ರಸ್ತೆ ಮಧ್ಯೆ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಬೆಂಗಳೂರು: ಬನಶಂಕರಿ ಬಡಾವಣೆಯ 6ನೇ ಹಂತದ ಬಳಿ ಗಾಣಕಲ್ಲು ಗ್ರಾಮದ ಬಳಿ 80 ಅಡಿ ರಸ್ತೆ ಮಧ್ಯೆ ಸಿಲುಕಿದ್ದ ಭಾರಿ ಗಾತ್ರದ ಹೆಬ್ಬಾವನ್ನು ವನ್ಯಜೀವಿ ಕಾರ್ಯಕರ್ತರು ಮಂಗಳವಾರ ರಾತ್ರಿ ರಕ್ಷಣೆ ಮಾಡಿದರು.
ತುರಹಳ್ಳಿ ಕುರುಚಲು ಕಾಡಿನಿಂದ ಆಹಾರ ಹುಡುಕುತ್ತಾ ಬಂದಿದ್ದ ಈ ಹಾವು ವಾಹನಗಳ ಬೆಳಕಿನ ತೀವ್ರತೆ ಕಂಡು ವಿಚಲಿತಗೊಂಡಿತ್ತು. ರಸ್ತೆ ದಾಟುವಾಗ ವಿಭಜಕದ ಬಳಿ ಸಿಲುಕಿ ಕೊಂಡಿತ್ತು. ಈ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹೆಬ್ಬಾವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಿಬಿಎಂಪಿಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.
‘ರಾತ್ರಿ 2 ಗಂಟೆ ವೇಳೆ ನನಗೆ ಕರೆ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಹಾವನ್ನು ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತೆಗೆದುಕೊಂಡು ಹೋದೆವು. ಅಲ್ಲಿನ ಪಶುವೈದ್ಯರು ಹಾವಿನ ಆರೋಗ್ಯ ಪರಿಶೀಲನೆ ನಡೆಸಿದರು. ಅವರ ಸಲಹೆ ಮೇರೆಗೆ ಹಾವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದೇವೆ’ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ಪರಿಸರದಲ್ಲಿ ಹೆಬ್ಬಾವು ಕಾಣಿಸಿಕೊಳ್ಳುವುದು ಅಪರೂಪ. ನಾವು ನಾಲ್ಕು ವರ್ಷಗಳ ಹಿಂದೆ ಕೋಣನಕುಂಟೆ ಬಳಿ ಒಂದು ಹೆಬ್ಬಾವನ್ನು ರಕ್ಷಣೆ ಮಾಡಿದ್ದೆವು’ ಎಂದರು.
‘ತುರಹಳ್ಳಿ ಮೀಸಲು ಅರಣ್ಯ ಪರಿಸರದಲ್ಲಿ ಹೆಬ್ಬಾವುಗಳಿವೆ. ಆದರೆ, ನಗರೀಕರಣದ ಭರಾಟೆ ಹೆಚ್ಚಿದಂತೆ ಅವುಗಳ ನೈಸರ್ಗಿಕ ಆವಾಸ ಸ್ಥಾನ ಛಿದ್ರವಾಗುತ್ತಿದೆ. ಅಲ್ಲಿ ಅವುಗಳಿಗೆ ಆಹಾರ ಪ್ರಾಣಿಗಳೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಹಾಗಾಗಿ ಹಾವುಗಳು ಆಹಾರ ಅರಸುತ್ತಾ ಬೇರೆ ಕಡೆ ಹೊರಡುತ್ತವೆ’ ಎಂದರು.
ಅಂಕಿ ಅಂಶ
10 ಅಡಿ
ಹೆಬ್ಬಾವಿನ ಉದ್ದ
9 ಕೆ.ಜಿ
ಹಾವಿನ ತೂಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.