ಸಾವಿರ ಕೋಟಿ ಮೌಲ್ಯದ ಆಸ್ತಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೈಸೂರು ನಗರಾಭಿ ವೃದ್ಧಿಪ್ರಾಧಿಕಾರದ (ಮುಡಾ) ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುಚ್ಚಿಟ್ಟಿದ್ದ ಸುಮಾರು ₹5 ಸಾವಿರ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

‌ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 13 ಸಾವಿರ ನಿವೇಶನಗಳು ಪತ್ತೆಯಾಗಿವೆ. ಅವುಗಳನ್ನು ಹಂಚಿಕೆಯಾಗಲಿ, ಹರಾಜಿನ ಮೂಲಕವಾಗಲಿ ವಿಲೇ ವಾರಿ ಮಾಡದಿರುವುದು ಗಮನಕ್ಕೆ ಬಂದಿದೆ’ ಎಂದರು.

‘ಹಂಚಿಕೆಯಾಗಿದ್ದ ಕೆಲವು ನಿವೇಶನಗಳು ಫಲಾನುಭವಿಗಳಿಲ್ಲದ ಕಾರಣಕ್ಕೆ ಅಥವಾ ತಾಂತ್ರಿಕ ಕಾರಣದಿಂದ ರದ್ದು ಆಗಿದೆ. ಬಳಿಕ ಅವುಗಳ ಮರು ಹಂಚಿಕೆ ಆಗಿಲ್ಲ. 200ರಿಂದ 300 ಎಕರೆಯಷ್ಟು ಪ್ರಾಧಿಕಾರದ ಭೂಮಿ ಕೂಡ ಪತ್ತೆಯಾಗಿದ್ದು, ಎಲ್ಲವನ್ನೂ ಲೆಕ್ಕಾಚಾರ ಮಾಡಿದರೆ ₹ 4 ಸಾವಿರ ಕೋಟಿಯಿಂದ ₹ 5 ಸಾವಿರ ಕೋಟಿ ಬೆಲೆ ಬಾಳುತ್ತವೆ’ ಎಂದು ಅವರು ವಿವರಿಸಿದರು.

‘ಎಲ್ಲಿಯೂ ಅಕ್ರಮ ನಡೆದಿಲ್ಲ. ಆದರೆ, ಅವುಗಳ ಸೂಕ್ತ ಬಳಕೆ ಮಾಡಿಕೊಳ್ಳದೇ ಪ್ರಾಧಿಕಾರ ನಿರ್ಲಕ್ಷ್ಯ ತೋರಿದೆ. ಇವುಗಳನ್ನು ಫಲಾನುಭವಿಗಳಿಗೆ ಮಾರಾಟ ಮಾಡಿದ್ದರೆ ಪ್ರಾಧಿಕಾರಕ್ಕೆ ಆದಾಯ ಬರುತ್ತಿತ್ತು. ಮುಂದಿನ ದಿನಗಳಲ್ಲಿ ಇದನ್ನು ವಿಲೇವಾರಿ ಮಾಡಲು ಸೂಚಿಸಿದ್ದೇನೆ. ಖಾಲಿ ನಿವೇಶನಗಳನ್ನು ಬಡಾವಣೆಗಳಾಗಿ ಅಭಿವೃದ್ಧಿಪಡಿಸುವುದು, ನಿವೇಶನಗಳನ್ನು ಹಂಚಿಕೆ ಮಾಡುವುದು, ಹರಾಜು ಹಾಕುವುದರ ಜೊತೆಗೆ ಗುಂಪು ಮನೆಗಳನ್ನು ನಿರ್ಮಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಹೊರತುಪಡಿಸಿದರೆ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳು ಆರ್ಥಿಕವಾಗಿ ಸದೃಢವಾಗಿಲ್ಲ. ನಾನು ಸಚಿವನಾದ ಬಳಿಕ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಂದು ಸಾವಿರ ಎಕರೆಯಲ್ಲಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳ ಹಂಚಿಕೆಯಿಂದ ಪ್ರಾಧಿಕಾರಕ್ಕೆ ₹ 500 ಕೋಟಿ ಆದಾಯ ನಿರೀಕ್ಷಿಸಿದ್ದು, ಅದರಿಂದ ಆರ್ಥಿಕ ಚೈತನ್ಯ ಸಿಗಲಿದೆ. ಬಳ್ಳಾರಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 120 ಎಕರೆ, ಬೆಳಗಾವಿಯಲ್ಲಿ 100 ಎಕರೆ, ದಾವಣಗೆರೆಯಲ್ಲಿ 57 ಎಕರೆ ಖರೀದಿಸಿ ಬಡಾವಣೆ ನಿರ್ಮಿಸಲು ಚಿಂತನೆ ನಡೆದಿದೆ’ ಎಂದರು.

‘ಹಲವೆಡೆ ರೈತರು ಜಮೀನು ಕೊಡಲು ಮುಂದೆ ಬರುವುದಿಲ್ಲ. ಅವರ ಮನವೊಲಿಸುವುದು ಕಷ್ಟವಿದೆ. ಕೆಲವೆಡೆ ಪ್ರಾಧಿಕಾರದಲ್ಲಿ ಹಣ ಇಲ್ಲದ್ದರಿಂದ ರೈತರಿಗೆ ಪರಿಹಾರ ನೀಡಿ ಬಡಾವಣೆ ನಿರ್ಮಾಣ, ನಿವೇಶನ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿಯಂಥ ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲು ಕಷ್ಟವಾಗಿದೆ. ಎಷ್ಟೇ ಜಮೀನು ಸಿಕ್ಕಿದರೂ ಖರೀದಿಸಿ ನಿವೇಶನ ಮಾಡಿ ಹಂಚಿಕೆ ಮಾಡಲು ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ’ ಎಂದೂ ಸಚಿವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು