ಭಾನುವಾರ, ಜೂನ್ 26, 2022
29 °C
ದೇವದಾಸಿ ಪದ್ಧತಿಗೆ ಮಕ್ಕಳು: ರಾಜ್ಯಮಟ್ಟದ ಸಮಾಲೋಚನೆ ಸಭೆ

‘ಮಕ್ಕಳನ್ನು ರಕ್ಷಿಸುವುದೇ ದೇಶಪ್ರೇಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇವದಾಸಿ ಪದ್ಧತಿ, ಬಾಲ್ಯವಿವಾಹ, ಭಿಕ್ಷಾಟನೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಮಕ್ಕಳು ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ರಕ್ಷಿಸಿದರೆ ಅದೇ ದೊಡ್ಡ ದೇಶಪ್ರೇಮ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಅಭಿಪ್ರಾಯಪಟ್ಟರು.

ದೇವದಾಸಿ ಪದ್ಧತಿಗೆ ಮಕ್ಕಳನ್ನು ದೂಡುವುದನ್ನು ತಡೆಗಟ್ಟಲು ಮತ್ತು ಬಾಲಕಿಯರ ಹಕ್ಕೊತ್ತಾಯಗಳನ್ನು ಮಂಡಿಸಲು ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳ ಮೇಲಿನ ಶೋಷಣೆ, ಅವಹೇಳನವನ್ನು ತಪ್ಪಿಸಲು ಜನರಲ್ಲಿ ಕಾನೂನಿನ ಅರಿವು ಮೂಡಬೇಕು. ಹಾಗೆಯೇ ತೊಂದರೆಗೀಡಾದವರಿಗೆ ಕಾನೂನಿನ ನೆರವು ಸಿಗಬೇಕು. ಮಗು ಮತ್ತು ಮಹಿಳೆಯರಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ನೀಡುತ್ತದೆ. ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಇಂತಹ ಕಾನೂನು ನೆರವು ಘಟಕಗಳಿವೆ’ ಎಂದರು.

ಎಫ್‌ಐಆರ್‌ ದಾಖಲಿಸಲೇಬೇಕು: ‘ಪೊಲೀಸರು ತಮ್ಮಲ್ಲಿಗೆ ಬರುವ ಪ್ರತಿ ದೂರಿಗೂ ಎಫ್‌ಐಆರ್ ದಾಖಲಿಸಿಕೊಳ್ಳಲೇಬೇಕು. ಪೊಲೀಸರು ತಮ್ಮ ಈ ಜವಾಬ್ದಾರಿ ಸರಿಯಾಗಿ ನಿರ್ವಹಿಸದಿದ್ದರೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಕಾನೂನು ಪ್ರಾಧಿಕಾರದ ಸಹಾಯವನ್ನು ಪಡೆದುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಆಂತೋನಿ ಸೆಬಾಸ್ಟಿಯನ್, ‘ಬಾಗಲಕೋಟೆಯ ಗುಳೇದಗುಡ್ಡದಲ್ಲಿ ಇತ್ತೀಚೆಗೆ ದೇವದಾಸಿ ಪದ್ಧತಿ ಅನುಸರಿಸಿರುವ ಬಗ್ಗೆ ನಾವು ವಿಚಾರಣೆ ನಡೆಸುತ್ತೇವೆ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಆದರೆ, ಅವರ ರಕ್ಷಣೆಗೆ ಆಯೋಗ ಧಾವಿಸಲಿದೆ’ ಎಂದು ಭರವಸೆ ನೀಡಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಷನ್‌ ಈ ಕಾರ್ಯಕ್ರಮ ಸಹಭಾಗಿತ್ವ ಹೊಂದಿತ್ತು. ಚೈಲ್ಡ್‌ ರೈಟ್‌ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಎನ್.ವಿ. ವಾಸುದೇವ ಶರ್ಮಾ, ಲಿಂಗತ್ವ ಮತ್ತು ಅಭಿವೃದ್ಧಿ ಸಲಹೆಗಾರರಾದ ಆಶಾ ರಮೇಶ್  ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು