ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಆರೋಪ; ಸಿ.ಎಂ ಮನೆ ಮುತ್ತಿಗೆಗೆ ಯತ್ನ

ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪೊಲೀಸ್‌ ವಶಕ್ಕೆ
Last Updated 18 ಆಗಸ್ಟ್ 2022, 22:07 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವಾರ್ಡ್ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ’ ಎಂದು ಆರೋಪಿಸಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಭೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣಾ ಫಲಕ ಪ್ರದರ್ಶಿಸಿದರು. ಸಭೆ ಬಳಿಕ ಮೆರವಣಿಗೆ ಮೂಲಕ ಮುಖ್ಯಮಂತ್ರಿ ಮನೆಯತ್ತ ಹೊರಟಿದ್ದರು.

ಉದ್ಯಾನಕ್ಕೆ ಹೊಂದಿಕೊಂಡಿರುವ ಶೇಷಾದ್ರಿ ರಸ್ತೆಯಲ್ಲಿ ಕಾರ್ಯಕರ್ತರನ್ನು ತಡೆದ ಪೊಲೀಸರು, ‘ಮೆರವಣಿಗೆಗೆ ಅವಕಾಶವಿಲ್ಲ. ದಯವಿಟ್ಟು ವಾಪಸು ಹೋಗಿ’ ಎಂದು ಕೋರಿದರು.

ಪೊಲೀಸರ ಮಾತಿಗೆ ಒಪ್ಪದ ಪ್ರತಿಭಟನಕಾರರು, ಮುಖ್ಯಮಂತ್ರಿ ಮನೆಯತ್ತ ಮುನ್ನುಗ್ಗಿದರು. ಈ ವೇಳೆ ತಳ್ಳಾಟ ಉಂಟಾಯಿತು. ಆಗಲೇ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ವಾಹನಗಳಲ್ಲಿ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಟ್ಟು ಕಳುಹಿಸಿದರು.

ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

3 ಸಾವಿರ ಆಕ್ಷೇಪಣೆಗೆ ಸಿಗದ ಮನ್ನಣೆ: ಶಾಸಕ ರಾಮಲಿಂಗಾರೆಡ್ಡಿ, ‘ಬಿಬಿಎಂಪಿ ವಾರ್ಡ್ ಮೀಸಲಾತಿ ಅವೈಜ್ಞಾನಿಕವಾಗಿದೆ. ಇದರ ವಿರುದ್ಧ 3 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಿಗೆ ಮನ್ನಣೆ ನೀಡದ ಬಿಜೆಪಿ ಸರ್ಕಾರ, ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ಮೀಸ ಲಾತಿ ಪಟ್ಟಿ, ರಾಜಕೀಯ ಪ್ರೇರಿತವಾಗಿದೆ. ಆರ್‌ಎಸ್ಎಸ್‌ ಹೇಳಿದಂತೆ ಮೀಸಲಾತಿ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯನ್ನು ಕೂಡಲೇ ಹಿಂಪಡೆಯಬೇಕು. ಇದರ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT