ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ: ಅನಂತನಾಗ್‌ಗೆ ‘ಜೀವಮಾನ ಸಾಧನೆ ಪ್ರಶಸ್ತಿ’

ಪ್ರಜಾವಾಣಿ @75ರ ಸಂಭ್ರಮದಲ್ಲಿ ಸಿನಿ ತಾರೆಯರಿಗೆ ಪ್ರಶಸ್ತಿ ಪ್ರದಾನ
Published 3 ಜೂನ್ 2023, 22:19 IST
Last Updated 3 ಜೂನ್ 2023, 22:19 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಸಿನಿ ತಾರೆಯರ ದಂಡೇ ಅಲ್ಲಿ ನೆರೆದಿತ್ತು. ವರ್ಣ ರಂಜಿತ ಅದ್ದೂರಿ ವೇದಿಕೆಯಲ್ಲಿ ಚಂದನವನದ ಪ್ರತಿಭೆಗಳು ಪ್ರಜ್ವಲಿಸಿದರು. ಮನೋಜ್ಞ ಅಭಿನಯದ ಮೂಲಕ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿರುವ ಕನ್ನಡ ಚಿತ್ರರಂಗದ ಹೊಳೆವ ನಕ್ಷತ್ರ ಅನಂತನಾಗ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ@75ರ ಸಂಭ್ರಮದ ಅಂಗವಾಗಿ ಇಲ್ಲಿನ ಪ್ರೆಸ್ಟೀಜ್ ಶ್ರೀಹರಿಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದಲ್ಲಿ ನಡೆದ ಚೊಚ್ಚಲ ’ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ‘ ಸಮಾರಂಭ ಬಹು ದಿನಗಳ ಕುತೂಹಲಕ್ಕೆ ತೆರೆ ಎಳೆಯಿತು. 75ರ ಸಂಭ್ರಮದಲ್ಲಿರುವ ಪ್ರಜಾವಾಣಿ, ಬದುಕಿನ ಅಮೃತ ವರ್ಷ ಆಚರಿಸಿಕೊಂಡಿರುವ ಕನ್ನಡದ ಬಹುಮುಖ ಪ್ರತಿಭೆ ಅನಂತನಾಗ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಈ ಕ್ಷಣಕ್ಕೆ ಚಿತ್ರರಂಗ, ಸಾಹಿತ್ಯ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಸಾಕ್ಷಿಯಾದರು.

ಅನಂತನಾಗ್ ಅವರನ್ನು ಗುಣಗಾನ ಮಾಡಿದ ಸಿದ್ದರಾಮಯ್ಯ, ಅವರನ್ನು ಅಪ್ಪಿ ಆಲಿಂಗಿಸಿದರು. ಈ ವೇಳೆ ಅನಂತನಾಗ್ ಅವರು ಭಾವುಕರಾದರು. ‘ಅನಂತ’ ಪ್ರತಿಭೆಗೆ ನೆರೆದಿದ್ದ ಪ್ರೇಕ್ಷಕರು ಕರತಾಡನದ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಅನಂತನಾಗ್, ‘ಇದು ಪ್ರಜಾವಾಣಿಯ ಜತೆಗಿನ ಹಳೆಯ ಋಣ ಅನಿಸುತ್ತದೆ. ಮುಂಬೈನಲ್ಲಿ ರಂಗಭೂಮಿ ನಟನಾಗಿ ಅಭಿನಯ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಬೆಂಗಳೂರಿಗೆ ಬಂದು, ಪ್ರಜಾವಾಣಿ ಕಚೇರಿಗೆ ಬರುವಂತೆ ದೂರವಾಣಿ ಕರೆ ಬಂದಿತು. ಅಲ್ಲಿ ವೈಎನ್‌. ಕೃಷ್ಣಮೂರ್ತಿ ಸುದ್ದಿ ಸಂಪಾದಕರಾ್ಗಿದ್ದರು. ಅವರನ್ನು ಭೇಟಿ ಮಾಡಿದೆ. ಗುರುಸ್ವಾಮಿ, ನೆಟಕಲ್ಲಪ್ಪ ಅವರ ದರ್ಶನ ಪಡೆದೆ. ರಾಮಚಂದ್ರ ರಾಯರು ಸಂಪಾದಕರಾಗಿದ್ದರು. ಅಲ್ಲಿ ಜಿ.ವಿ. ಅಯ್ಯರ್, ವೈಎನ್‌ಕೆ ಹಾಗೂ ಗಿರೀಶ ಕಾರ್ನಾಡ ಅವರನ್ನು ಭೇಟಿ ಮಾಡುವಂತೆ ಸೂಚಿಸಿ, ನೀನು ಒಂದು ಸಿನಿಮಾ ಮಾಡಬೇಕು ಅಂದರು. ಮೊದಲ ಚಿತ್ರ ‘ಸಂಕಲ್ಪ’ದ ಅವಕಾಶ ದೊರೆತದ್ದು ಅಲ್ಲಿಯೇ’ ಎಂದು ಸ್ಮರಿಸಿಕೊಂಡರು.

‘ಪ್ರಜಾವಾಣಿಗೆ 75 ಆದಾಗ ನನಗೂ 75 ಆಗಿದೆ. ಇದು ಸಂತಸವನ್ನುಂಟು ಮಾಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರದಿಂದ ‘ಜೀವಮಾನದ ಸಾಧನೆ’ ಪ್ರಶಸ್ತಿ ಸಿಕ್ಕಿತ್ತು. ಈಗ ಅವರ ಕೈಯಿಂದಲೇ ಮತ್ತೊಂದು ಬಾರಿ ‘ಜೀವಮಾನ ಸಾಧನೆ’ ಪ್ರಶಸ್ತಿ ಸಿಕ್ಕಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಸ್ತುತ ಪ್ರಾಯೋಜಕತ್ವ ವಹಿಸಿದ ಕಾರ್ಯಕ್ರಮ ಇದಾಗಿತ್ತು.

‘ನನ್ನ ಮೇಲೆ ದೆವ್ವ ಬರುತ್ತದೆ’

ನಿರೂಪಕ ರಮೇಶ್ ಅರವಿಂದ್ ಅವರು ಸಿದ್ದರಾಮಯ್ಯ ಅವರಿಗೆ ‘ನಾನಿನ್ನ ಬಿಡಲಾರೆ’ ಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, ಅವರ ಹಲವು ಚಿತ್ರ ನೋಡಿದ್ದೇನೆ. ಅವು ಈಗ ನೆನಪಿಲ್ಲ. ‘ನಾನಿನ್ನ ಮರೆಯಲಾರೆ’ ನೋಡಿದ್ದೇನೆ ಅಂದರು. ಅದಕ್ಕೆ ಪ್ರತಿಕ್ರಿಯಿಸಿದ ಅನಂತ್, ‘ಅದು ರಾಜ್‌ಕುಮಾರ್ ಅವರ ಚಿತ್ರ. ನಾನು ಮಾಡಿದ ಚಿತ್ರದಲ್ಲಿ ನನ್ನ ಮೈ ಮೇಲೆ ದೆವ್ವ ಬರುತ್ತದೆ’ ಎಂದು ಹೇಳಿದರು. ಇದು ಸಭಿಕರು ನಗೆಗಡಲಲ್ಲಿ ತೇಲುವಂತೆ ಮಾಡಿತು.

LIVE: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ, 'ಕಾಂತಾರ'ಕ್ಕೆ ಅತ್ಯುತ್ತಮ‌ ಚಿತ್ರ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT