ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ರಾತ್ರಿ ಮಳೆ: ರಸ್ತೆಗಳು, ಮನೆಗಳು ಜಲಾವೃತ

ರಸ್ತೆಗಳು, ಮನೆಗಳು ಜಲಾವೃತ l ತೇಲಿದ ವಾಹನಗಳು l ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು
Last Updated 22 ಅಕ್ಟೋಬರ್ 2020, 1:38 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಾತ್ರಿಯಿಡಿ ಆರ್ಭಟಿಸಿದ ಮಳೆ ನಗರದ ಹಲವೆಡೆ ಅವಾಂತರ ಸೃಷ್ಟಿಸಿತು.

ಕೆಂಗೇರಿ, ರಾಜರಾಜೇಶ್ವರಿನಗರ, ವಿಶ್ವೇಶ್ವರಪುರ, ಲಕ್ಕಸಂದ್ರ, ಗೊಟ್ಟಿಗೆರೆ, ವಿದ್ಯಾರಣ್ಯಪುರ, ನಾಗರಭಾವಿ ಸೇರಿ ನಗರದ ಬಹುತೇಕ ಕಡೆ ಭಾರಿ ಮಳೆಯಾಗಿದೆ.

ಕೋರಮಂಗಲದ ಹಲವು ಬಡಾವಣೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸೋನಿ ಸಿಗ್ನಲ್ ಬಳಿ ವಾಹನಗಳು ಮುಳುಗಿದವು. ಮನೆಗಳಿಗೂ ನೀರು ನುಗ್ಗಿದ್ದು, ವಸ್ತುಗಳೆಲ್ಲವೂ ನೀರುಪಾಲಾದವು.

ಅಪಾರ್ಟ್‌ಮೆಂಟ್‌ಗಳಲ್ಲಿ ನೆಲಮಾಳಿಗೆಯಲ್ಲಿನ ಪಾರ್ಕಿಂಗ್ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದವು. ವಾಹನಗಳು ನೀರಿನಲ್ಲಿ ತೇಲಿದವು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.

ರಾಜರಾಜೇಶ್ವರಿನಗರದ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಮದುವೆ ಸಂಭ್ರಮ ಕಸಿದುಕೊಂಡಿತು. ನೆಲಮಾಳಿಗೆಯಲ್ಲಿದ್ದ ಊಟದ ಹಾಲ್‌ ಸಂಪೂರ್ಣ ಜಲಾವೃತಗೊಂಡು ಆಹಾರ ಸಾಮಗ್ರಿ, ಕುರ್ಚಿಗಳು ತೇಲಾಡಿದವು. ಜನರು ಅಲ್ಲಿಂದ ಹೊರ ಬಂದ ಬಳಿಕ ಕಾರ್ಯಕ್ರಮ ರದ್ದು ಮಾಡಲಾಯಿತು.

‌ಮೈಸೂರು ರಸ್ತೆಯ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿದ್ದ ಅಂಡರ್‌ಪಾಸ್‌ ಗೋಡೆಗಳು ಕುಸಿದಿವೆ. ಬನಶಂಕರಿಯಲ್ಲಿ ಹಲವು ಮರಗಳು ಉರುಳಿವೆ. ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಸಿಬ್ಬಂದಿ ನಡೆಸಿದರು.

ನಗರದ ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ನಕ್ಷೆ

ಕೊಚ್ಚಿಹೋದ ತಡೆಗೋಡೆ:

ಹೊಸಕೆರೆಹಳ್ಳಿಯ ಗುರುದತ್ತ ಲೇಔಟ್‌ನಲ್ಲಿ ರಾಜಕಾಲುವೆಯ ತಡೆಗೋಡೆಯೇ ಕೊಚ್ಚಿ ಹೋಗಿದ್ದು, ಪಕ್ಕದಲ್ಲಿರುವ 4 ಕಟ್ಟಡಗಳಲ್ಲಿ ನೆಲೆಸಿರುವ ನಿವಾಸಿಗಳು ಭೀತಿಯಲ್ಲಿದ್ದಾರೆ.

ತಡೆಗೋಡೆ ಪಕ್ಕದಲ್ಲೇ ಜಲಮಂಡಳಿಯಿಂದ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ತಡೆಗೋಡೆ ಪಕ್ಕದಲ್ಲಿ ಗುಂಡಿಗಳನ್ನು ತೆಗೆಯಲಾಗಿತ್ತು. ಇದರಿಂದ ಸಡಿಲಗೊಂಡಿದ್ದ ತಡೆಗೋಡೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಪಕ್ಕದಲ್ಲೇ ಇರುವ ಕಟ್ಟಡಗಳ ನಿವಾಸಿಗಳಿಗೆ ಭೂಕುಸಿತದ ಆತಂಕದಲ್ಲಿದ್ದಾರೆ. ಅಪಾರ್ಟ್‌ಮೆಂಟ್ ಕಾಂಪೌಂಡ್‌ ಒಳಗಿನ ವಾಹನ ನಿಲುಗಡೆ ಜಾಗದಲ್ಲೂ ನೆಲದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನರ ಭೀತಿ ಹೆಚ್ಚಲು ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರಲ್ಲಿ ನಿವಾಸಿಗಳು ಸಮಸ್ಯೆ ಹೇಳಿಕೊಂಡರು.

ಇಂಗು ಗುಂಡಿ ತೋಡಲು ಸೂಚನೆ: ಅಶ್ವತ್ಥನಾರಾಯಣ

ನಗರದಲ್ಲಿ ಮಳೆ ನೀರಿನಿಂದ ಆಗುತ್ತಿರುವ ಅನಾಹುತ ತಪ್ಪಿಸಲು ಅಲ್ಲಲ್ಲಿ ಇಂಗು ಗುಂಡಿಗಳನ್ನು ತೋಡಲು ಉಪ
ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜಕಾಲುವೆ ಒತ್ತುವರಿ ಮತ್ತು ಕಾಂಕ್ರೀಟ್ ಹೆಚ್ಚುತ್ತಿರುವ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಆದ್ಯತೆ ಮೇರೆಗೆ ಅಗತ್ಯ ಎನಿಸಿದ ಕಡೆ ಇಂಗು ಗುಂಡಿಗಳನ್ನು ಮಾಡಬೇಕು. ರಾಜಕಾಲುವೆ ಒತ್ತುವರಿ ತೆರವಿಗೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕುಟುಂಬಗಳ ಸ್ಥಳಾಂತರ: ಆಯುಕ್ತ

ಗುರುದತ್ತ ಲೇಔಟ್‌ನಲ್ಲಿ ಕುಸಿದಿರುವ ತಡೆಗೋಡೆ ಪಕ್ಕದಲ್ಲಿರುವ 2 ಕಟ್ಟಡಗಳಲ್ಲಿನ 8 ಕುಟುಂಬಗಳನ್ನು ಸ್ಥಳಾಂತರ ಮಾಡಿ ದುರಸ್ತಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಸಿ.ಎನ್. ಅಶ್ವತ್ಥನಾರಾಯಣ ಅವರ ಜತೆ ಹಾನಿ ಪ್ರದೇಶ ಪರಿಶೀಲಿಸಿದ ಅವರು, ‘ನೀರಿನ ರಭಸ ಮತ್ತು ಜಲಮಂಡಳಿ ಕಾಮಗಾರಿ ನಿರ್ವಹಿಸುತ್ತಿರುವ ಕಾರಣದಿಂದ ತಡೆಗೋಡೆ ಕುಸಿದಿದೆ. ಅಪಾಯದಲ್ಲಿರುವ ಎರಡು ಕಟ್ಟಡಗಳ ನಿವಾಸಿಗಳನ್ನು ಒಂದು ತಿಂಗಳ ಕಾಲ ಸ್ಥಳಾಂತರಿಸಿ ಕಾಮಗಾರಿ ನಿರ್ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT