ಶನಿವಾರ, ಜುಲೈ 31, 2021
27 °C
ಬೆಂಗಳೂರು ಉತ್ತರ–ದಕ್ಷಿಣ ಜಿಲ್ಲೆಗಳ ಪಿಯು ಫಲಿತಾಂಶದಲ್ಲಿ ಶೇ 3ರಷ್ಟು ಹೆಚ್ಚಳ

ಪಿಯುಸಿ ಫಲಿತಾಂಶ | ಶ್ರಮ–ಏಕಾಗ್ರತೆಗೆ ಒಲಿಯಿತು ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ಶೇ 3ರಷ್ಟು ಪ್ರಗತಿ ಸಾಧಿಸಿವೆ. 

ಕಳೆದ ಬಾರಿ ಶೇ 72.68ರಷ್ಟು ಫಲಿತಾಂಶ ಪಡೆದಿದ್ದ ಬೆಂಗಳೂರು ಉತ್ತರ ಜಿಲ್ಲೆ ಈ ಬಾರಿ ಉತ್ತಮ ಸಾಧನೆ ಮಾಡಿದ್ದು, ಶೇ 75.54ರಷ್ಟು ಫಲಿತಾಂಶ ಪಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಶೇ 77.56ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇ 74.25ರಷ್ಟಿತ್ತು. 

ಮಲ್ಲೇಶ್ವರದ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಎಂ.ಎನ್. ಪ್ರೇರಣಾ ವಿಜ್ಞಾನ ವಿಭಾಗದಲ್ಲಿ, ಅರವಿಂದ ಶ್ರೀವತ್ಸ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ಹಲವು ಕಾಲೇಜುಗಳು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿವೆ. 

ದೀಕ್ಷಾ ವಿದ್ಯಾರ್ಥಿಗಳ ಸಾಧನೆ: ದೀಕ್ಷಾ ಸಂಸ್ಥೆಯಲ್ಲಿ ವಿಜ್ಞಾನ ವಿಷಯಗಳ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಟಿ.ಜಿ. ಅರ್ಪಿತಾ ಹತ್ವಾರ್‌ (590), ಎಚ್.ಆರ್. ಶ್ರುತಿ (589), ಎಂ.ಎಸ್. ರಾಘವೇಂದ್ರ ಮತ್ತು ಸುಪ್ರೀತಾ ರವಿಶಂಕರ್‌ (588), ಬಿ.ಎಸ್. ಶ್ರೀಹರಿ ಅಡಿಗ (587) ವಿ. ದೀಪಾ (586) ಉತ್ತಮ ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಡಾ. ಶ್ರೀಧರ್‌ ಹೇಳಿದ್ದಾರೆ. 

ಪಿಇಎಸ್‌ ಕಾಲೇಜಿಗೆ ಉತ್ತಮ ಫಲಿತಾಂಶ: ಪಿಇಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅನ್ವಿತಾ ಶೆಟ್ಟಿ ಶೇ 98.67, ಕಲ್ಯಾಣ್‌ ಶೇ 98.17, ಎಂ.ಆರ್. ವೈಷ್ಣವಿ ಶೇ 98 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪೃಥ್ವಿ ಕೆ. ಶೇ 95. 50, ಪೂರ್ಣೇಶ್‌ ಶೇ 94, ಯಶವಂತ್‌ ಚೌಧರಿ ಶೇ 93 ಅಂಕಗಳ ಸಾಧನೆ ಮಾಡಿದ್ದಾರೆ. 

ಶ್ರೀನಿಧಿಗೆ ಶೇ 92 ಅಂಕ: ಯಲಹಂಕದ ಐಸಿಬಯೋ ಮಹೇಶ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ ಶೇ 92.16ರಷ್ಟು (553) ಅಂಕ ಗಳಿಸಿದ್ದಾರೆ. 

ವಿಜ್ಞಾನಕ್ಕೆ ನಗರದ ‘ಪ್ರೇರಣೆ’
ಮಲ್ಲೇಶ್ವರದ ವಿದ್ಯಾಮಂದಿರದ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎನ್. ಪ್ರೇರಣಾ ಅವರು ವಿಜ್ಞಾನ ವಿಭಾಗಕ್ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ. 

‘ಅಂದಿಂದಿನ ಪಾಠವನ್ನು ಅಂದಂದೇ ಓದಿ ಮುಗಿಸುತ್ತಿದ್ದೆ. ಭಾನುವಾರದಂದು ಆ ವಾರದ ಪಾಠಗಳನ್ನು ಪುನರ್‌ಮನನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಅಂತಿಮವಾಗಿ ಪರೀಕ್ಷೆಯನ್ನು ಅತ್ಯಂತ ಸುಲಭವಾಗಿ ಎದುರಿಸಲು ಸಾಧ್ಯವಾಯಿತು’ ಎಂದು ಹೇಳುತ್ತಾರೆ ಪ್ರೇರಣಾ. 

‘ನಾನು ಯಾವುದೇ ಟ್ಯೂಷನ್ ಗೆ ಹೋಗಲಿಲ್ಲ. ಒಬ್ಬಳೇ ಓದಿಕೊಳ್ಳುತ್ತಿದ್ದೆ. ಓದಿನ ಜೊತೆಗೆ ಸಂಗೀತವನ್ನೂ ಕಲಿತಿದ್ದೆ. ಆಗಾಗ ಸಂಗೀತ ಹೇಳಿಕೊಳ್ಳುವ ಮೂಲಕ ನಿರಾಳವಾಗುತ್ತಿದ್ದೆ. ನನ್ನ ತಾಯಿ ಉಪನ್ಯಾಸಕಿ, ತಂದೆ ಎಂಜಿನಿಯರ್. ತಂದೆ–ತಾಯಿ ಇಬ್ಬರೂ ಓದಿನ ಪ್ರತಿ ಹಂತದಲ್ಲಿ ನೆರವಾಗಿದ್ದರು. ಎಲ್ಲ ಉಪನ್ಯಾಸಕರು ಉತ್ತಮ ಮಾರ್ಗದರ್ಶನ ನೀಡಿದರು. ನಾನು ಇಷ್ಟೇ ಗಂಟೆ ಓದಬೇಕು ಎಂದು ನಿಗದಿ ಮಾಡಿಕೊಂಡಿರಲಿಲ್ಲ. ಬದಲಿಗೆ ಅಂದಂದಿನ ಪಾಠವನ್ನು ಅಂದಂದೇ ಓದಿಕೊಂಡೆ. ಪಿಯುಸಿ ಕೊನೆ ಪರೀಕ್ಷೆ ದಿನ ಕೊರೊನಾದಿಂದ ಪರೀಕ್ಷೆಗೆ ಹೋಗಲು ಭಯ ಆಗುತ್ತಿತ್ತು. ಅಲ್ಲಿಗೆ ಹೋದ ನಂತರ ಉತ್ತಮ ವ್ಯವಸ್ಥೆ  ನೋಡಿ ನಿರಾತಂಕವಾಗಿ ಪರೀಕ್ಷೆ ಬರೆದೆ’ಎಂದು ಪ್ರೇರಣಾ ಹೇಳಿದರು.

(

ಮಲ್ಲೇಶ್ವರದ ವಿದ್ಯಾಮಂದಿರ ಶಾಲೆಯ ಅರವಿಂದ ಶ್ರೀವತ್ಸ ವಾಣಿಜ್ಯ ವಿಭಾಗಕ್ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

‘ಎಷ್ಟು ಹೊತ್ತು ಓದುತ್ತೇವೆ ಎಂಬುದಕ್ಕಿಂತ ಎಷ್ಟು ಏಕಾಗ್ರಚಿತ್ತದಿಂದ ಅಧ್ಯಯನ ಮಾಡುತ್ತೇವೆ ಎಂಬುದು ಮುಖ್ಯ. ದಿನಕ್ಕೆ ನಾನು ಮೂರು–ನಾಲ್ಕು ತಾಸು ಮಾತ್ರ ಓದುತ್ತಿದ್ದೆ. ಹೆಚ್ಚು ಏಕಾಗ್ರತೆಯಿಂದ ಅಭ್ಯಾಸ ಮಾಡುತ್ತಿದ್ದೆ’ ಎಂದು ಅರವಿಂದ ಶ್ರೀವತ್ಸ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಯಾವ ಪ್ರಶ್ನೆಗೆ ಚೆನ್ನಾಗಿ ಉತ್ತರ ಗೊತ್ತಿರುತ್ತಿತ್ತೊ ಅದನ್ನು ಮೊದಲು ಬರೆಯುತ್ತಿದ್ದೆ. ನಂತರ, ಉಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಈ ಯೋಜನೆ ಹೆಚ್ಚು ಅಂಕಗಳನ್ನು ತಂದುಕೊಟ್ಟಿತು ಎಂದು ಹೇಳಿದರು. 

ತಂದೆ ಶ್ರೀನಿವಾಸನ್‌ ಐಟಿ ಕಂಪನಿಯೊಂದರಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದಾರೆ. ತಾಯಿ ಚಿತ್ರಾ ಗೃಹಿಣಿ. ಪೋಷಕರು ಮತ್ತು ಉಪನ್ಯಾಸಕರ ಮಾರ್ಗದರ್ಶನದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಮುಂದೆ ಸಿಎ ಮತ್ತು ಬಿಕಾಂ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಅರವಿಂದ ಹೇಳಿದರು.

ಶ್ರಮಕ್ಕೆ ಸಿಕ್ಕಿತು ‘ಯಶ’
ಸಾಧನೆಗೆ ಬಡತನ ಅಡ್ಡಿ ಅಲ್ಲ ಎಂಬ ಮಾತಿಗೆ ಉಲ್ಲಾಳದ ಆಕ್ಸ್‌ಫರ್ಡ್‌ ಸ್ವತಂತ್ರ ಪಿಯು ಕಾಲೇಜಿನ ಎ.ಯಶವಂತ್‌ ಉದಾಹರಣೆ. ಅವರು ಪಿಯು ವಿಜ್ಞಾನ ವಿಭಾಗದಲ್ಲಿ ಶೇ 95.5 ಅಂಕಗಳನ್ನು ಗಳಿಸಿದ್ದಾರೆ. 

ತಂದೆ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಬಟ್ಟೆ ಹೊಲಿಯುತ್ತಾರೆ. ಯಶವಂತನ ಪ್ರತಿಭೆ ಗಮನಿಸಿದ ಪ್ರಾಚಾರ್ಯರು, ಆರ್ಥಿಕ ನೆರವು ನೀಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 97ರಷ್ಟು ಅಂಕಗಳನ್ನು ಗಳಿಸಿದ್ದೆ‌. ನಂತರ ಆಕ್ಸ್‌ಫರ್ಡ್‌ ಪಿಯು ಕಾಲೇಜಿಗೆ ಸೇರಿದೆ. ಆದರೆ, ವರ್ಷಕ್ಕೆ ₹70 ಸಾವಿರದಷ್ಟು ಖರ್ಚು ಬರುತ್ತಿತ್ತು. ನನ್ನ ಬಳಿ ಹಣ ಇರಲಿಲ್ಲ. ಟ್ಯೂಷನ್ ಮಾಡುತ್ತಿದ್ದೆ. ಅದು ತಮ್ಮನ ಓದಿಗೇ ಸಾಲುತ್ತಿರಲಿಲ್ಲ. ಈ ವಿಷಯ ತಿಳಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಆರ್. ಸುಪ್ರೀತ್ ಮನೆಗೆ ಬಂದು ಶಿಕ್ಷಣಕ್ಕೆ ನೆರವಾಗುವುದಾಗಿ ಹೇಳಿದರು. ಶುಲ್ಕ, ಯೂನಿಫಾರ್ಮ್, ಪುಸ್ತಕ ಹೀಗೆ ಎಲ್ಲದಕ್ಕೂ ಅವರೇ ನೆರವು ನೀಡಿದರು’ ಎಂದು ಯಶವಂತ್‌ ‘ಪ್ರಜಾವಾಣಿ’ಗೆ ಹೇಳಿದರು. 

'ತರಗತಿಗಳಲ್ಲಿ ಶ್ರದ್ಧೆಯಿಂದ ಕೇಳಿದರೆ ಸಾಕು. ಯಾವ ಟ್ಯೂಷನ್ನೂ ಬೇಕಿಲ್ಲ. ಇದರ‌ ಜತೆಗೆ ಧ್ಯಾನ ಮಾಡುವುದು ಒಳ್ಳೆಯದು’ ಎನ್ನುತ್ತಾರೆ ಯಶವಂತ್.

‘ಯಶವಂತ್‌ ಮುಂದೆ ವೈದ್ಯಕೀಯ ಶಿಕ್ಷಣ ಅಥವಾ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತೇನೆ ಎಂದರೆ ಅದರ ಶುಲ್ಕವನ್ನು ಭರಿಸುವ ದಾನಿಗಳನ್ನೂ ಹುಡುಕಿದ್ದೇನೆ’ ಎಂದು ಪ್ರಾಚಾರ್ಯ ಸುಪ್ರೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

***

ಸಾಧಕರ ಫೋಟೊ ಕಳಿಸಿ
ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಭಾವಚಿತ್ರವನ್ನು ‘ಪ್ರಜಾವಾಣಿ’ಯಲ್ಲಿ ಪ್ರಕಟಿಸಲಾಗುವುದು. ವಿಜ್ಞಾನ ವಿಭಾಗದಲ್ಲಿ ಶೇ 95, ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಅಂಕಪಟ್ಟಿಯೊಂದಿಗೆ ಭಾವಚಿತ್ರವನ್ನು ವಾಟ್ಸ್‌ ಆ್ಯಪ್‌ ಮಾಡಿ.
ವಾಟ್ಸ್ ಆ್ಯಪ್‌ ಸಂಖ್ಯೆ: 96060–38256

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು