ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಮೊದಲ ದಿನವೇ ಜೋರು ಮಳೆ

ಬೊಮ್ಮನಹಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
Last Updated 28 ಅಕ್ಟೋಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು/ಬೊಮ್ಮನಹಳ್ಳಿ: ದೀಪಾವಳಿ ಹಬ್ಬದ ಮೊದಲ ದಿನವಾದ ಭಾನುವಾರ ಸಂಜೆ ನಗರದ ಹಲವೆಡೆ ಜೋರು ಮಳೆ ಸುರಿಯಿತು.

ನಗರದಲ್ಲಿ ಹಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅದು ಭಾನುವಾರ ಹಾಗೂ ಸೋಮವಾರವೂ ಮುಂದುವರಿಯಿತು.

ಹಬ್ಬದ ಖುಷಿಯಲ್ಲಿದ್ದ ಜನ, ಸಂಜೆ ಮನೆಯಿಂದ ಹೊರಗಡೆ ಹೋಗಲು ಯೋಚನೆ ಹಾಕಿಕೊಂಡಿದ್ದರು. ಆದರೆ, ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಬಹುತೇಕರು ಮನೆಯಲ್ಲೇ ಉಳಿದುಕೊಂಡರು. ಎರಡೂವರೆ ಗಂಟೆಗಳವರೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ಹರಿಯಿತು.

ಜಯನಗರ, ಬಸವನಗುಡಿ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಮತ್ತೀಕೆರೆ, ವಿದ್ಯಾರಣ್ಯಪುರ, ಜಾಲಹಳ್ಳಿ, ಆರ್‌.ಟಿ.ನಗರ, ಯಲಹಂಕ, ಹೆಬ್ಬಾಳ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್,ಎಂ.ಜಿ.ರಸ್ತೆ, ಇಂದಿರಾನಗರ, ಶಿವಾಜಿನಗರ, ಹಲಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜೋರು ಮಳೆ ಆಯಿತು.

ಈ ಪ್ರದೇಶಗಳ ರಸ್ತೆಯಲ್ಲೆಲ್ಲ ನೀರು ಹರಿಯಿತು. ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದ್ದರಿಂದ ದಟ್ಟಣೆಯೂ ಕಂಡುಬಂತು. ರಾಜಕಾಲುವೆ ಹಾಗೂ ಚರಂಡಿಯ ತ್ಯಾಜ್ಯ ರಸ್ತೆಗೆ ಬಂದಿತ್ತು.

ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆಯಲ್ಲೂ ಮಳೆ ಜೋರಾಗಿತ್ತು. ಅಲ್ಲೆಲ್ಲ ವಾಹನಗಳ ಓಡಾಟ ನಿಧಾನಗತಿಯಲ್ಲಿತ್ತು.

ಮಳೆಯಿಂದಾಗಿ ಚಿಕ್ಕಪೇಟೆಯಲ್ಲಿ ರಸ್ತೆಗಳಲ್ಲಿ ನೀರು ಹರಿಯಿತು. ಹಬ್ಬದ ಬಳಕೆಗಾಗಿ ರಸ್ತೆ ಅಕ್ಕ–ಪಕ್ಕದಲ್ಲಿ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ನೀರಿನಲ್ಲೇ ತೇಲಿ ಹೋದವು. ಕೆಲ ವಾಹನಗಳು ನೀರಿನಲ್ಲೇ ಮುಳುಗಿದ್ದು ಕಂಡುಬಂತು.

‘ನಗರದಲ್ಲಿ ಉತ್ತಮ ಮಳೆ ಸುರಿದಿದೆ. ಕೆಲವೆಡೆ ರಸ್ತೆಯಲ್ಲಿ ಹೆಚ್ಚು ನೀರು ಹರಿದಿದ್ದು, ಅಂಗಡಿಗಳಿಗೂ ನುಗ್ಗಿದೆ. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಮನೆಗಳಿಗೆ ನುಗ್ಗಿದ ನೀರು: ಎಚ್ಎಸ್ಆರ್ ಲೇಔಟ್, ಬಿಳೇಕಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿಯ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ರಾತ್ರಿಯಿಡಿ ನೀರು ಹೊರಹಾಕುವುದರಲ್ಲೇ ನಿವಾಸಿಗಳು ನಿರತರಾಗಿದ್ದರು.

ರಸ್ತೆಯಲ್ಲೂ ಮೂರು ಅಡಿಯಷ್ಟು ನೀರು ಹರಿಯಿತು. ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೀರು ತೆರವುಗೊಳಿಸಿದರು.

‘ನಮ್ಮ ಮನೆಯ ಮುಂದೆ ರಾತ್ರಿ 4 ಅಡಿ ನೀರು ನಿಂತಿತ್ತು. ಗಾರ್ಡನ್ ಲೇಔಟ್‌ನಿಂದ ಬರುವ ನೀರು ಮುಂದಕ್ಕೆ ಹೋಗುತ್ತಿಲ್ಲ. ಇಲ್ಲಿ ಚರಂಡಿ ಒತ್ತುವರಿ ಆಗಿದೆ. ಮೂರು ಅಡಿಗಳಷ್ಟು ಹೂಳು ತುಂಬಿದೆ. ಇದರಿಂದ ಮನೆಗಳಿಗೆ ನೀರು ನುಗ್ಗುತ್ತಿದೆ’ ಎಂದು ಎಚ್ಎಸ್ಆರ್ ನಿವಾಸಿ ಲತಾ ಅಳಲು ತೋಡಿಕೊಂಡರು.

ಎಚ್ಎಸ್ಆರ್ ಲೇಔಟ್‌ಗೆಸೋಮವಾರ ಬೆಳಿಗ್ಗೆ ಭೇಟಿ ನೀಡಿದ್ದ ಬಿಬಿಎಂಪಿಯ ವಿಶೇಷ ಆಯುಕ್ತ ಡಿ. ರಂದೀಪ್, ‘ರಾಜಕಾಲುವೆ ಒತ್ತುವರಿ ಮತ್ತು ಹೂಳು ತುಂಬಿದ ಚರಂಡಿಗಳಿಂದಾಗಿ ಈ ಪ್ರದೇಶ ನೆರೆಗೆ ತುತ್ತಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಶಾಸಕ ಸತೀಶ್ ರೆಡ್ಡಿ, ‘ಎಚ್ಎಸ್‌ಆರ್‌ ಲೇಔಟ್ ಅಭಿವೃದ್ಧಿಗಾಗಿ ₹ 100 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಪ್ರದೇಶವನ್ನು ನೆರೆಮುಕ್ತ ಪ್ರದೇಶವಾಗಿ ಮಾಡುವ ಯೋಜನೆ ಸಿದ್ಧವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT