ಭಾನುವಾರ, ಅಕ್ಟೋಬರ್ 24, 2021
20 °C
ಇನ್ನೂ ಎರಡು ದಿನ ಮುಂದುವರಿಯಲಿದೆ ಮಳೆ: ಮಾಹಿತಿ ನೀಡಿದ ಹವಾಮಾನ ಇಲಾಖೆ

ಮುಂದುವರಿದ ಮಳೆ; ಗುಡುಗು–ಸಿಡಿಲು ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಭಾನುವಾರವೂ ಗುಡುಗು– ಸಿಡಿಲು ಸಹಿತ ಮಳೆ ಅಬ್ಬರ ಜೋರಾಗಿತ್ತು.

ನಗರದಲ್ಲಿ ಮೋಡ ಕವಿದ ವಾತಾವರಣವೂ ಮುಂದುವರಿದಿದೆ. ಭಾನುವಾರ ಬೆಳಿಗ್ಗೆಯಿಂದಲೇ ಬಹುತೇಕ ಕಡೆ ಜಿಟಿ ಜಿಟಿ ಮಳೆ ಶುರುವಾಯಿತು. ಸಮಯ ಕಳೆದಂತೆ ಬಿಡುವು ಕೊಡುತ್ತಲೇ ಮಳೆ ಜೋರಾಗಿ ಸುರಿಯಿತು.

ರಾಜಾಜಿನಗರದ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರನಗರ, ಶಿವಾಜಿನಗರ, ಇಂದಿರಾನಗರ,  ಹಲಸೂರು, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಸಂಪಂಗಿರಾಮನಗರ, ನಾಗರಬಾವಿ, ಕೆಂಗೇರಿ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಬನಶಂಕರಿ, ಆರ್‌.ಟಿ.ನಗರ, ಹೆಬ್ಬಾಳ, ಸಂಜಯನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಯಿತು.

ರಾಜಾಜಿನಗರದ ನವರಂಗ್ ವೃತ್ತ, ಹಲಸೂರು ಬಳಿಯ ಗಂಗಾಧರ ಚೆಟ್ಟಿ ರಸ್ತೆ ಹಗೂ ರಾಜರಾಜೇಶ್ವರಿನಗರದಲ್ಲಿ ಮರದ ಕೊಂಬೆಗಳು ಬಿದ್ದಿದ್ದವು. ಇದರಿಂದ ಈ ಮಾರ್ಗದಲ್ಲಿ ವಾಹನಗಳ ಓಡಾಟ ಕೆಲ ನಿಮಿಷ ಸ್ಥಗಿತವಾಗಿತ್ತು. ಮರದ ಕೊಂಬೆ ತೆರವು ಮಾಡಿದ ಬಳಿಕ ವಾಹನಗಳು ಸಂಚರಿಸಿದವು.

ಭಾನುವಾರ ರಜೆ ದಿನವಾಗಿದ್ದರಿಂದ ಹೆಚ್ಚು ಜನ ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ. ಮಳೆಯೂ ನಿರಂತರವಾಗಿ ಸುರಿಯುತ್ತಿದ್ದರಿಂದ ರಸ್ತೆಯಲ್ಲಿ ಜನರ ಓಡಾಟವೂ ಕಡಿಮೆ ಇತ್ತು. ಕೆಲವರು, ಕೊಡೆ ಹಿಡಿದು ರಸ್ತೆಯಲ್ಲಿ ಹೆಜ್ಜೆ ಹಾಕಿದರು.

ನಗರದ ಮಾರುಕಟ್ಟೆಗಳಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಮಳೆಯಿಂದಾಗಿ ಜನರು ಅಂಗಡಿಗಳತ್ತ ಬರಲಿಲ್ಲ. ಹೀಗಾಗಿ, ವ್ಯಾಪಾರವೂ ಕಡಿಮೆ ಇತ್ತು.

ಪ್ರಮುಖ ರಸ್ತೆ ಹಾಗೂ ಹೊರ ವರ್ತುಲ ರಸ್ತೆಗಳಲ್ಲೂ ನೀರು ಹರಿಯಿತು. ಮಳೆ ಸುರಿಯುತ್ತಿದ್ದ ವೇಳೆಯಲ್ಲಿ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದು ಕಂಡುಬಂತು. ಮಳೆ ನಿಲ್ಲುವ ಲಕ್ಷಣ ಗೋಚರಿಸದಿದ್ದಾಗ ಕೆಲವರು, ಮಳೆಯಲ್ಲೇ ವಾಹನ ಚಲಾಯಿಸಿಕೊಂಡು ಹೋದರು.

‘ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನು ಎರಡು ದಿನ ಮುಂದುವರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ನಗರದ ಹಲವೆಡೆ ಮರದ ಕೊಂಬೆಗಳು ಬಿದ್ದಿದ್ದವು. ದೊಡ್ಡ ಗಾತ್ರದ ಮರಗಳು ಬಿದ್ದಿದ್ದ ಬಗ್ಗೆ ಯವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ನಗರದ ಕಾಲುವೆಗಳಲ್ಲಿ ನೀರು ತುಂಬಿ ಹರಿದಿದೆ. ರಸ್ತೆಗಳಲ್ಲೂ ನೀರು ಹರಿದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು. ಅಲ್ಲೆಲ್ಲ ನೀರು ತೆರವು ಮಾಡುವ ಕೆಲಸ ನಡೆಯುತ್ತಿದೆ. ಪ್ರತಿಯೊಂದು ವಾರ್ಡ್‌ನಲ್ಲಿ ಬಿಬಿಎಂಪಿ ಸಿಬ್ಬಂದಿ ಸಂಚರಿಸುತ್ತಿದ್ದು, ದೂರುಗಳು ಬಂದ ಕೂಡಲೇ ಸ್ಥಳಕ್ಕೆ ಹೋಗುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು