ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ; ಟ್ರೋಫಿಗೆ ಮುತ್ತಿಟ್ಟ ರೋಜರ್‌ ಫೆಡರರ್‌

ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಜೋಡಿ ರನ್ನರ್ಸ್ ಅಪ್‌
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ : ಸ್ವಿಟ್ಜರ್‌ಲೆಂಡ್‌ನ ಆಟಗಾರ ರೋಜರ್ ಫೆಡರರ್‌ ಭಾನುವಾರ ಇಲ್ಲಿನ ರಾಡ್ ಲೇವರ್ ಅರೆನಾ ಅಂಗಳದಲ್ಲಿ ವೃತ್ತಿಜೀವನದ 20ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಜಯಿಸಿದರು.

ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೆಡರರ್‌ ಗೆದ್ದ ಏಳನೇ ಪ್ರಶಸ್ತಿ ಇದಾಗಿದೆ. ಫೈನಲ್ ಪಂದ್ಯದಲ್ಲಿ ಅವರು 6–2, 6–7, 6–3, 3–6, 6–1ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ಗೆ ಸೋಲುಣಿಸಿದರು.

ಸತತ ಮೂರು ಸೆಟ್‌ಗಳನ್ನು ಗೆದ್ದುಕೊಂಡ ಫೆಡರರ್ ನಾಲ್ಕನೇ ಸೆಟ್‌ನಲ್ಲಿ ಸೋತರು. ಆದರೆ ಅಂತಿಮ ಸೆಟ್‌ನಲ್ಲಿ ಅವರು ಎದುರಾಳಿಗೆ ಕೇವಲ ಒಂದು ಗೇಮ್‌ನಲ್ಲಿ ಮಾತ್ರ ಸೋತರು. ಆರನೇ ಶ್ರೇಯಾಂಕದ ಸಿಲಿಕ್ ಮೂರು ಗಂಟೆ 3 ನಿಮಿಷ ಪೈಪೋಟಿ ನೀಡಿದರು.

ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 30ನೇ ಫೈನಲ್ ಪಂದ್ಯವನ್ನು ಆಡಿದ ಫೆಡರರ್‌ ತಮ್ಮ ಎಂದಿನ ಫಾರ್ಮ್‌ನೊಂದಿಗೆ ಚುರುಕಿನ ಸರ್ವ್ ಹಾಗೂ ರಿಟರ್ನ್ಸ್‌ಗಳಿಂದ ಗಮನಸೆಳೆದರು.

‘ಪ್ರಶಸ್ತಿ ಗೆದ್ದುಕೊಂಡಿದ್ದೇನೆ ಎಂದು ಈಗಲೂ ನಂಬಲಾಗುತ್ತಿಲ್ಲ. ನನ್ನ ಕನಸು ಇಂದು ನನಸಾಗಿದೆ’ ಎಂದು ಫೆಡರರ್ ಹೇಳಿದ್ದಾರೆ.

‘ವೃತ್ತಿಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಹೋದ ವರ್ಷ ಉತ್ತಮವಾಗಿ ಆಡಿದ್ದೆ. ಈ ಋತುವಿನ ಆರಂಭದಲ್ಲಿ ಸಿಕ್ಕ ಪ್ರಶಸ್ತಿ ಸ್ಮರಣೀಯ’ ಎಂದು ಫೆಡರರ್‌ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು.

ಈ ಗೆಲುವಿನ ಬಳಿಕ ಫೆಡರರ್‌ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡರು. ಸಿಲಿಕ್ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ನಡಾಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಬೋಪಣ್ಣಗೆ ರನ್ನರ್ಸ್ ಅಪ್‌ ಪ್ರಶಸ್ತಿ: ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯಾದ ಟೈಮಿಯಾ ಬಾಬೊಸ್ ಜೋಡಿ 6–2, 4–6, 9–11ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ದೊಬ್ರೊವ್ಸ್‌ಕಿ ಮತ್ತು ಕ್ರೊವೇಷ್ಯಾದ ಮಟೆ ‍ಪವಿಕ್ ಎದುರು ಸೋಲು ಅನುಭವಿಸುವ ಮೂಲಕ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ರಾಡ್ ಲೇವರ್ ಅರೆನಾದಲ್ಲಿಯೇ ನಡೆದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಬೋಪಣ್ಣ ಜೋಡಿ ಮೊದಲ ಸೆಟ್ ಗೆದ್ದಿತು. ಆದರೆ ಎರಡನೇ ಸೆಟ್‌ನಲ್ಲಿ ಆರಂಭದಲ್ಲಿಯೇ ಹಿಂದುಳಿಯುವ ಮೂಲಕ ತಕ್ಕ ಪೈಪೋಟಿ ನೀಡದೆ ಸೋತಿತು. ನಿರ್ಣಾಯಕ ಸೆಟ್‌ನಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಡೆಸಿದರೂ ಎದುರಾಳಿ ಆಟಗಾರರ ಬಿರುಸಿನ ಆಟವನ್ನು ತಡೆಯಲು ಸಾಧ್ಯವಾಗಲಿಲ್ಲ.

ಇಂಡೊ–ಹಂಗೇರಿಯನ್ ಜೋಡಿ 1ಗಂಟೆ 8 ನಿಮಿಷ ಹೋರಾಟ ನಡೆಸಿತು. ಬೋಪಣ್ಣ 2017ರ ಫ್ರೆಂಚ್ ಓಪನ್‌ನಲ್ಲಿ ದೊಬ್ರೊವ್ಸ್‌ಕಿ ಅವರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT