ಬೆಂಗಳೂರು: ‘ಹೋರಾಟಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ನಗರದ ಇತರೆಡೆ ಹೋರಾಟಗಳನ್ನು ಪೊಲೀಸರು ನಿರ್ಬಂಧಿಸುತ್ತಿದ್ದಾರೆ’ ಎಂದು ಆರೋಪಿಸಿ ಜನಾಂದೋಲನ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯಿಂದ ವಿಧಾನಸೌಧ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆವರೆಗೆ ಮೆರವಣಿಗೆ ನಡೆಸಲು ಪ್ರತಿಭಟನಕಾರರು ಮುಂದಾಗಿದ್ದರು.
ಗಾಂಧಿ ಪ್ರತಿಮೆ ಬಳಿಯೇ ಪ್ರತಿಭಟನಕಾರರನ್ನು ತಡೆದ ಪೊಲೀಸರು, ಮೆರವಣಿಗೆಗೆ ಅನುಮತಿ ಇಲ್ಲವೆಂದು ಹೇಳಿದರು. ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ಸಂದರ್ಭದಲ್ಲಿ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಮೈದಾನಕ್ಕೆ ಕರೆದೊಯ್ದಿದ್ದರು. ಮುಚ್ಚಳಿಕೆ ಬರೆಸಿಕೊಂಡು ಸಂಜೆ ಬಿಡುಗಡೆ ಮಾಡಿದರು.
‘ಬೆಂಗಳೂರಿನಲ್ಲಿ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡಿದ್ದೇವೆ. ಒಂದೂವರೆ ವರ್ಷದಿಂದ ಪೊಲೀಸರು ಹೋರಾಟಗಳ ಮೇಲೆ ನಿರ್ಬಂಧ ವಿಧಿಸುತ್ತಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಹೋರಾಟ ಮಾಡಬೇಕೆಂದು ಹೇಳಿ ನಮ್ಮ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ಮತ್ತು ಮೆರವಣಿಗೆ ಮಾಡಲು ಪೊಲೀಸರು ಅನುಮತಿ ನೀಡುತ್ತಿಲ್ಲ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಪ್ರತಿಭಟನಾಕಾರರು ದೂರಿದರು.
‘ಹೋರಾಟಗಳಿಗೆ ಅನುಮತಿ ನಿರಾಕರಿಸುತ್ತಿರುವ ಪೊಲೀಸರು, ಹೈಕೋರ್ಟ್ ಆದೇಶದ ನೆಪ ಹೇಳುತ್ತಿದ್ದಾರೆ. 2021ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಅವರೇ, ಪ್ರತಿಭಟನೆ, ಪ್ರದರ್ಶನ, ಮೆರವಣಿಗೆಗಳನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಮಾಡಬೇಕೆಂಬ ಪ್ರಜಾಪ್ರಭುತ್ವ ವಿರೋಧಿ ಆದೇಶ ಹೊರಡಿಸಿದ್ದರು. ಅದೇ ಆದೇಶ ಇಂದಿಗೂ ಪಾಲನೆ ಆಗುತ್ತಿದೆ. ಸಂವಿಧಾನ ವಿರೋಧಿಯಾಗಿರುವ ಈ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.