ಕಿಂಬರ್ಲಿ : ಎಡಗೈ ಬ್ಯಾಟ್ಸ್ವುಮನ್ ಸ್ಮೃತಿ ಮಂದಾನ (135; 173 ನಿಮಿಷ, 129ಎಸೆತ, 14 ಬೌಂಡರಿ, 1ಸಿಕ್ಸರ್) ಗಳಿಸಿದ ಶತಕದ ಬಲದಿಂದ ಭಾರತ ಮಹಿಳೆಯರ ತಂಡವು ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 178 ರನ್ಗಳಿಂದ ಜಯಿಸಿತು.
ಭಾರತ ತಂಡವು 50 ಓವರ್ಗಳಲ್ಲಿ 3 ವಿಕೆಟ್ಗಳಿಗೆ 302 ರನ್ ಗಳಿಸಿತು. ನಂತರ ಆತಿಥೇಯ ತಂಡವು 30.5 ಓವರ್ಗಳಲ್ಲಿ 124 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.
ಜೂಲನ್ಗೆ 200ನೇ ವಿಕೆಟ್:
ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರು ಏಕದಿನ ಕ್ರಿಕೆಟ್ನಲ್ಲಿ 200ನೇ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಲಾರಾ ವೊಲ್ವಾರ್ಡ್ ವಿಕೆಟ್ ಪಡೆದ ಅವರು ಈ ಮೈಲುಗಲ್ಲು ಮುಟ್ಟಿದರು. ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡ ಅವರಾಗಿದ್ದಾರೆ. ಅವರು ಒಟ್ಟು 166 ಪಂದ್ಯಗಳನ್ನು ಆಡಿದ್ದಾರೆ.