ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಪರೀಕ್ಷೆಗೂ ಮುನ್ನ ವಾಟ್ಸ್‌ಆ್ಯಪ್‌ ಕರೆ!

ನೇಮಕಾತಿ ವಿಭಾಗದ ಮತ್ತಷ್ಟು ಸಿಬ್ಬಂದಿಯ ವಿಚಾರಣೆ ಸಾಧ್ಯತೆ
Last Updated 11 ಮೇ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿರುವ ಆರೋಪಿಗಳು, ಪರೀಕ್ಷೆ ಆರಂಭಕ್ಕೆ ಕೆಲ ಗಂಟೆಗಳ ಮುಂಚಿತವಾಗಿ ಅಕ್ರಮದಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಕೆಲ ಸೂಚನೆಗಳನ್ನು ನೀಡುತ್ತಿದ್ದರು ಎಂಬುದು ಸಿಐಡಿ ತನಿಖೆಯಿಂದ ಗೊತ್ತಾಗಿದೆ.

‘150 ಪ್ರಶ್ನೆಗಳ ಪೈಕಿ ಇಂತಿಷ್ಟೇ ಪ್ರಶ್ನೆಗಳಿಗೆ ಉತ್ತರಿಸುವಂತೆ ಆರೋಪಿಗಳು ಅಭ್ಯರ್ಥಿಗಳಿಗೆ ತಾಕೀತು ಮಾಡುತ್ತಿದ್ದರು. ಇಷ್ಟೇ ಸಮಯದ ನಂತರ ಒಎಂಆರ್‌ ಶೀಟ್‌ನೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರಬರಬೇಕೆಂದೂ ನಿರ್ದೇಶಿಸುತ್ತಿದ್ದರು. ಭದ್ರತಾ ಸಿಬ್ಬಂದಿಯ ನೆರವಿನಿಂದ ‘ಸ್ಟ್ರಾಂಗ್‌ ರೂಂ’ನಲ್ಲೇ ಒಎಂಆರ್‌ ಶೀಟ್‌ಗಳನ್ನು ತಿದ್ದುತ್ತಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

ತೀವ್ರಗೊಂಡ ವಿಚಾರಣೆ: ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ನೌಕರರು ಸೇರಿ ಒಟ್ಟು 6 ಜನರನ್ನು ಮಂಗಳವಾರ ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಬಂಧಿತರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು, ಅಕ್ರಮದಲ್ಲಿ ಇವರ ಪಾತ್ರ ಏನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ನೇಮಕಾತಿ ವಿಭಾಗದ ಮತ್ತಷ್ಟು ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಕುರಿತು ಅಗತ್ಯ ಪುರಾವೆಗಳನ್ನು ಕಲೆಹಾಕಲಾಗುತ್ತಿದೆ. ಪೂರಕ ಸಾಕ್ಷ್ಯಗಳು ದೊರೆತ ಕೂಡಲೇ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಮಧ್ಯವರ್ತಿ ಶರತ್‌, ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸುತ್ತಿದ್ದ. ಭದ್ರತೆಗೆ ನಿಯೋಜನೆಯಾಗಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಸಬ್‌ಇನ್‌ಸ್ಟೆಕ್ಟರ್‌ ಮಂಜುನಾಥ್‌ ಸೇರಿದಂತೆ ಇತರರು ಅಕ್ರಮ ನಡೆಸಲು ಆತನಿಗೆ ಸಹಕಾರ ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದೂ ಹೇಳಿವೆ.

ಅಕ್ರಮ ಸಾಬೀತಾದರೆ ಸಿಬ್ಬಂದಿ ವಜಾ

‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹಲವು ಪೊಲೀಸ್‌ ಸಿಬ್ಬಂದಿಯ ಹೆಸರು ಕೇಳಿಬಂದಿದೆ. ಆರೋಪಿತರನ್ನೆಲ್ಲಾ ಅಮಾನತು ಮಾಡಲಾಗಿದೆ’ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ತಿಳಿಸಿದ್ದಾರೆ.

‘ಸಿಬ್ಬಂದಿ ಮೇಲಿನ ಆರೋಪ ಸಾಬೀತಾದರೆ ಅವರನ್ನು ಕೆಲಸದಿಂದಲೇ ವಜಾ ಮಾಡಲಾಗುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT