ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ ನಿರ್ಬಂಧ ಸಡಿಲಿಕೆಗೆ ಒತ್ತಾಯ: ಮುಖ್ಯ ಆಯುಕ್ತರ ಕಾರಿಗೆ ಮುತ್ತಿಗೆ

ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ l 12 ಅಡಿ ಎತ್ತರದ ಗಣಪತಿ ಮೂರ್ತಿ ತಂದ ಪ್ರತಿಭಟನಕಾರರು
Last Updated 9 ಸೆಪ್ಟೆಂಬರ್ 2021, 22:17 IST
ಅಕ್ಷರ ಗಾತ್ರ

ಬೆಂಗಳೂರು: 'ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಕೆ ಮಾಡಬೇಕು’ ಎಂದು ಒತ್ತಾಯಿಸಿ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ 'ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ' ಸದಸ್ಯರು, ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಕಾರು ಅಡ್ಡಗಟ್ಟಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗಣಪತಿ ಮೂರ್ತಿಗಳನ್ನು ಹೊತ್ತು ತಂದಿದ್ದ ಪ್ರತಿಭಟನಕಾರರು, ‘ನಿರ್ಬಂಧಗಳನ್ನು ಕೂಡಲೇ ಸಡಿಲಿಕೆ ಮಾಡಬೇಕು. ಹಬ್ಬ ಆಚರಿಸಲು ಮುಕ್ತ ವಾತಾವರಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಕಚೇರಿ ಎದುರು ಸೇರಿದ್ದ 200ಕ್ಕೂ ಹೆಚ್ಚು ಮಂದಿ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಕಚೇರಿ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಕಾವಲು ಕಾಯುತ್ತಿದ್ದರು.

ಪ್ರತಿಭಟನೆ ಚುರುಕುಗೊಳಿಸಿದ ಸಮಿತಿ ಸದಸ್ಯರು, ಬ್ಯಾರಿಕೇಡ್‌ಗಳನ್ನು ತಳ್ಳಿ ಕಚೇರಿಯೊಳಗೆ ಹೊರಟಿದ್ದರು. ಸ್ಥಳದಲ್ಲಿದ್ದ ಕೇಂದ್ರ ವಿಭಾಗದ ಪೊಲೀಸರು, ಪ್ರತಿಭಟನಕಾರರನ್ನು ತಡೆದು ನಿಲ್ಲಿಸಿದರು. ಇದೇ ಸಂದರ್ಭದಲ್ಲೇ ಗೌರವ್ ಗುಪ್ತ ಅವರು ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದರು. ಕಾರು ಅಡ್ಡಗಟ್ಟಿದ್ದ ಪ್ರತಿಭಟನಕಾರರು, ಕಾರಿನ ಮುಂದೆ ಮಲಗಿ ಪ್ರತಿಭಟನೆ ಮುಂದುವರಿಸಿದರು. ಮಧ್ಯಪ್ರವೇಶಿಸಿದ್ದ ಪೊಲೀಸರು, ಪ್ರತಿಭಟನಕಾರರನ್ನು ಎಳೆದು ಕಾರು ಹೋಗಲು ದಾರಿ ಮಾಡಿಕೊಟ್ಟರು. ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ತಳ್ಳಾಟ ನಡೆಯಿತು. ಸ್ಥಳದಲ್ಲಿದ್ದವರನ್ನು ಚದುರಿಸಿದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು.

‘ಪ್ರತಿಭಟನೆ ಸಂದರ್ಭದಲ್ಲಿ ಗೊಂದಲದಿಂದಾಗಿ ಪರಸ್ಪರ ತಳ್ಳಾಟ ನಡೆಯಿತು. ನಂತರ, ಮುಖಂಡರನ್ನು ಸಮಾಧಾಪಡಿಸಲಾಯಿತು. ಶಾಂತಿಯುತವಾಗಿ ಪ್ರತಿಭಟನೆ ಅಂತ್ಯಗೊಂಡಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನಮ್ಮ ಹಬ್ಬಕ್ಕೆ ನಿರ್ಬಂಧ ಏಕೆ? ; ‘ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ಸಂವಿಧಾನ ಮುಕ್ತ ಅವಕಾಶ ನೀಡಿದೆ. ಆದರೆ, ನಮ್ಮ ಧರ್ಮದ ಹಬ್ಬಕ್ಕೆ ಸರ್ಕಾರ ನಿರ್ಬಂಧ ವಿಧಿಸಿರುವುದು ಏಕೆ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ರಾಜು ಪ್ರಶ್ನಿಸಿದರು.

