ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಹೆದ್ದಾರಿಗಳ ವಿಸ್ತರಣೆ ಕಾಮಗಾರಿ: 1,500 ಮರಗಳ ಸ್ಥಳಾಂತರ

ಆರು ಹೆದ್ದಾರಿಗಳ ವಿಸ್ತರಣೆ ಕಾಮಗಾರಿಗಳ ವೇಳೆ ಪಿಡಬ್ಲ್ಯುಡಿ ಕ್ರಮ
Last Updated 9 ಜುಲೈ 2022, 18:49 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ಬೆಂಗಳೂರು ಸುತ್ತಮುತ್ತ ಆರು ಹೆದ್ದಾರಿಗಳ ವಿಸ್ತರಣೆ ಕಾಮಗಾರಿಗಳ ವೇಳೆ 1,500 ಮರಗಳನ್ನು ಸ್ಥಳಾಂತರಿಸಿದೆ. ಮುಂದೆಯೂ ರಸ್ತೆ ಕಾಮಗಾರಿಗಳ ಸಂದರ್ಭದಲ್ಲಿ ಮರಗಳನ್ನು ಕಡಿಯುವ ಬದಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟ ಮಾರ್ಗವಾಗಿ ಆನೇಕಲ್‌ ಸಂಪರ್ಕಿಸುವ ಹೆದ್ದಾರಿ, ಅತ್ತಿಬೆಲೆ ಮೂಲಕ ಆನೇಕಲ್‌ ಮಾರ್ಗವಾಗಿ ಕಾಟಂನಲ್ಲೂರು ಗೇಟ್ (ಎನ್.ಹೆಚ್.-4) ತಲುಪುವ ಮಾರ್ಗಗಳಲ್ಲಿ ಒಟ್ಟು 155 ಕಿ.ಮೀ. ಉದ್ದದ ರಸ್ತೆ ವಿಸ್ತರಣೆ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳ ಸ್ಥಳಗಳಲ್ಲಿದ್ದ 2,100 ಮರಗಳ ಪೈಕಿ 1,500 ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು
ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ರಸ್ತೆ ಕಾಮಗಾರಿಗಳ ವೇಳೆ ಮರ ಗಳನ್ನು ಕಡಿದು ಪರಿಸರ ನಾಶಪಡಿಸುವ ಕ್ರಮವನ್ನು ಕೈಬಿಡಲಾಗುವುದು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಆರು ಹೆದ್ದಾರಿಗಳ ಇಕ್ಕೆಲಗಳಲ್ಲಿದ್ದ ಹೊಂಗೆ, ಗುಲ್‌ಮೊಹರ್, ಸಿಸ್ಸೋ, ಅರಳಿ, ಬೇವು, ಬಸರಿ, ಅಕೇಷಿಯಾ, ನೀಲಗಿರಿ ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಸ್ಥಳಾಂತರಿಸಿದ ಮರಗಳನ್ನು ಮಂಡೂರು, ಹೊಸಕೋಟೆ ಕೆರೆ, ಬೆಟ್ಟಕೋಟೆ ಅರಣ್ಯ, ಮೈಲನಹಳ್ಳಿ, ಹೆಸರಘಟ್ಟ, ಸೊಣ್ಣೇನಹಳ್ಳಿ, ದಿಬ್ಬೂರು, ಕೃಷ್ಣದೊಡ್ಡಿ, ಹಾರಗದ್ದೆ ಕೆರೆ, ಗುಂಜೂರ್ ಕೆರೆ ಮತ್ತಿತರ ಕಡೆಗಳಲ್ಲಿ ನೆಟ್ಟು ಪೋಷಿಸಲಾಗುತ್ತಿದೆ. ಸ್ಥಳಾಂತರದ ವೇಳೆ ಮರಗಳಿಗೆ ಹಾನಿಯಾಗದಂತೆ, ಅಪಾಯಕಾರಿ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲಾಗಿದೆ. ಆಯಾ ಮರಗಳಿಗೆ ಹೊಂದಿಕೆಯಾಗುವ ಮಣ್ಣನ್ನು ಗುರುತಿಸಿ, ಅಲ್ಲಿಯೇ ನಾಟಿ ಮಾಡಲಾಗುತ್ತಿದೆ’ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ಶಿವಪ್ರಸಾದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT