ಬೆಂಗಳೂರು: ಬಾಕಿ ಉಳಿದಿರುವ ಶೇಕಡ 25ರಷ್ಟು ಬಿಲ್ ಮೊತ್ತವನ್ನು ಎಂಟು ದಿನದಲ್ಲಿ ಪಾವತಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದರಿಂದ, ಬಿಬಿಎಂಪಿ ಗುತ್ತಿಗೆದಾರರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ಬಿಲ್ ಬಾಕಿ ಪಾವತಿ ಮಾಡಬೇಕೆಂದು ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಸೋಮವಾರದಿಂದ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದ್ದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಆಹ್ವಾನದಂತೆ ಬುಧವಾರ ಸಂಜೆ ಅವರನ್ನು ಭೇಟಿ ಮಾಡಲಾಯಿತು. ಪ್ರತಿಭಟನೆಯನ್ನು ಕೈಬಿಡುವಂತೆ ಸಚಿವರು ಮನವಿ ಮಾಡಿದರು.
‘ಕಾನೂನಾತ್ಮಕವಾಗಿ ಬಾಕಿ ಬಿಲ್ಲಿನ ಮೊತ್ತ ಬಿಡುಗಡೆ ಮಾಡುವ ಬಗ್ಗೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ಇನ್ನು ಎಂಟು ದಿನಗಳೊಳಗಾಗಿ ಬಾಕಿ ಇರುವ ಶೇ 25ರಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸರ್ಕಾರವು ಸಂಪೂರ್ಣವಾಗಿ ಗುತ್ತಿಗೆದಾರರ ಪರವಾಗಿ ಇರುವುದಾಗಿಯೂ ಅವರು ಹೇಳಿದರು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ಅವರು ತಿಳಿಸಿದರು.
‘ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದೇವೆ. ಮುಂದಿನ ಒಂದು ವಾರ ಕಾದು ನೋಡುತ್ತೇವೆ’ ಎಂದು ಹೇಳಿದರು.
ಸತ್ಯಾಗ್ರಹ: ಬೆಳಿಗ್ಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಂದರ್ಭದಲ್ಲಿ ಮಾತನಾಡಿದ ನಂದಕುಮಾರ್, ‘ಬಿಬಿಎಂಪಿ ಮುಖ್ಯ ಆಯುಕ್ತರು ಬಾಕಿ ಇರುವ ಶೇಕಡ 25ರಷ್ಟು ಹಣ ಬಿಡುಗಡೆ ಮಾಡಬೇಕು. ನಮ್ಮ ಹೋರಾಟಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಎಲ್ಲ ಜಿಲ್ಲೆಯ ಗುತ್ತಿದಾರರು ಬೆಂಬಲ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಮಧ್ಯ ಪ್ರವೇಶಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದ್ದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಬಿಬಿಎಂಪಿ ಕಾರ್ಯನಿರತ ಗುತ್ತಿದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.
‘ಆಯುಕ್ತರು ಪಾಲಿಕೆಯಿಂದ ತೊಲಗಲಿ...’
‘ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪಾಲಿಕೆಯಿಂದ ತೊಲಗಬೇಕು. ಅವರಿಂದಲೇ ಇಲ್ಲಿನ ವ್ಯವಸ್ಥೆ ಹದಗೆಟ್ಟಿದೆ. ಯಾವ ರೀತಿಯ ಸ್ಪಂದನವೂ ಇಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಗುತ್ತಿಗೆದಾರರು ಆರೋಪಿಸಿದರು. ‘ಆಯುಕ್ತರು ತೊಲಗಲಿ ಗೋ ಬ್ಯಾಕ್ ಚೀಫ್ ಕಮಿಷನರ್’ ಎಂದು ಘೋಷಣೆಗಳನ್ನು ಕೂಗಿದರು. ಗುತ್ತಿಗೆದಾರರ ಪ್ರತಿಭಟನೆ ಹಾಗೂ ಆರೋಪಕ್ಕೆ ‘ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಳಿಕ ಸುದ್ದಿಗಾರರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.