‘ವಾರ್ಡ್‌ಗೆ ಒಂದೇ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು, ಮೂರ್ತಿ 4 ಅಡಿಗಿಂತ ಹೆಚ್ಚು ಎತ್ತರ ಇರಬಾರದು, ಮೂರು ದಿನ ಮಾತ್ರ ಉತ್ಸವ ಆಚರಿಸಬೇಕೆಂಬ ನಿರ್ಬಂಧಗಳನ್ನು ವಿಧಿಸಿರುವುದು ಖಂಡನೀಯ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ. ಈ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದೂ ಅವರು ಆಗ್ರಹಿಸಿದರು.

‘ಜನರ ಆರೋಗ್ಯವೂ ನಮಗೆ ಮುಖ್ಯ. ಕೊರೊನಾ ನಿಯಮಗಳನ್ನು ಪಾಲಿಸಲು ನಾವೆಲ್ಲರೂ ಸಿದ್ಧರಿದ್ದೇವೆ. 12 ಅಡಿ ಎತ್ತರದವರೆಗಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು. ಕನಿಷ್ಠ ಐದು ದಿನವಾದರೂ ಉತ್ಸವ ಆಚರಿಸಲು ಅವಕಾಶ ನೀಡಬೇಕು’ ಎಂದೂ ಅವರು ಕೋರಿದರು.

ಪ್ರತಿಷ್ಠಾಪನೆಗಾಗಿ ತಯಾರಿಸಿದ್ದ 4 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಭಟನಾ ಸ್ಥಳಕ್ಕೆ ತಂದಿದ್ದ ಕೆಲವರು, ‘ಇಂಥ ಮೂರ್ತಿಗಳನ್ನು ಎಲ್ಲಿ ಪ್ರತಿಷ್ಠಾಪಿಸುವುದು? ಎಲ್ಲಿ ವಿಸರ್ಜನೆ ಮಾಡುವುದು’ ಎಂದು ಪ್ರಶ್ನಿಸಿದರು.

ಕೊರೊನಾ ನಿಯಂತ್ರಣ ನಿಯಮ ಉಲ್ಲಂಘನೆ

ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಸದಸ್ಯರು ಪ್ರತಿಭಟನೆ ಸಂದರ್ಭದಲ್ಲಿ ಕೊರೊನಾ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದರು. ಇದರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಆರೋಪ ವ್ಯಕ್ತವಾಗಿದೆ.

‘ಪ್ರತಿಭಟನೆಯಲ್ಲಿ ಪರಸ್ಪರ ಅಂತರವಿರಲಿಲ್ಲ. ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ’ ಎಂದೂ ಹಲವರು ಆರೋಪಿಸಿದ್ದಾರೆ.

‘140 ವಾರ್ಡ್‌ಗಳಲ್ಲಿ ಅನುಮತಿ’

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ವಿಶೇಷ ಆಯುಕ್ತ ಡಿ. ರಂದೀಪ್,
‘ನಿರ್ಬಂಧಗಳನ್ನು ಸಡಿಲಿಕೆ ಮಾಡುವಂತೆ ಗಣೇಶೋತ್ಸವ ಸಮಿತಿಗಳು
ಮನವಿ ಮಾಡಿವೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದರು.

‘140 ವಾರ್ಡ್‌ಗಳಲ್ಲಿ ಒಂದು ಮೂರ್ತಿ ಪ್ರತಿಷ್ಠಾಪನೆ ಈಗಾಗಲೇ ಅನುಮತಿ ನೀಡಲಾಗಿದೆ. ಉಳಿದಂತೆ, ಕೆಲ ವಾರ್ಡ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೇಳಿದ್ದಾರೆ. ಇದನ್ನು ಪರಿಶೀಲಿಸಲಾಗುವುದು. ಹಬ್ಬವು ಶಾಂತಿಯುತವಾಗಿ ಆಚರಿಸಬೇಕೆಂಬುದು ನಮ್ಮ ಉದ್ದೇಶ’ ಎಂದೂ ಅವರು ವಿವರಿಸಿದರು.

ಪ್ರಕಾಶ್ ರಾಜು, ‘ನಾವು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಎಷ್ಟು ದಿನ ಉತ್ಸವ ಮಾಡಬೇಕು ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ಹೇಳಲಿ. ನಿಯಮ ಉಲ್ಲಂಘಿಸಿದ ನೆಪದಲ್ಲಿ ಸಮಿತಿಯ ಯಾರನ್ನಾದರೂ ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT