ಬುಧವಾರ, ಸೆಪ್ಟೆಂಬರ್ 30, 2020
23 °C
‘ಸ್ಥಳೀಯ ಭಾಷೆಯಲ್ಲಿ ಕರಡು ಪ್ರಕಟಿಸಿ’

ಇಐಎ ಕರಡು ಅಧಿಸೂಚನೆ ವಿರೋಧಿಸಿ ಸರ್ಕಾರಕ್ಕೆ ವಿಜ್ಞಾನಿಗಳ ಬಹಿರಂಗ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಸರದ ಮೇಲಿನ ಪರಿಣಾಮ ವಿಶ್ಲೇಷಣೆ (ಇಐಎ) ಸಂಬಂಧಿಸಿದ ವಿವಾದಿತ ಕರಡು ಅಧಿಸೂಚನೆಯನ್ನು ವಿರೋಧಿಸಿ, ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳ 500ಕ್ಕೂ ಹೆಚ್ಚು ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.

ಐಐಎಸ್‌ಸಿ, ಐಐಎಸ್‌ಇಆರ್, ಐಐಟಿ, ಎನ್‌ಸಿಬಿಎಸ್, ಡಬ್ಲ್ಯುಐಐ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ‘ಅಧಿಸೂಚನೆಯ ಅಂಶಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಬೇಕು ಮತ್ತು ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಇದನ್ನು ಜಾರಿ ಮಾಡಲೇಬಾರದು’ ಎಂದು ಒತ್ತಾಯಿಸಿದ್ದಾರೆ. 

‘ಭಾಷೆಯೇ ಅರ್ಥವಾಗದಿದ್ದರೆ ಸ್ಥಳೀಯರು ಆಕ್ಷೇಪಣೆ ಸಲ್ಲಿಸಲು ಹೇಗೆ ಸಾಧ್ಯವಾಗುತ್ತದೆ’ ಎಂದೂ ಪ್ರಶ್ನಿಸಿದ್ದಾರೆ.

‘ಪರಿಸರದ ಸಂರಕ್ಷಣೆ ನಿಯಮಗಳನ್ನು ಬಿಗಿಗೊಳಿಸುವ ಬದಲು, ಅದನ್ನು ಸಾಕಷ್ಟು ಸಡಿಲಗೊಳಿಸಲಾಗಿದೆ. ಈ ನಿಯಮಗಳು ಜಾರಿಗೆ ಬಂದರೆ ಪರಿಸರದ ಮೇಲೆ ಸಾಕಷ್ಟು ಹಾನಿಯಾಗಲಿದೆ’ ಎಂದು ತಜ್ಞರು ಹೇಳಿದ್ದಾರೆ. 

ಈ ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಣೆಗಳನ್ನು ಸಲ್ಲಿಸಲು ಆ.11ರಂದು ಗಡುವು ನೀಡಲಾಗಿತ್ತು. ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್‌ ಸೆ.7ರವರೆಗೆ ಗಡುವು ವಿಸ್ತರಿಸಿದೆ. ಅಲ್ಲಿಯವರೆಗೂ ಈ ನಿಯಮಗಳನ್ನು ಅಂತಿಮಗೊಳಿಸುವಂತಿಲ್ಲ ಎಂದೂ ಹೇಳಿದೆ. 

ಇದನ್ನೂ ಓದಿ: ಇಐಎ ಕರಡಿಗೆ ಎಲ್ಲೆಲ್ಲೂ ಕೆಂಬಾವುಟ

‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಗಳನ್ನು ಕತ್ತರಿಸಿದರೂ, ಕೊನೆಗೆ ದಂಡ ಪಾವತಿಸಿ ಅನುಮೋದನೆ ಪಡೆಯಬಹುದು ಎಂದು ಪರಿಷ್ಕೃತ ನಿಯಮ ಹೇಳುತ್ತದೆ. ಸಾವಿರಾರು ಮರ ಕಡಿದು ದಂಡ ಪಾವತಿಸಿದರೆ ಪ್ರಯೋಜನವೇನು’ ಎಂದು ತಜ್ಞರು ಪ್ರಶ್ನಿಸಿದ್ದಾರೆ. 

‘ಅಧಿಸೂಚನೆ ಪ್ರಕಾರ, ಯೋಜನೆಯೊಂದರ ಸ್ಥಾಪನೆ ಅಥವಾ ಕಾರ್ಯಾರಂಭದ ನಂತರವೂ ಪರಿಸರದ ಅನುಮತಿ ಪಡೆಯಬಹುದಾಗಿದೆ. ಇದು ಕೂಡ, ಪರಿಸರ ಸಂರಕ್ಷಣೆಯ ನಿಯಮಗಳನ್ನು ಸಡಿಲಗೊಳಿಸಲಿದೆ’ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು