‘ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು’
ರಾಮಯ್ಯ ಆಸ್ಪತ್ರೆ ಸಿಗ್ನಲ್‌ನಿಂದ ಬಿಇಎಲ್ ವೃತ್ತವನ್ನು ಸಂಪರ್ಕಿಸುವ (ನ್ಯೂ ಬಿಇಎಲ್ ರಸ್ತೆ) ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ, ವಾಹನ ಸವಾರರು ಮತ್ತು ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮೂರು ತಿಂಗಳಿಂದ ಈ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಕೂಡಲೇ ಚರಂಡಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.
ಪ್ರಕಾಶ್ ಕೆ.ಆರ್. ನ್ಯೂ ಬಿಇಎಲ್ ರಸ್ತೆ
ಬಿಬಿಎಂಪಿ ವಾರ್ಡ್ ಸಂಖ್ಯೆ 184ರ ಗುಬ್ಬಲಾಳದ ದೀಪಿಕಾ ಗಾರ್ಡನ್, ಜೆ.ಎನ್. ಡ್ರೀಮ್ಸ್ ಅಪಾರ್ಟ್‌ಮೆಂಟ್‌ಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ತುಂಬಾ ಗುಂಡಿಗಳು. ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಓಡಾಡಲು ತೀವ್ರ ತೊಂದರೆಯಾಗಿದೆ. ಈ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾದರೆ, ಬೇಸಿಗೆಯಲ್ಲಿ ವಾಹನ ಸವಾರರಿಗೆ ದೂಳಿನ ಮಜ್ಜನ ಮಾಡಿಸುತ್ತದೆ. ರಸ್ತೆ ಸಮಸ್ಯೆಯಿಂದಾಗಿ ಈ ಭಾಗಕ್ಕೆ ಆಟೊ, ಕ್ಯಾಬ್ ಚಾಲಕರು ಬರಲು ನಿರಾಕರಿಸುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇಲ್ಲಿನ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
ಸೋಮಶೇಖರ್, ಗುಬ್ಬಲಾಳ
ಜಲಮಂಡಳಿ ಸಿಬ್ಬಂದಿ ಪೈಪ್‌ಗಳನ್ನು ಅಳವಡಿಸುವುದಕ್ಕಾಗಿ ದುಬಾಸಿಪಾಳ್ಯದ ಮುಖ್ಯರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಆರು ತಿಂಗಳಿಂದ ಕೆಲಸ ಮಂದಗತಿಯಲ್ಲಿ ಸಾಗಿದೆ. ಇದರಿಂದ, ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ಮುಖ್ಯರಸ್ತೆಗೆ ಸಂಪರ್ಕಿಸಲು ಸುತ್ತು ಹಾಕಿಕೊಂಡು ಬರಬೇಕಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶಕ್ಕೆ ಕಲ್ಪಿಸಬೇಕು.
ಕೆ.ಎಂ. ಸಿದ್ದರಾಮು, ದುಬಾಸಿಪಾಳ್ಯ
ಅಮೃತಹಳ್ಳಿ ವಿಭಾಗಕ್ಕೆ ಹೊಂದಿಕೊಂಡಿರುವ ಕೈವಾರ ತಾತಯ್ಯ ಮುಖ್ಯರಸ್ತೆಯಲ್ಲಿ ಭೂಗತ ಕೇಬಲ್‌ನ ಗುಂಡಿ ಬಾಯ್ದೆರೆದುಕೊಂಡಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗೆ ಮುಚ್ಚಳವನ್ನು ಅಳವಡಿಸಬೇಕು.
ಶಿವಪ್ರಸಾದ್, ಅಮೃತಹಳ್ಳಿ
ಹೆಬ್ಬಾಳದ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳಿಂದಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚಾರ ಇನ್ನೂ ದುಸ್ತರ. ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಬಿಬಿಎಂಪಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ.
ಶಿವರಾಮ್, ಕೆಂಪಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.