ಬೆಂಗಳೂರು: ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ರಫಾಯಲ್ ರಾಜ್ (65) ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ಅವರಿಗೆ ಪತ್ನಿ ಕಾಣಿಕ್ಯಮೇರಿ, ಪುತ್ರರಾದ ಸುಮೀತ್ ಕುಮಾರ್, ಸುಹಾಸ್ ಪ್ರೀತಮ್ ಇದ್ದಾರೆ. ಚಾಮರಾಜಪೇಟೆಯ ಬ್ರಿಯಾಂಡ್ ವೃತ್ತದ (ರಾಯನ್ ಸರ್ಕಲ್) ಬಳಿಯಿರುವ ಸಂತ ಜೋಸೆಫ್‌ರ ಚರ್ಚ್‌ನಲ್ಲಿ ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಿಎಂಟಿಸಿ ಬಸ್ ನಿರ್ವಾಹಕರಾಗಿ 34 ವರ್ಷ ಕಾರ್ಯನಿರ್ವಹಿಸಿದ್ದ ರಫಾಯಲ್ ರಾಜ್, ಸಂಚಾರ ನಿಯಂತ್ರಕರಾಗಿ 2019ರಲ್ಲಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯಲ್ಲಿ 18 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ರಾಜ್ಯದ ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದ್ದರು. ಕನ್ನಡಿಗರು ಮತ್ತು ಕರ್ನಾಟಕದ ಹಿತರಕ್ಷಣೆಗಾಗಿ ನಡೆದ ಚಳವಳಿಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು.