ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ಲಿಕ್ ಪರೀಕ್ಷೆ ರದ್ದತಿಗೆ ಆಗ್ರಹ

Last Updated 12 ಮಾರ್ಚ್ 2023, 23:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್‌ ಆದೇಶವನ್ನು ಗೌರವಿಸಿ ಶಿಕ್ಷಣ ಇಲಾಖೆಯು ಪರೀಕ್ಷೆ ರದ್ದುಗೊಳಿಸಬೇಕು ಎಂದು ಶಿಕ್ಷಣ ತಜ್ಞರು, ಚಿಂತಕರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಸಾಹಿತಿಗಳಾದ ‌ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಮೀನಾಕ್ಷಿ ಬಾಳಿ, ಅಖಿಲ ಭಾರತ ಶಿಕ್ಷಕರ ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್., ಎಸ್ಎಫ್‌ಐ ಮುಖಂಡ ಅಮರೇಶ ಕಡಗದ, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಯೋಗಾನಂದ ಬಿ.ಎನ್. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯೂ ಈ ಹೇಳಿಕೆಯನ್ನು ಬೆಂಬಲಿಸಿದೆ.

ಪಬ್ಲಿಕ್‌ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ರದ್ದುಗೊಳಿಸಿದೆ. ಅದರ ವಿರುದ್ಧ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ತುರ್ತು ವಿಚಾರಣೆ ಮತ್ತು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪಬ್ಲಿಕ್‌ ಪರೀಕ್ಷೆಗಳನ್ನು ರದ್ದುಗೊಳಿಸುವ ಬದಲಿಗೆ ‘ನ್ಯಾಯಾಲಯದ ಆದೇಶದಂತೆ ಪರೀಕ್ಷೆ ಮುಂದೂಡಲಾಗಿದೆ’ ಎಂದು ಪ್ರಕಟಿಸಿದ್ದಾರೆ. ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದ್ದು, ನ್ಯಾಯಾಂಗ ನಿಂದನೆಯೂ ಆಗುತ್ತದೆ ಎಂದಿದ್ದಾರೆ.

ಸರ್ಕಾರದ ಗೊಂದಲದಿಂದ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗುತ್ತಿದೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ಆಗುತ್ತಿದೆ. ಹೈಕೋರ್ಟ್‌ ಆದೇಶವನ್ನು ತಿರುಚಿ ಪರೀಕ್ಷೆ ಮುಂದೂಡುವುದಾಗಿ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ವಾಪಸ್‌ ಪಡೆಯಬೇಕು. ಪಬ್ಲಿಕ್‌ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT