ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಯಿಗಳ ಅಕ್ರಮ ತಳಿ ಸಂವರ್ಧನೆ ನಿಯಂತ್ರಿಸಿ’

ಶ್ವಾನಗಳ ಆರೋಗ್ಯದ ಬಗ್ಗೆ ಕಾಳಜಿ ತೋರದ ತಳಿ ಅಭಿವೃದ್ಧಿ ಕೇಂದ್ರಗಳು: ಪ್ರಾಣಿ ಪ್ರಿಯರ ಆರೋಪ
Last Updated 2 ಡಿಸೆಂಬರ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ನಾಯಿಗಳ ತಳಿಯನ್ನು ಅನಧಿಕೃತವಾಗಿ ಅಭಿವೃದ್ಧಿ ಪಡಿಸುವ ತಾಣಗಳು ನಗರದಲ್ಲಿ ಅವ್ಯಾಹತವಾಗಿ ಕಾರ್ಯ ನಿರ್ವಹಿಸುತ್ತಿವೆ. ನಾಯಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಇಂತಹ ತಳಿ ಅಭಿವೃದ್ಧಿ ಕೇಂದ್ರಗಳಿಗೆ ಕಡಿವಾಣ ಹಾಕಬೇಕು ಎಂದು ಶ್ವಾನಪ್ರಿಯರು ಒತ್ತಾಯಿಸಿದ್ದಾರೆ.

‘ಜನರಲ್ಲಿ ವಿಶೇಷ ತಳಿಯ ನಾಯಿಗಳನ್ನು ಸಾಕುವ ಗೀಳು ಹೆಚ್ಚುತ್ತಿದೆ. ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನೂ ನೋಡದೆಯೇ ಅವುಗಳನ್ನು ಸಾಕುತ್ತಾರೆ. ಇಂತಹ ನಾಯಿಗಳಿಗೆ ಬೇಡಿಕೆಯೂ ಹೆಚ್ಚು. ಅವುಗಳು ಅತ್ಯಂತ ಕಡಿಮೆ ದರದಲ್ಲಿ ಸಿಗಬೇಕು ಎಂದೂ ಅವುಗಳನ್ನು ಸಾಕುವವರು ಬಯಸುತ್ತಾರೆ. ವಿಶೇಷ ತಳಿಗಳ ನಾಯಿಗಳನ್ನು ಅಕ್ರಮವಾಗಿ ಸಂವರ್ಧನೆ ಮಾಡುತ್ತಿರುವ ಕೇಂದ್ರಗಳು ಈ ಬೇಡಿಕೆಯನ್ನು ಪೂರೈಸುತ್ತಿವೆ’ ಎನ್ನುತ್ತಾರೆ ಕ್ಯೂಪಾ ಸಂಸ್ಥೆಯ ಅಧ್ಯಕ್ಷೆ ಹಾಗೂ ಟ್ರಸ್ಟಿ ಸಂಧ್ಯಾ ಮಾದಪ್ಪ.

ಲಾಭವನ್ನೇ ಉದ್ದೇಶವನ್ನಾಗಿ ಹೊಂದಿರುವ ಇಂತಹ ತಳಿ ಸಂವರ್ಧನಾ ಕೇಂದ್ರಗಳಲ್ಲಿ ನಾಯಿಗಳನ್ನು ಬಹಳ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ. ಇಂತಹ ಕೇಂದ್ರಗಳನ್ನು ನಡೆಸುವವರು ತಮ್ಮ ಲಾಭಾಂಶದ ಅತ್ಯಲ್ಪ ಪ್ರಮಾಣವನ್ನೂ ನಾಯಿಗಳ ಯೋಗಕ್ಷೇಮಕ್ಕೆ ಬಳಸುವುದಿಲ್ಲ. ಹೆಚ್ಚೆಚ್ಚು ನಾಯಿಗಳನ್ನು ಹೊಂದುವುದೇ ಅವರ ಉದ್ದೇಶವಾಗಿರುತ್ತದೆ. ತಳಿಗಾಗಿ ಬೆಳೆಸುವ ನಾಯಿಗಳನ್ನು ಶೆಡ್‌ಗಳಲ್ಲಿ, ಗ್ಯಾರೇಜ್‌ಗಳ ಬಳಿ, ಗೋದಾಮುಗಳಲ್ಲಿ, ಟೆರೇಸ್‌ನಲ್ಲಿ ಹೀಗೆ.. ಎಲ್ಲೆಂದರಲ್ಲಿ ಸಾಕುತ್ತಾರೆ. ಅವುಗಳಿಗೆ ಸ್ವಾತಂತ್ರ್ಯ ಎಂಬುದೇ ಇಲ್ಲ. ಅವುಗಳ ಮಲ ಮೂತ್ರಗಳನ್ನು ಶುಚಿಗೊಳಿಸುವ ವ್ಯವಸ್ಥೆಯೂ ಇರುವುದಿಲ್ಲ. ಕಲುಷಿತ ವಾತಾವರಣದಿಂದ ಕೂಡಿದ ಪುಟ್ಟ ಗೂಡುಗಳಲ್ಲಿ ನಾಯಿಗಳನ್ನು ಕೂಡಿ ಹಾಕಲಾಗುತ್ತದೆ ಎಂಬ ದೂರುಗಳಿವೆ.

