ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ

7

ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಬೆಂಗಳೂರು: ಉಚಿತ ಬಸ್‌ಪಾಸ್‌ಗೆ ಆಗ್ರಹಿಸಿ ಎಐಡಿಎಸ್‍ಒ, ಎಐಡಿವೈಒ ಮತ್ತು ಎಐಎಂಎಸ್‍ಎಸ್ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪುರಭವನದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ‘ನೀಡಿ, ನೀಡಿ ಉಚಿತ ಬಸ್‌ ಪಾಸ್‌ ನೀಡಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಆನಂತರ ಪ್ರತಿಭಟನಾ ಸಭೆ ನಡೆಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮತ್, ‘ಹಿಂದಿನ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಬಸ್‍ ಪಾಸ್ ಉಚಿತವಾಗಿ ನೀಡಲಾರಂಭಿಸಿತ್ತು. ಆದರೆ, ಸಮ್ಮಿಶ್ರ ಸರ್ಕಾರ ಪಾಸ್‌ ಬಗ್ಗೆ ಬಜೆಟ್‌ನಲ್ಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದರಿಂದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ದೂರಿದರು.

ಎಐಡಿಎಸ್‍ಒ ರಾಜ್ಯ ಘಟಕದ ಅಧ್ಯಕ್ಷ ಎನ್. ಪ್ರಮೋದ್, ‘ಬಸ್‍ ಪಾಸ್‌ಗಳನ್ನು ಉಚಿತವಾಗಿ ವಿತರಿಸಿದರೆ ₹630 ಕೋಟಿ ನಷ್ಟವಾಗುತ್ತದೆಂದು ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಎಲ್ಲಿಯೂ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್‌ಗಳನ್ನು ಬಿಟ್ಟಿಲ್ಲ. ನಷ್ಟ ಉಂಟಾಗುವ ಮಾತೇ ಇಲ್ಲ’ ಎಂದು ಹೇಳಿದರು.

ಎಐಎಂಎಸ್‍ಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಹೇಮಾವತಿ, ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಜಯಣ್ಣ ಇದ್ದರು.

ಸಂಚಾರ ದಟ್ಟಣೆಗೆ ಆಕ್ರೋಶ

ಪ್ರತಿಭಟನಾ ಮೆರವಣಿಗೆಯಿಂದಾಗಿ ಪುರಭವನ ಹಾಗೂ ಸುತ್ತಮುತ್ತ ವಾಹನಗಳ ದಟ್ಟಣೆ ಉಂಟಾಯಿತು. ವಿದ್ಯಾರ್ಥಿಗಳ ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ 25 ನಿಮಿಷಕ್ಕೂ ಹೆಚ್ಚು ಹೊತ್ತು ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ದಟ್ಟಣೆಯಲ್ಲಿ ಸಿಲುಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸವಾರರು, ‘ನಗರದ ಮಧ್ಯಭಾಗದಲ್ಲಿರುವ ಪುರಭವನದ ಎದುರು ಪ್ರತಿಭಟನೆ ನಡೆಸುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಸ್ಥಳದಲ್ಲಿ ಇನ್ನುಮುಂದೆ ಪ್ರತಿಭಟನೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 6

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !