ಸೋಮವಾರ, ಆಗಸ್ಟ್ 2, 2021
27 °C
ಶ್ರೀ ಗುರುಸಾರ್ವಭೌಮ ಸೌಹಾರ್ದ ಬ್ಯಾಂಕ್‌ನಲ್ಲೂ ಅವ್ಯವಹಾರ

ಸಹಕಾರ ಸಂಘದಲ್ಲೂ ₹233 ಕೋಟಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವನಗುಡಿಯ ಶ್ರೀ ಗುರುರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಸಿಐಡಿ ಪೊಲೀಸರು ತನಿಖೆ ಆರಂಭಿಸಿರುವ ಬೆನ್ನಲ್ಲೇ ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘದಲ್ಲೂ ₹233 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಶಂಕರಪುರ ಪೊಲೀಸರಿಗೆ ದೂರು ನೀಡಲಾಗಿದೆ.

ಶ್ರೀ ಗುರುರಾಘವೇಂದ್ರ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಸತ್ಯನಾರಾಯಣ್, ಮಾಜಿ ಸಿಇಒ ದಿವಂಗತ ವಾಸುದೇವ ಮಯ್ಯ ಹಾಗೂ ನಿರ್ದೇಶಕರೂ ಸೇರಿದಂತೆ 14 ಮಂದಿ ವಿರುದ್ಧ ದೂರು ನೀಡಲಾಗಿದೆ. ಸಹಕಾರ ಸಂಘದ ವಿಶೇಷ ಅಧಿಕಾರಿ ಸಂಜಯ್‌ ಕೊರಟಕರ‌ ವಂಚನೆ, ಅವ್ಯವಹಾರ ಆರೋಪ ಮಾಡಿದ್ದಾರೆ.

ಗುರುಸಾರ್ವಭೌಮ ಸಹಕಾರ ಸಂಘವು ಗುರುರಾಘವೇಂದ್ರ ಬ್ಯಾಂಕಿನಲ್ಲಿ ಇಟ್ಟಿದ್ದ ₹90 ಕೋಟಿ ಠೇವಣಿ ಹಣವನ್ನು ಸಾಲಗಳಿಗೆ ವಜಾ ಮಾಡಿಕೊಳ್ಳಲು ಆಡಳಿತ ಮಂಡಳಿ ನಿರ್ಣಯಿಸಿದೆ. ಅದರಂತೆ ಬ್ಯಾಂಕ್‌ ಸಾಲಗಳಿಗೆ ವಜಾ ಮಾಡಿಕೊಂಡಿದೆ. ಅಲ್ಲದೆ, ಸಹಕಾರ ಸಂಘ ನೀಡಿದ್ದ ₹163 ಕೋಟಿ ಸಾಲದಲ್ಲಿ ₹20 ಕೋಟಿಗೆ ಮಾತ್ರ ದಾಖಲೆಗಳಿವೆ. ಇದರಿಂದಾಗಿ ಸಹಕಾರ ಸಂಘಕ್ಕೆ ₹233 ಕೋಟಿ ವಂಚನೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ವಂಚನೆಯಲ್ಲಿ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಸಹಕಾರಿ ಸಂಘದಲ್ಲಿ ಠೇವಣಿ ಇರಿಸಿದವರಿಗೆ ಹಣ ವಾಪಸ್‌ ಮಾಡುತ್ತಿಲ್ಲ. ಈ ಬಗ್ಗೆ ದೂರುಗಳು ಬಂದಿವೆ. ಠೇವಣಿದಾರರಿಗೆ ಹಣ ಹಿಂತಿರುಗಿಸದೆ ನಂಬಿಕೆ ದ್ರೋಹ ಎಸಗಲಾಗಿದೆ ಎಂದು ಸಂಜಯ್‌ ದೂರಿದ್ದಾರೆ.

ಗುರುರಾಘವೇಂದ್ರ ಬ್ಯಾಂಕಿನ ಸಾಲಗಳಿಗೆ ₹90 ಕೋಟಿ ಠೇವಣಿಯನ್ನು ಜಮಾ ಮಾಡಿದ್ದಕ್ಕಾಗಲೀ ಅಥವಾ ₹143 ಕೋಟಿ ಸಾಲ ನೀಡಿರುವುದಕ್ಕಾಗಲೀ ಯಾವುದೇ ದಾಖಲೆಗಳಿಲ್ಲ. ಸಹಕಾರ ಸಂಘದ ಆಂತರಿಕ ಲೆಕ್ಕ ಪರಿಶೋಧನೆ ಸಮಯದಲ್ಲಿ ಈ ಅವ್ಯವಹಾರ ಬಯಲಿಗೆ ಬಂದಿದೆ ಎಂದೂ ದೂರಿನಲ್ಲಿ ಹೇಳಿದ್ದಾರೆ.

ಗುರುರಾಘವೇಂದ್ರ ಬ್ಯಾಂಕಿನ ಸಿಇಒ ಆಗಿದ್ದ ಮಯ್ಯ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಂಜಯ್‌ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದೆ.

ಗುರುರಾಘವೇಂದ್ರ ಬ್ಯಾಂಕಿನಲ್ಲಿ ಬೇಕಾದವರಿಗೆ ಬೇಕಾಬಿಟ್ಟಿ ₹1,400 ಕೋಟಿ ಸಾಲ ಕೊಡುವ ಮೂಲಕ ಹಣ ದುರುಪಯೋಗ ಮಾಡಿರುವ ಪ್ರಕರಣ ಕುರಿತು ಸಿಐಡಿ ತನಿಖೆ ಆರಂಭಿಸಿದೆ. ಈಗ ಈ ಪ್ರಕರಣವೂ ಸಿಐಡಿಗೆ ಹಸ್ತಾಂತರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.