ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 10 ಸಾವಿರ ಪರಿಹಾರಕ್ಕೆ ಆಗ್ರಹ; ರಾಜ್ಯವ್ಯಾಪಿ ಪ್ರತಿಭಟನೆ

Last Updated 1 ಜೂನ್ 2021, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗದವರಿಗೆ ₹ 10 ಸಾವಿರ ಪರಿಹಾರ ನೀಡಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕೊರೊನಾ ಸೋಂಕು ಹೆಚ್ಚಿದ ಕಾರಣ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಇದರ ನಿಯಮಗಳನ್ನು ಪಾಲಿಸಿ ದುಡಿಯುವ ವರ್ಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ತಮ್ಮ ಮನೆ ಹಾಗೂ ಬಡಾವಣೆಗಳಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಜೀವ ಉಳಿಸಿ, ಜೀವನೋಪಾಯ ರಕ್ಷಿಸಿ’ ಘೋಷವಾಕ್ಯದಡಿ ಸಿಪಿಐ (ಎಂಎಲ್), ಸಿಪಿಐಎಂ, ಎಸ್‌ಯುಸಿಐ (ಸಿ), ಎಐಎಫ್‌ಬಿ,ಎಐಸಿಸಿಟಿಯು, ಸ್ವರಾಜ್ ಇಂಡಿಯಾ ಮತ್ತು ಆರ್‌ಪಿಐ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು, ಮೈಸೂರು, ಕೊಡಗು, ಮಂಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸ್ಪಂದನೆ ವ್ಯಕ್ತವಾಯಿತು.

ಬೀದಿ ವ್ಯಾಪಾರಿಗಳು, ಪೌರ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಆಸ್ಪತ್ರೆಗಳ ಸ್ವಚ್ಛತಾ ಕಾರ್ಮಿಕರು, ವಿವಿಧ ಸಂಸ್ಥೆಗಳ ಗುತ್ತಿಗೆ ಕಾರ್ಮಿಕರು, ತೋಟ ಹಾಗೂ ಭೂ ರಹಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ದುಡಿಯುವ ವರ್ಗದವರಿಗೆ ಉಚಿತ ಕೋವಿಡ್ ಚಿಕಿತ್ಸೆ, ಔಷಧಿ ಹಾಗೂ ಲಸಿಕೆ ನೀಡಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಕನಿಷ್ಠ 200 ದಿನಗಳ ಉದ್ಯೋಗ ಖಾತ್ರಿಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ವಿಸ್ತರಿಸಬೇಕು. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಮಿಕರಿಗೆ ವಿಶೇಷ ರಕ್ಷಣೆ ಒದಗಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಲಾಕ್‌ಡೌನ್‌ ಜಾರಿಯಾಗಿರುವ ಇಂದಿನ ದಿನಗಳಲ್ಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳದಿದ್ದರೆ ಗಂಭೀರ ಸ್ವರೂಪದ ಹೋರಾಟ ಆರಂಭಿಸಲಾಗುವುದು’ ಎಂದೂ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT