ಮಂಗಳವಾರ, ಜನವರಿ 28, 2020
19 °C
ಮಿಟ್ಟಗಾನಹಳ್ಳಿ ಬಳಿಯ ಕ್ವಾರಿ ಭರ್ತಿ– ಪರ್ಯಾಯ ವ್ಯವಸ್ಥೆಗೆ ತಿಣುಕಾಡುತ್ತಿರುವ ಪಾಲಿಕೆ

ವಿಲೇವಾರಿ ಸ್ಥಗಿತ–ಮನೆ ಬಾಗಿಲಲ್ಲೇ ಉಳಿದ ಕಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರದ ಕ್ವಾರಿ ಗುಂಡಿ ತುಂಬಿದ್ದರಿಂದ ಕಸ ವಿಲೇವಾರಿ ಕಗ್ಗಂಟಾಗಿದೆ. ಭೂಭರ್ತಿ ಕೇಂದ್ರಕ್ಕೆ ಕಸ ಒಯ್ದ ಸುಮಾರು 200 ಲಾರಿಗಳು ಕಸ ಇಳಿಸದೆಯೇ ಅಲ್ಲೇ ನಿಂತಿವೆ. ಹಾಗಾಗಿ ನಗರದಲ್ಲಿ ಗುರುವಾರ ಬಹುತೇಕ ಕಡೆ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಅಸ್ತವ್ಯಸ್ತವಾಯಿತು.

ರಸ್ತೆ ಬದಿಗಳಲ್ಲಿ, ಮಾರುಕಟ್ಟೆಗಳಲ್ಲಿನ ಕಸದ ರಾಶಿಗಳು ಹಾಗೆಯೇ ಉಳಿದವು. ಬಹುತೇಕ ಬಡಾವಣೆಗಳಲ್ಲಿ ಮನೆಗಳ ಮುಂದೆ ಇಟ್ಟಿದ್ದ ಕಸದ ಬುಟ್ಟಿಗಳು ಹಾಗೆಯೇ ಇದ್ದವು. ಕೆಲವೆಡೆ ಆಟೊಟಿಪ್ಪರ್‌ಗಳು ಮನೆ ಮನೆಯಿಂದ ಕಸ ಸಂಗ್ರಹಿಸಿದವು. ಆದರೆ, ಅದನ್ನು ಕಾಂಪ್ಯಾಕ್ಟರ್‌ಗಳಿಗೆ ವರ್ಗಾಯಿಸಿ ಭೂಭರ್ತಿ ಕೇಂದ್ರಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ.

ಕಸದ ಸಮಸ್ಯೆ ಬಿಗಡಾಯಿಸುತ್ತಿದ್ದಂತೆಯೇ ಪಾಲಿಕೆಯ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ಹಾಗೂ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್‌ ಖಾನ್‌ ಭೂಭರ್ತಿ ಕೇಂದ್ರಕ್ಕೆ ದೌಡಾಯಿಸಿದರು.


ಡಿ.ರಂದೀಪ್‌

‘ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿ ಗುತ್ತಿಗೆದಾರರು ತಾತ್ಕಾಲಿಕ ಗುಂಡಿ ಭರ್ತಿಯಾಗಿರುವ ಬಗ್ಗೆ ಅಧಿಕಾರಿಗಳಿಗೆ ನಿನ್ನೆ ಸಂಜೆ ಮಾಹಿತಿ ನೀಡಿದ್ದರು. ರಾಶಿ ಹಾಕಿದ ಕಸ ಕುಸಿದು ಬೀಳುತ್ತಿದೆ ಎಂದು ತಿಳಿಸಿದ್ದರು. ಒಂದು ದಿನ ತಡೆಯಿರಿ; ಸ್ಥಳ ಪರಿಶೀಲನೆ ನಡೆಸಿ, ಯಾವ ಕಡೆ ಕಸ ಇಳಿಸಬೇಕು ಎಂದು ಸೂಚಿಸುತ್ತೇವೆ ಎಂದು ಅವರಿಗೆ ಹೇಳಿದ್ದೆವು. ಇಂದು ಬೆಳಿಗ್ಗೆ ನಾನು ಹಾಗೂ ಸರ್ಫರಾಜ್‌ ಖಾನ್‌ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಇನ್ನೂ ಶೇಕಡಾ  15 ರಷ್ಟು ಜಾಗ ಲಭ್ಯ ಇದೆ. ಅಲ್ಲಿ ಹೇಗೆ ಕಸ ತುಂಬಿಸಿ ಮಣ್ಣು ಮುಚ್ಚಬೇಕು ಎಂಬ ಬಗ್ಗೆ ಮರ್ಗದರ್ಶನ ಮಾಡಿದ್ದೇವೆ’ ಎಂದರು.

‘ಕಸ ತುಂಬಿದ್ದ ಸುಮಾರು 200 ಟ್ರಕ್‌ಗಳು ಕ್ವಾರಿಯಲ್ಲಿ ಕಸ ಇಳಿಸಿರಲಿಲ್ಲ. ಅವುಗಳಿಂದ ಕಸ ಇಳಿಸುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಇವತ್ತು ರಾತ್ರಿಯೂ ಕಸ ಖಾಲಿ ಮಾಡಲು ಕ್ವಾರಿ ಬಳಿ ಬೆಳಕಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಹಾಗಾಗಿ ಆದಷ್ಟು ಶೀಘ್ರವೇ ಕಸ ವಿಲೇವಾರಿ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಒಂದು ದಿನ ಕಸ ವಿಲೇವಾರಿ ಸ್ಥಗಿತಗೊಂಡರೆ ಅದರ ಪರಿಣಾಮ ಎರಡು ಮೂರು ದಿನ ಇದ್ದೇ ಇರುತ್ತದೆ. ಇವತ್ತು ವಿಲೇಯಾಗದೆ ಉಳಿದ ಕಸವನ್ನು ಖಾಲಿ ಮಾಡುವ ಸಲುವಾಗಿ ನಾಳೆ ಬೆಳಿಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ಕಸ ಸಂಗ್ರಹಿಸುವಂತೆ ಆದೇಶ ಮಾಡಿದ್ದೇನೆ’ ಎಂದರು.

ಡೀಸೆಲ್‌ ಕಳವು: ಕ್ವಾರಿ ಬಳಿ ನಿಲ್ಲಿಸಿದ್ದ ಐದಾರು ಲಾರಿಗಳಿಂದ ಡೀಸೆಲ್‌ ಕಳವಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಾರದ ಮಟ್ಟಿಗೆ ತಾತ್ಕಾಲಿಕ ವ್ಯವಸ್ಥೆ

‘ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಈಗ ಕಸ ಸುರಿಯುತ್ತಿರುವ ಜಾಗದ ಪಕ್ಕದಲ್ಲೇ ಇನ್ನೊಂದು ಗುಂಡಿ ಇದೆ. ಅಲ್ಲಿ ಲೈನರ್‌ಗಳನ್ನು ಅಳವಡಿಸಿದರೆ ಇನ್ನೂ ಮೂರರಿಂದ ನಾಲ್ಕುವಾರ ಕಸ ತುಂಬಿಸಬಹುದು. ಆ ಜಾಗವನ್ನು ಮಿಶ್ರಕಸ ಭರ್ತಿ ಮಾಡಲು ಬಳಸಿಕೊಳ್ಳಲಿದ್ದೇವೆ’ ಎಂದು ರಂದೀಪ್‌ ಮಾಹಿತಿ ನೀಡಿದರು.

ಟೆಂಡರ್ ರದ್ದು– ಮತ್ತೆ ಅಲ್ಪಾವಧಿ ಟೆಂಡರ್‌?

ಮಿಟ್ಟಗಾನಹಳ್ಳಿಯ ಭೂಭರ್ತಿ ಕೇಂದ್ರದ ಇನ್ನೊಂದು ಕ್ವಾರಿ ಗುಂಡಿಯಲ್ಲಿ ಸುಮಾರು ಒಂದು ವರ್ಷದವರೆಗೆ ಕಸ ವಿಲೇವಾರಿ ಮಾಡಲು ಅವಕಾಶ ಇದೆ. ಇಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪನೆ ಕಾಮಗಾರಿಗೆ ಟೆಂಡರ್‌ ಕಡೆದಿದ್ದ ಪಾಲಿಕೆ ಗೊರಾಂಟ್ಲಾ ಜಿಯೊಸಿಂಥೆಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಜಿ.ಪ್ರವೀಣ್‌ ಕುಮಾರ್ ಅವರಿಗೆ ಈ ಗುತ್ತಿಗೆ (₹ 71.65 ಕೋಟಿ ವೆಚ್ಚ) ನೀಡಲು ನಿರ್ಧರಿಸಿತ್ತು. ಈ ಗುತ್ತಿಗೆದಾರರು ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯುವಂತೆ ಸೂಚಿಸಿತ್ತು.

‘ಮತ್ತೆ ಟೆಂಡರ್‌ ಕರೆದು ಕಾಮಗಾರಿ ನಡೆಸಲು ಸಮಯಾವಕಾಶ ಬೇಕಾಗುತ್ತದೆ. ಅಷ್ಟರಲ್ಲಿ ಕಸದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಹಾಗಾಗಿ ಟೆಂಡರ್‌ ರದ್ದು ಪಡಿಸಿದ ನಿರ್ಧಾರ ಹಿಂದಕ್ಕೆ ಪಡೆಯುವಂತೆ ನಗರಾಭಿವೃದ್ಧಿ ಇಲಾಖೆಯನ್ನು ಕೋರಿದ್ದೇವೆ. ಒಂದೆರಡು ದಿನದಲ್ಲಿ ಈ ಬಗ್ಗೆ ನಿರ್ಧಾರ ತಿಳಿಸಲಿದೆ. ಇಲಾಖೆ ಈಗಿನ ಟೆಂಡರ್‌ ಮುಂದುವರಿಸಲು ಒಪ್ಪದಿದ್ದರೆ ಅಲ್ಪಾವಧಿ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ’ ಎಂದು ರಂದೀಪ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು