ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ ಬೆಂಗಳೂರು ‘ಪೂರ್ವ‘: ವಲಸೆ ಕಾರ್ಮಿಕರ ದಯನೀಯ ಸ್ಥಿತಿ

ವಲಸೆ ಕಾರ್ಮಿಕರ ದಯನೀಯ ಸ್ಥಿತಿ: ಕುಡಿಯುವ ನೀರಿಗೂ ಪರದಾಟ lಜನರ ರಕ್ಷಣೆಗೆ ಬೋಟ್, ಟ್ರ್ಯಾಕ್ಟರ್ ಬಳಕೆ
Last Updated 5 ಸೆಪ್ಟೆಂಬರ್ 2022, 22:56 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವಾರದಿಂದ ಸುರಿಯುತ್ತಲೇ ಇರುವ ಮಳೆಯಿಂದಾಗಿ ಬೆಂಗಳೂರು ಪೂರ್ವ ವಲಯ ಬಹುತೇಕ ಮುಳುಗಿದ್ದು, ಭಾನುವಾರ ಮತ್ತು ಸೋಮವಾರ ರಾತ್ರಿ ಎಡಬಿಡದೇ ಬೋರ್ಗರೆದ ಮಳೆಯಿಂದಾಗಿ ಈ ಭಾಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹ ರೂಪದಲ್ಲಿ ಹರಿಯುತ್ತಿರುವ ನೀರಿನಿಂದ ರಸ್ತೆ, ಬಡಾವಣೆಗಳು ತುಂಬಿಹೋಗಿದ್ದು, ಜನ ಜೀವನ ದುಸ್ತರಗೊಂಡಿದೆ. ವಲಸೆ ಕಾರ್ಮಿಕರು ಸಾಲುಸಾಲಾಗಿ ಕಟ್ಟಿಕೊಂಡಿರುವ ತಾತ್ಕಾಲಿಕ ಶೆಡ್‌ಗಳ ತಲೆ ಎತ್ತರಕ್ಕೆ ನೀರು ನಿಂತಿದೆ. ಅಲ್ಲಿಂದ ಹೊರಬರಲೂ ಆಗದೇ ಉಳಿದುಕೊಳ್ಳಲೂ ಆಗದ ಪರಿಸ್ಥಿತಿಯಲ್ಲಿರುವ ಈ ಕಾರ್ಮಿಕ ಸಮುದಾಯ, ಕುಡಿಯುವ ನೀರು, ಊಟಕ್ಕೂ ಪರದಾಡುವ ದಯನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ರಸ್ತೆಗಳಲ್ಲಿ ವಾಹನಗಳು ಎಲ್ಲೆಂದರೆ ಅಲ್ಲಿ ಕೆಟ್ಟು ನಿಂತಿದ್ದು, ಬಡಾವಣೆಗಳಲ್ಲಿ ಜನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಟ್ರ್ಯಾಕ್ಟರ್‌, ರಬ್ಬರ್ ಬೋಟ್‌ ಬಳಸಬೇಕಾದ ಅನಿವಾರ್ಯ ಎದುರಾಗಿದೆ. ಪೂರ್ವ ಭಾಗದ ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೊ ಡ್ರೈವ್‌, ಸನ್ನಿ ಬ್ರೂಕ್ಸ್, ಕಂಟ್ರಿ ಸೈಡ್‌ ಐಷಾರಾಮಿ ಬಡಾವಣೆಗಳಲ್ಲಿದ್ದ ನಾಗ ರಿಕರನ್ನು ಬಿಬಿಎಂಪಿ, ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣ ದಳದ ವತಿಯಿಂದ ಟ್ರ್ಯಾಕ್ಟರ್‌ ಹಾಗೂ ಬೋಟ್‌ಗಳ ಸಹಾಯದಿಂದ ಹೊರ ತರಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಖರೀದಿಸಿದ ಮನೆಗಳಿಂದ ದೂರವಾಗುವ ಪರಿಸ್ಥಿತಿ ಇಲ್ಲಿದೆ.

ಯಮಲೂರಿನ 70 ಡಿಗ್ರಿ ಟೌನ್‌ ಸೆಂಟರ್‌ ಮುಳುಗಡೆಯಾಗಿದೆ. ಎಚ್‌ಎಎಲ್‌ ತೇಜಸ್‌ ವಿಭಾಗವೂ ಜಲಾವೃತವಾಗಿದೆ. ಭಾನುವಾರ ಐಟಿ ಸಂಸ್ಥೆಗಳಿಗೆ ರಜೆ ಇದ್ದುದರಿಂದ ಸಾಕಷ್ಟು ಅನಾಹುತ ತಪ್ಪಿದಂತಾಗಿದೆ.

ಮಳೆ ನಿಂತರೂ ಇನ್ನೂ ಮೂರ್ನಾಲ್ಕು ದಿನ ಇಲ್ಲಿನ ನೀರು ತೆರವು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಅಧಿಕಾರಿಗಳ ಮಾತು.

ತೂಬರಹಳ್ಳಿ, ಮುನ್ನೇಕೊಳಲು, ಕಗ್ಗದಾಸನಪುರ, ಬಿಇಎಂಎಲ್‌ ಲೇಔಟ್ ಸುತ್ತಮುತ್ತಲ ಜೋಪಡಿಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಬದುಕು ರಾಜಕಾಲುವೆ ನೀರಿನಲ್ಲಿ ಕೊಚ್ಚಿಹೋಗಿದೆ. ಮನೆಯಲ್ಲಿದ್ದ ದಿನಸಿ ನೀರುಪಾಲಾಗಿದ್ದು, ಊಟ ಮತ್ತು ಕುಡಿಯುವ ನೀರಿಗೂ ಪರರಾಡುತ್ತಿದ್ದಾರೆ. ಬರಿಗೈ ಆಗಿರುವ ಕಾರ್ಮಿಕರು ಊಟಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳ ಮುಖಂಡರ ಒತ್ತಡದ ಮೇರೆಗೆ ಸೋಮವಾರ ಮಧ್ಯಾಹ್ನ ಆಹಾರದ ಪೊಟ್ಟಣಗಳನ್ನು ಪಾಲಿಕೆ ಅಧಿಕಾರಿಗಳು ಕಳುಹಿಸಿದ್ದಾರೆ. ಇನ್ನೂ ಒಂದು ವಾರ ಮಳೆ ನೀರು ಇಳಿಯುವ ಸಾಧ್ಯತೆ ಇಲ್ಲ.

ನೆಲಮಂಗಲ, ಬಿನ್ನಮಂಗಲ,ಕೆಂಪಲಿಂಗನಹಳ್ಳಿ, ದಾಸನಪುರ ಕೆರೆಗಳ ಕೋಡಿ ಹರಿದಿವೆ. ವಾಜರಹಳ್ಳಿ ಶಾಲೆಗೆ ನೀರು ನುಗ್ಗಿದ್ದು, ಹೊರ ಹಾಕಲು ಶಿಕ್ಷಕರು ಪರದಾಡಿದರು. ಪುಸ್ತಕಗಳು ಮತ್ತು ಪೀಠೋಪಕರಣ ನೀರು ಪಾಲಾಗಿವೆ.

‘ಮಾತನಾಡಲು ಕಮಿಷನ್ ಕೊಡಬೇಕಾ?’

ಬೆಂಗಳೂರಿನ ನಗರ ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್- ಹಲಾಲ್ ಕಟ್‌ ವಿಚಾರ ಮಾತನಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ, ರಾಜಧಾನಿಯಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ? ಎಂದು ಕಾಂಗ್ರೆಸ್ ಕುಟುಕಿದೆ.

‘ಬೆಂಗಳೂರಿನ ಬಗ್ಗೆ ಮಾತನಾಡಲೂ ಸಹ ಸಚಿವರಿಗೆ ಶೇ 40 ಕಮಿಷನ್‌ ಕೊಡಬೇಕೆ?’ ಎಂದೂ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ. ‘ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಿಂತು ಡಬಲ್ ಎಂಜಿನ್ ಅಭಿವೃದ್ಧಿಯಾಗುತ್ತಿದೆ ಎಂದಿದ್ದು ಇದೇನಾ ಬಸವರಾಜ ಬೊಮ್ಮಾಯಿಯವರೇ? ರಸ್ತೆ ಮೇಲೆ ನೀರು, ನೀರಿನೊಳಗೆ ರಸ್ತೆಯ ಗುಂಡಿ, ಬೆಂಗಳೂರಲ್ಲಿ ಸಂಚರಿಸುವ ವಾಹನಗಳಿಗೆ ಸಿಂಗಲ್ ಎಂಜಿನ್ ಸಾಲದು, ಡಬಲ್ ಎಂಜಿನ್‌ಗಳೇ ಬೇಕು! ಇದೇ ಬಿಜೆಪಿಯ ಡಬಲ್ ಎಂಜಿನ್ ಅಭಿವೃದ್ಧಿ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.‘ಇರುವ ಒಂದು ಬೆಂಗಳೂರನ್ನೇ ಸಮರ್ಪಕವಾಗಿ ನಿರ್ವಹಿಸಲಾಗದವರಿಗೆ 6 ಹೊಸ ನಗರವನ್ನು ನಿರ್ಮಿಸುವ ಯೋಗ್ಯತೆ ಇದೆಯೇ? ಗುರುವಿಗೆ ತಕ್ಕ ಶಿಷ್ಯ ಎಂಬಂತೆ ಮೋದಿಯವರ ರೀತಿ ಬೊಮ್ಮಾಯಿಯವರೂ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ’ ಎಂದಿದೆ.

ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ಕಾವೇರಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಜಲ ಮಂಡಳಿಯ ಟಿ. ಕೆ.ಹಳ್ಳಿ ಘಟಕಕ್ಕೆ ನೀರು ನುಗ್ಗಿದ್ದು, ಯಂತ್ರಗಳು ಮುಳುಗಡೆಯಾಗಿವೆ. ಇದರಿಂದ, ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇದೇ 6ರಂದು ನಗರದ ಹಲವುಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ
ವಾಗಲಿದೆ.ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಬಳಿ ಇರುವ ಟಿ.ಕೆ. ಹಳ್ಳಿಯಲ್ಲಿರುವ ಈ ಘಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಜಲ ಮಂಡಳಿ ಅಧಕ್ಷರು, ಎಂಜಿನಿಯರ್‌ಗಳು ಹಾಗೂ ನಗರಾಭಿ ವೃದ್ಧಿ ಇಲಾಖೆ ಕಾರ್ಯದರ್ಶಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT