ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಯುಕ್ತ ಎಂಜಿನ್: 47 ವಿಮಾನಗಳ ಹಾರಾಟ ರದ್ದುಗೊಳಿಸಿದ ಇಂಡಿಗೊ

Last Updated 13 ಮಾರ್ಚ್ 2018, 6:47 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಗೆ ಸೇರಿದ ಎಂಟು ‘ಎ320ನಿಯೊ’ ವಿಮಾನಗಳು ದೋಷಯುಕ್ತ ಎಂಜಿನ್‌ಗಳನ್ನು ಹೊಂದಿದ್ದು, ಅವುಗಳ ಹಾರಾಟ ಸ್ಥಗಿತಗೊಳಿಸಬೇಕು ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ. ಇದರ ಬೆನ್ನಲ್ಲೇ, ದೇಶೀಯವಾಗಿ ಹಾರಾಟ ನಡೆಸುವ 47 ವಿಮಾನಗಳ ಹಾರಾಟವನ್ನು ಇಂಡಿಗೊ ಮಂಗಳವಾರ ರದ್ದುಪಡಿಸಿದೆ. ಗೋಏರ್‌ ಸಂಸ್ಥೆಯ ಮೂರು ವಿಮಾನಗಳ ಎಂಜಿನ್‌ನಲ್ಲೂ ದೋಷ ಕಾಣಿಸಿಕೊಂಡಿದೆ.

ಹಾರಾಟ ರದ್ದಾದ ವಿಮಾನಗಳಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದರಾಬಾದ್, ಪಟ್ನಾ, ಶ್ರೀನಗರ, ಭುವನೇಶ್ವರ, ಅಮೃತಸರ, ಗುವಾಹಟಿ ಮತ್ತಿತರ ಕಡೆಗಳಿಂದ ಸಂಚರಿಸಬೇಕಿದ್ದ ವಿಮಾನಗಳೂ ಒಳಗೊಂಡಿವೆ.

ಸೋಮವಾರ ಲಖನೌಗೆ ತೆರಳಬೇಕಿದ್ದ ಇಂಡಿಗೊ ವಿನಮಾನ ಹಾರಾಟ ಆರಂಭಿಸಿದ 40 ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅಹಮದಾಬಾದ್‌ಗೆ ವಾಪಸಾಗಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ತಪಾಸಣೆ ನಡೆಸಿತ್ತು.

‘ಎ320ನಿಯೊ’ ವಿಮಾನಗಳಲ್ಲಿ ‘ಇಎಸ್‌ಎನ್ 450’ ಎಂಜಿನ್‌ಗೆ ಬದಲಾಗಿ ‘ಪಿಡಬ್ಲ್ಯು110’ ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಅವುಗಳ ಹಾರಾಟವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೋಮವಾರ ನೀಡಿದ್ದ ಆದೇಶದಲ್ಲಿ ಡಿಜಿಸಿಎ ಸೂಚಿಸಿತ್ತು. ‘ಎ320ನಿಯೊ’ ಎಂಜಿನ್ ಹೊಂದಿರುವ ಮೂರು ಇಂಡಿಗೊ ವಿಮಾನಗಳ ಕಾರ್ಯಾಚರಣೆಯನ್ನು ಈ ಹಿಂದೆಯೇ ಸ್ಥಗಿತಗೊಳಿಸಲಾಗಿದೆ.

ಸೋಮವಾರವೇ ಇಂಡಿಗೊ ಮತ್ತು ಗೋಏರ್ ಸಂಸ್ಥೆಗಳ ಹತ್ತಾರು ವಿಮಾನಗಳ ಹಾರಾಟ ನಿಲ್ಲಿಸಲಾಗಿತ್ತು. ವಿಮಾನಗಳ ಹಾರಾಟ ದಿಢೀರ್ ರದ್ದಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.

ದೇಶದಲ್ಲಿ ಪ್ರತಿ ದಿನ ಸುಮಾರು 1,000 ಇಂಡಿಗೊ ವಿಮಾನಗಳು ಹಾರಾಟ ನಡೆಸುತ್ತಿವೆ. ದೇಶೀಯ ವಿಮಾನಯಾನದಲ್ಲಿ ಶೇ 40ರಷ್ಟು ಇಂಡಿಗೊದ ಪಾಲಿದೆ. ಗೋಏರ್‌ ಶೇ 10ರ ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT