ಠೇವಣಿದಾರರ ಉಪವಾಸ ಸತ್ಯಾಗ್ರಹ: ತ್ವರಿತ ತನಿಖೆಗೆ ಆಗ್ರಹ

ಬೆಂಗಳೂರು: ಬಸವನಗುಡಿಯ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಅವ್ಯವಹಾರವನ್ನು ಖಂಡಿಸಿ ಹಾಗೂ ಸಿಐಡಿ ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ಆಗ್ರಹಿಸಿ ಠೇವಣಿದಾರರು ಬ್ಯಾಂಕ್ ಎದುರು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.
'ಬ್ಯಾಂಕಿನ ಹಿಂದಿನ ಆಡಳಿತ ಮಂಡಳಿಯು ಠೇವಣಿದಾರರ ಹಣ ದುರ್ಬಳಕೆ ಮಾಡಿದೆ. ಬ್ಯಾಂಕಿನಿಂದ ಠೇವಣಿದಾರರು ಹಣ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಬಂಧ ಹೇರಿದೆ. ₹2,400 ಕೋಟಿ ಠೇವಣಿ ಬ್ಯಾಂಕ್‍ನಲ್ಲಿದ್ದು, ಹಣ ಪಡೆಯಲು ಠೇವಣಿದಾರರಿಗೆ ಸಮಸ್ಯೆಯಾಗಿದೆ' ಎಂದು ಗುರುರಾಘವೇಂದ್ರ ಬ್ಯಾಂಕ್ ಠೇವಣಿದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ.ವಿ.ಆದಿಶೇಷಯ್ಯ ದೂರಿದರು.
'ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಐಡಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾಲ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದೆ, ಸಾಲ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ‘
ಎಂದರು.
'ಬ್ಯಾಂಕಿನ ಆಡಳಿತಾಧಿಕಾರಿಯಾಗಿ ದಿವಾಕರ್ ಅವರನ್ನು ಅಲ್ಪಾವಧಿಗೆ ನೇಮಿಸಲಾಗಿದೆ. ಅವರನ್ನು ಪೂರ್ಣಾವಧಿಗೆ ನೇಮಕ ಮಾಡಿದರೆ, ತನಿಖೆಗೂ ಅನುಕೂಲವಾಗಲಿದೆ. ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು‘ ಎಂದರು.
ಬ್ಯಾಂಕ್‍ನ ಆಡಳಿತಾ ಧಿಕಾರಿ ದಿವಾಕರ್, 'ಶೀಘ್ರವೇ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಠೇವಣಿದಾರರಿಗೆ ಹಣ ವಾಪಸ್ ಬರಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಠೇವಣಿದಾರರು ಉಪವಾಸ ನಿಲ್ಲಿಸಬೇಕು' ಎಂದು ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.