ಭಾನುವಾರ, ನವೆಂಬರ್ 17, 2019
21 °C

ಪಿಎಸ್‌ಐ ಬಳಿಯ ದಂಡದ ಹಣವನ್ನೇ ಕದ್ದರು

Published:
Updated:

ಬೆಂಗಳೂರು: ಮಡಿವಾಳ ಸಂಚಾರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ (ಎಸ್‌ಐ) ವಿ.ಎಸ್. ನಾಗಮಣಿ ಅವರ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ ₹ 48,000 ಹಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದು, ಆ ಸಂಬಂಧ ಸಂಪಂಗಿ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭಾನುವಾರ ಆಯೋಜಿಸಿದ್ದ ಮ್ಯಾರಥಾನ್ ಕರ್ತವ್ಯಕ್ಕೆ ಬಂದಿದ್ದ ನಾಗಮಣಿ, ಆರ್‌.ಆರ್‌.ಎಂ.ಆರ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಕರ್ತವ್ಯ ಮುಗಿಸಿ ವಾಪಸು ಬರುವಷ್ಟರಲ್ಲೇ ಹಣ ಕಳುವಾಗಿದೆ. ಈ ಬಗ್ಗೆ ನಾಗಮಣಿ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ್ದ ನಾಗಮಣಿ, ಸಂಚಾರ ನಿಯಮ ಉಲ್ಲಂಘಿಸಿದವರಿಂದ ₹23,400 ಸಂಗ್ರಹಿಸಿದ್ದರು. ಆ ಹಣದ ಜೊತೆಗೆ ತಮ್ಮ ವೈಯಕ್ತಿಕ ಹಣವನ್ನೂ ಸೇರಿಸಿ ಪರ್ಸ್‌ನಲ್ಲಿಟ್ಟಿದ್ದರು. ಅದೇ ಪರ್ಸ್‌ಅನ್ನು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದರು.’

‘ಆರೋಪಿಗಳ ಪತ್ತೆಗಾಗಿ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದರು.  

ಪ್ರತಿಕ್ರಿಯಿಸಿ (+)