ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ನೇಮಕಾತಿ ಮುಂದುವರಿಕೆಗೆ ಅನುಮತಿ

Last Updated 25 ಫೆಬ್ರುವರಿ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿನ ಒಟ್ಟು 1,203 ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿರುವ ಹೈಕೋರ್ಟ್‌, ‘ಈ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಆದೇಶಿಸಿದೆ.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಿ ರದ್ದುಪಡಿಸಬೇಕು’ ಎಂದು ಕೋರಿ ಕೆ.ಆರ್.ಯೋಗೀಶ ಸೇರಿದಂತೆ ಹೈದರಾಬಾದ್-ಕರ್ನಾಟಕ ಹೊರತುಪಡಿಸಿದ ಪ್ರದೇಶಗಳ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಲ್ಲಿಸಿರುವ ರಿಟ್‌ ಅರ್ಜಿ
ಯನ್ನು ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ರಾಜ್ಯದ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿ ಮಧ್ಯಂತರ ತಡೆ ನೀಡಿರುವುದರಿಂದ ತೊಂದರೆಯಾಗಲಿದೆ. ಆದ್ದರಿಂದ, ಮಧ್ಯಂತರ ಆದೇಶ ತೆರವು ಮಾಡಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, 2019ರ ಡಿಸೆಂಬರ್ 20ರಂದು ಆಯ್ಕೆ ಪಟ್ಟಿಗೆ ನೀಡಿದ್ದ ಮಧ್ಯಂತರ ತಡೆ ಆದೇಶ ಮಾರ್ಪಾಡು ಮಾಡಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದೆ.

‘ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಲು ಒತ್ತಾಯ’

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವೇಳೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಹಲವು ಉಪನ್ಯಾಸಕರು ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದು, ಪದವಿ ಕಾಲೇಜುಗಳ ಎಫ್‌ಡಿಎ, ಎಸ್‌ಡಿಎ ಸಿಬ್ಬಂದಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗುತ್ತಿದ್ದರೂ, ಅತಿಥಿ ಉಪನ್ಯಾಸಕರಿಗೆ ಅಂತಹ ಸೌಲಭ್ಯ ನೀಡದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇವರ ಮಟ್ಟಿಗೆ ಗರಿಷ್ಠ ವಯೋಮಿಯನ್ನು ಹೆಚ್ಚಿಸಬೇಕು ಎಂದು ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಶಿವಕುಮಾರ್ ಯರಗಟ್ಟಿಹಳ್ಳಿ ಹೇಳಿದ್ದಾರೆ.

‘ಅತಿಥಿಉಪನ್ಯಾಸಕರ ಗೌರವಧನವನ್ನು₹ 5 ಸಾವಿರದಷ್ಟು ಹೆಚ್ಚಿಸುವುದಾಗಿ ಸರ್ಕಾರ ಹೇಳಿತ್ತು, ಆದರೆ ಮಾಡಿಲ್ಲ. ಸದ್ಯ ರಾಜ್ಯದಲ್ಲಿ 13,500ರಷ್ಟು ಅತಿಥಿ ಉಪನ್ಯಾಸಕರಿದ್ದು, ಸರ್ಕಾರ 1,242 ಹುದ್ದೆಗಳಿಗೆ ಕಾಯಂ ಉಪನ್ಯಾಸಕರನ್ನುನೇಮಕಾತಿ ಮಾಡಿಕೊಂಡರೆ ಸುಮಾರು 2,500ರಷ್ಟು ಮಂದಿಗೆ ಉದ್ಯೋಗ ಇಲ್ಲದಾಗುತ್ತದೆ. ಸರ್ಕಾರ ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕೆಲಸದ ಭದ್ರತೆ ಹಾಗೂ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT