ಗುರುವಾರ , ಸೆಪ್ಟೆಂಬರ್ 29, 2022
26 °C
ಸಚಿವ ಶ್ರೀರಾಮುಲು ರಾಜೀನಾಮೆಗೆ ಪಟ್ಟು

ಸಾರಿಗೆ ಇಲಾಖೆ ನೌಕರರ ಆತ್ಮಹತ್ಯೆ ಪ್ರಕರಣ: ಎಎಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ ತಾಳದೇ 15 ದಿನಗಳ ಅಂತರದಲ್ಲಿ ಆರು ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಯಾವ ಕ್ರಮವನ್ನೂ ಕೈಗೊಂಡಿಲ್ಲ. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ನೇತೃತ್ವದಲ್ಲಿ ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವಕಾಶ ನೀಡಲಿಲ್ಲ.

ಪ್ರತಿಭಟನೆಗೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಪೃಥ್ವಿರೆಡ್ಡಿ, ಬೇರೆಯವರಿಗೆ ಸಾರಿಗೆ ಖಾತೆ ನೀಡುವಂತೆ ಕೋರಿದರು. 

‘ಬಿಜೆಪಿ ಸರ್ಕಾರದ ಅವಧಿಯಲ್ಲಿ 35 ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ದಿನಗಳ ಅಂತರದಲ್ಲಿ ಆರು ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೌಕರರು ಆತ್ಮಹತ್ಯೆ ಹಾದಿ ಹಿಡಿದಿದ್ದರೂ ಸಾರಿಗೆ ಸಚಿವರು ಮೌನ ವಹಿಸಿದ್ದಾರೆ. ಸಚಿವರು, ಅಧಿಕಾರಿಗಳು ಮೃತ ನೌಕರರ ದರ್ಶನ ಪಡೆಯುವುದಕ್ಕೂ ಬಂದಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಸಹ ಹೇಳಲಿಲ್ಲ’ ಎಂದು ಪೃಥ್ವಿರೆಡ್ಡಿ ಆಕ್ರೋಶ ಹೊರಹಾಕಿದರು.

‘ಎಎಪಿಯಿಂದ ಪ್ರತಿಭಟನೆ ನಡೆದ ಬಳಿಕ ಡಿಪೋದ ವ್ಯವಸ್ಥಾಪಕರೊಬ್ಬರನ್ನು ಅಮಾನತು ಮಾಡಿರುವುದನ್ನು ಹೊರತುಪಡಿಸಿ ಬೇರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ನೌಕರರ ಕುಟುಂಬಕ್ಕೆ ಪರಿಹಾರ ನೀಡಿಲ್ಲ’ ಎಂದು ಆಪಾದಿಸಿದರು.

‘ಆತ್ಮಹತ್ಯೆ ಮಾಡಿಕೊಂಡ ಕೆಲವು ನೌಕರರು ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳವೇ ಕಾರಣವೆಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಆಗ್ರಹಿಸಿದರು.

110ಕ್ಕೂ ಹೆಚ್ಚು ನೌಕರರು ಕೋವಿಡ್‌ಗೆ ಬಲಿಯಾಗಿದ್ದಾರೆ. ಎಲ್ಲ ಕುಟುಂಬಗಳಿಗೂ ₹ 30 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಏಳು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಮುಖಂಡರಾದ ವಿಜಯ್‌ ಶರ್ಮ, ಸಂಚಿತ್‌, ಬಿ.ಟಿ.ನಾಗಣ್ಣ, ಜಗದೀಶ್‌ ವಿ. ಸದಂ, ದರ್ಶನ್‌ ಜೈನ್‌, ಸುರೇಶ್‌ ರಾಥೋಡ್‌, ಜಗದೀಶ್‌ ಚಂದ್ರ, ಚನ್ನಪ್ಪಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್‌ ಪ್ರತಿಭಟನೆಯಲ್ಲಿ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು