ಗುರುವಾರ , ನವೆಂಬರ್ 21, 2019
21 °C
ಸಿ.ಎಂ ಜೊತೆ ಚರ್ಚಿಸಿ ತೀರ್ಮಾನ –ಸಚಿವ ಸುರೇಶ್ ಕುಮಾರ್

ಸರ್ಕಾರಿ ‍ಪಿಯು ಕಾಲೇಜುಗಳಲ್ಲಿ ಬಿಸಿಯೂಟ

Published:
Updated:
Prajavani

ಬೆಂಗಳೂರು: ‘ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರಿ ಪದವಿಪೂರ್ವ ಕಾಲೇಜು (ಪಿಯು) ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ತಿಳಿಸಿದರು. 

ಅದಮ್ಯ ಚೇತನ ಹಾಗೂ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ‘ಸಾಯಿ ಶ್ಯೂರ್ ಪೌಷ್ಟಿಕ ಹಾಲು’ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. 

‘‍ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಬೇಕು ಎಂಬ ಪ್ರಸ್ತಾಪಕ್ಕೆ ನನ್ನ ಸಹಮತವಿದೆ. ಆರ್ಥಿಕ ವೆಚ್ಚದ ಬಗ್ಗೆ 
ಮುಖ್ಯಮಂತ್ರಿ ಅವರ ಜತೆಗೆ ಚರ್ಚಿಸಿ, ಮುಂದಿನ  ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

ಅದಮ್ಯ  ಚೇತನ  ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಅವರು, ‘ಸಂಸ್ಥೆಯು ಮಧ್ಯಾಹ್ನದ ಬಿಸಿಯೂಟ  ಪೂರೈಸುತ್ತಿರುವ ಸರ್ಕಾರಿ ಹಾಗೂ  ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವುದು ನಮ್ಮ ಪ್ರಮುಖ ಉದ್ದೇಶ. ಬಾದಾಮಿ ಮಿಶ್ರಿತ ಪೌಷ್ಟಿಕಾಂಶಯುಕ್ತ ಪೌಡರನ್ನು ಮಿಶ್ರ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ವಿದ್ಯಾರ್ಥಿ ಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಬೆಳಿಗ್ಗೆ  ಉಪಾಹಾರ ನೀಡಲೂ ಅದಮ್ಯ  ಚೇತನ ಸಂಸ್ಥೆ ಮುಂದಾಗಿದೆ.
ಶೀಘ್ರದಲ್ಲಿ ಕಲಬುರ್ಗಿ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಸತ್ಯ  ಸಾಯಿ  ಅನ್ನಪೂರ್ಣಟ್ರಸ್ಟ್‌ ಜೊತೆಗೂಡಿ ಉಪಾಹಾರ ನೀಡುವ ಕಾರ್ಯಕ್ರಮಕ್ಕೆ  ಚಾಲನೆ  ನೀಡಲಾಗುವುದು’ ಎಂದು ವಿವರಿಸಿದರು.

 

ಪ್ರತಿಕ್ರಿಯಿಸಿ (+)