ಕೆಲವು ಕೇಂದ್ರಗಳಲ್ಲಿ ನಾಯಿಗಳಿಗೆ ಬದುಕಿ ಉಳಿಯಲು ಬೇಕಾದ ಕನಿಷ್ಠ ಪ್ರಮಾಣದ ಆಹಾರವನ್ನು ಮಾತ್ರ ನೀಡಲಾಗುತ್ತದೆ. ನಾಯಿಗಳು ಮರಿ ಹಾಕುವಂತೆ ಮಾಡುವುದಷ್ಟೇ ಈ ಕೇಂದ್ರಗಳನ್ನು ನಡೆಸುವವರ ಉದ್ದೇಶ. ಹಾಗಾಗಿ ಹೆಣ್ಣು ನಾಯಿಗಳು ಮೇಲಿಂದ ಮೇಲೆ ಮರಿ ಹಾಕುವಂತೆ ಅವರು ನೋಡಿಕೊಳ್ಳುತ್ತಾರೆ. ನಾಯಿಯು ಇನ್ನು ಮರಿ ಹಾಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ತಲುಪಿದ ಬಳಿಕ ಅದನ್ನು ಬೀದಿಪಾಲು ಮಾಡುತ್ತಾರೆ. ನಾಯಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಈ ರೀತಿ ಬೀದಿಪಾಲಾಗುವ ನಾಯಿಗಳಲ್ಲಿ ಬಹುತೇಕವು ನಾನಾ ಕಾಯಿಲೆಗಳನ್ನು ಹೊಂದಿರುತ್ತವೆ ಎಂದು ಬೇಸರ ತೋಡಿಕೊಳ್ಳುತ್ತಾರೆ ಪ್ರಾಣಿ ಪ್ರಿಯರು.

ತಳಿ ಸಂವರ್ಧನೆಗೆ ಬಳಸುವ ಹೆಣ್ಣು ನಾಯಿಯ ಆರೈಕೆ ಸರಿಯಾಗಿ ಮಾಡದ ಕಾರಣ, ಅದರ ಮರಿಗಳು ಹುಟ್ಟುವಾಗಲೇ ಆರೋಗ್ಯ ಸಮಸ್ಯೆ ಹೊಂದಿರುತ್ತವೆ. ಕೆಲವು ಮರಿಗಳು ವಂಶವಾಹಿ ಕಾಯಿಲೆಯನ್ನೂ ಹೊಂದಿರುತ್ತವೆ. ಮರಿಗಳು ಕನಿಷ್ಠ ಎಂಟು ವಾರಗಳವರೆಗಾದರೂ ತಾಯಿಯ ಜೊತೆಗಿರಬೇಕು. ಆದರೆ, ಮೂರರಿಂದ ಆರು ವಾರಗಳ ನಾಯಿ ಮರಿಗಳನ್ನೂ ಕೆಲವರು ಮಾರಾಟ ಮಾಡುತ್ತಾರೆ. ಹೆಚ್ಚಿನ ನಾಯಿಮರಿಗಳಿಗೆ ಲಸಿಕೆಗಳನ್ನೂ ಹಾಕಿಸುವುದಿಲ್ಲ. ಹಾಗಾಗಿ ಅವುಗಳು ರೋಗನಿರೋಧಕ ಶಕ್ತಿಯನ್ನೂ ಬೆಳೆಸಿಕೊಂಡಿರುವುದಿಲ್ಲ ಎಂಬುದು ಪ್ರಾಣಿಪ್ರಿಯರ ದೂರು.

ಮಾರಾಟಕ್ಕಾಗಿ ನಾಯಿಗಳ ತಳಿ ಸಂವರ್ಧನೆ ಮಾಡುವುದು ವಾಣಿಜ್ಯ ಚಟುವಟಿಕೆ. ಇದಕ್ಕೆ ಬಿಬಿಎಂಪಿಯ ಪರವಾನಗಿ ಪಡೆಯುವುದು ಅತ್ಯವಶ್ಯಕ. ಆದರೆ, ಅಕ್ರಮವಾಗಿ ಈ ಚಟುವಟಿಕೆ ನಡೆಸುವವರೇ ಹೆಚ್ಚು. ಈ ಬಗ್ಗೆ ಬಿಬಿಎಂಪಿ ನಿಗಾ ಇಡಬೇಕು. ಇಂತಹ ಅಕ್ರಮ ಕೇಂದ್ರಗಳ ಬಗ್ಗೆ ದೂರು ಬಂದಾಗ ಕ್ರಮಕೈಗೊಳ್ಳಲು ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಬೇಕು ಎಂದು ಅವರು ಒತ್ತಾಯಿಸುತ್ತಾರೆ.

‘ವಿಶೇಷ ತಳಿಯ ನಾಯಿಗಳನ್ನು ಖರೀದಿಸುವುದನ್ನು ನಿಲ್ಲಿಸಿದರೆ ಇಂತಹ ನಾಯಿ ತಳಿಗಳ ಅಕ್ರಮ ಸಂವರ್ಧನೆ ಕೇಂದ್ರಗಳಿಗೂ ಕಡಿವಾಣ ಬೀಳುತ್ತದೆ. ಸ್ಥಳೀಯ ದೇಸಿ ತಳಿಯ ನಾಯಿಗಳನ್ನೇ ಹೆಚ್ಚು ಸಾಕಬೇಕು. ರಕ್ಷಿಸಲಾದ ನಾಯಿಗಳನ್ನು ದತ್ತುಪಡೆದು ಸಾಕುವುದು ಹೆಚ್ಚಾಗಬೇಕು. ಆಗಮಾತ್ರ ನಾಯಿಗಳ ಮೇಲಿನ ಈ ಹಿಂಸೆಯನ್ನು ಕೊನೆಗಾಣಿಸಬಹುದು’ ಎನ್ನುತ್ತಾರೆ ಸಂಧ್ಯಾ ಮಾದಪ್ಪ.

ಪ್ರಜಾವಾಣಿ– ಕ್ಯೂಪಾ ಅಭಿಯಾನಕ್ಕೆ ಕೈಜೋಡಿಸಿ

ಬೀದಿಪ್ರಾಣಿಗಳನ್ನು ದ್ವೇಷಿಸುವವರ ದೃಷ್ಟಿಕೋನ ಬದಲಾಯಿಸಲು ಹಾಗೂ ಅವುಗಳ ಬಗ್ಗೆ ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ಪ್ರಜಾವಾಣಿ’ಯು ಕ್ಯೂಪಾ ಸಂಸ್ಥೆ ಜೊತೆ ಸೇರಿ ಅಭಿಯಾನ ಆರಂಭಿಸಿದೆ.

ಮೂಕ ಪ್ರಾಣಿಗಳ ಬದುಕಿನಲ್ಲೂ ಭರವಸೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ತಾವೂ ಕೈಜೋಡಿಸಬಹುದು. ಸ್ವಯಂಸೇವಕರಾಗುವ ಮೂಲಕ ಬೀದಿ ಪ್ರಾಣಿಗಳ ರಕ್ಷಿಸಲು, ಆರೈಕೆ ಮಾಡಲು ಹಾಗೂ ಅವುಗಳ ಮೇಲಾಗುವ ದೌರ್ಜನ್ಯ ತಪ್ಪಿಸಲು ನೆರವಾಗಬಹುದು. ಬೀದಿಪಾಲಾದ ಪ್ರಾಣಿಗಳನ್ನು ದತ್ತು ಪಡೆದು ಸಾಕಬಹುದು. ಬೀದಿ ಪ್ರಾಣಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗುವ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಿರಾದರೆ, ಇಲ್ಲಿರುವ ಕೊಂಡಿಯನ್ನು (bit.ly/PVCUPA) ಕ್ಲಿಕ್ಕಿಸಿ ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT