ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ: 11 ಸ್ಥಳಗಳಲ್ಲಿ ತೆರವು

ಮಹದೇವಪುರದಲ್ಲಿ ಬಹುತೇಕ ಸ್ಥಗಿತಗೊಂಡ ಕಾರ್ಯಾಚರಣೆ; ಸರ್ವೆಗೆ ಒತ್ತು
Last Updated 14 ಸೆಪ್ಟೆಂಬರ್ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ, ಯಲಹಂಕ ಹಾಗೂ ಪಶ್ಚಿಮ ವಲಯದಲ್ಲಿ ರಾಜಕಾಲುವೆ ಒತ್ತುವರಿಯನ್ನು 11 ಸ್ಥಳಗಳಲ್ಲಿ ಬಿಬಿಎಂಪಿ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು. ಮಹದೇವಪುರ ವಲಯದಲ್ಲಿ ಸೋಮವಾರದಿಂದ ಎರಡು ದಿನ ಹೆಚ್ಚು ತೆರವು ಮಾಡಲಾಗಿತ್ತು. ಬುಧವಾರ ತೆರವು ಕಾರ್ಯ ಬಹುತೇಕ ಸ್ಥಗಿತಗೊಂಡಿದ್ದು, ಸರ್ವೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಲಹಂಕ ವಲಯದಲ್ಲಿ ಕುವೆಂಪು ನಗರ ವಾರ್ಡ್ ಸಿಂಗಾಪುರ ವ್ಯಾಪ್ತಿಯಲ್ಲಿ ಸರ್ವೆ ಸಂ.81 ಹಾಗೂ 82ರಲ್ಲಿ ಬಾಲನ್ ಆಗ್ರೋ ಪ್ರಾಡಕ್ಟ್ ಸಂಸ್ಥೆಯ ಜ್ಯೂಸ್ ಫ್ಯಾಕ್ಟರಿಯಿಂದ ಸುಮಾರು 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗವನ್ನು ತೆರವು ಮಾಡಲಾಗಿದೆ. ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ನೀರುಗಾಲುವೆಯನ್ನು ಸರ್ವೆ ಸಂ. 97 ಹಾಗೂ 100ರಲ್ಲಿ 2.4 ಮೀಟರ್ ಅಗಲ ಹಾಗೂ 200 ಮೀಟರ್ ಉದ್ದ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪಶ್ಚಿಮ ವಲಯದಲ್ಲಿ ಸುಭಾಷ್‌ನಗರದ ಬರಗಿ ಮುದ್ದೇನಹಳ್ಳಿಯಲ್ಲಿ 120 ಚ.ಮೀ ಖಾಲಿ ಜಾಗ ಹಾಗೂ 120 ಚ.ಮೀ ರೈಲ್ವೆ ಇಲಾಖೆಯ ಜಾಗ ಸೇರಿ ಒಟ್ಟು 240 ಚ.ಮೀ ನಷ್ಟು ಒತ್ತುವರಿ ತೆರವು ಮಾಡಲಾಗಿದೆ. ಮಹದೇವಪುರ ವಲಯದಲ್ಲಿ ಮುನ್ನೇಕೊಳಲು ವ್ಯಾಪ್ತಿಯಲ್ಲಿ ತೆರವು ಮಾಡಲಾಗಿದೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಹೊರಮಾವು ವಾರ್ಡ್ ಪಟೇಲ್ ರಾಮಯ್ಯ ಲೇಔಟ್‌ನ ಕೊತ್ತನೂರು ಹಳ್ಳಿ ಸರ್ವೆ ಸಂ. 6, 7, 30, 14 ಸೇರಿದಂತೆ ಒಟ್ಟಾರೆ 600 ಮೀ. ಉದ್ದ ಹಾಗೂ 19.5 ಮೀ. ಅಗಲದ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಗೋಡೆ, ಶೆಡ್‌ ತೆರವು ಮಾಡಲಾಗಿದೆ.

ನಲಪಾಡ್ ಅಕಾಡೆಮಿ ಒತ್ತುವರಿ ತೆರವು: ಚೆಲ್ಲಘಟ್ಟದ ಸರ್ವೆ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿಯಿಂದ ಒತ್ತುವರಿಯಾಗಿದ್ದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ಕಾಲುವೆ ಜಾಗದಲ್ಲಿ ಅಳವಡಿಸಿದ್ದ ಕಾಂಕ್ರೀಟ್ ಸ್ಲ್ಯಾಬ್‌ ಅನ್ನು ತೆರವುಗೊಳಿಸಲಾಗಿದೆ. ತಡೆಗೋಡೆ ಮೇಲೆ ಅಳವಡಿಸಿದ್ದ ಫೆನ್ಸಿಂಗ್ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಚಲ್ಲಘಟ್ಟದಲ್ಲಿರುವ ನಲಪಾಡ್‌ ಅಕಾಡೆಮಿಯಲ್ಲಿ ಒತ್ತುವರಿಯನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು. ಮಹದೇವಪುರದಲ್ಲಿ ಪುರ್ವ ಪಾರ್ಕ್‌ರಿಡ್ಜ್‌ನಲ್ಲಿ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ಸರ್ವೆ ನಡೆಸಿದರು.

ಬಾಗ್ಮನೆ: ಸರ್ವೆ ಕಾರ್ಯ ಪೂರ್ಣ

ಹೈಕೋರ್ಟ್‌ ಹಾಗೂ ಸೆ.12ರಂದು ಲೋಕಾಯುಕ್ತರ ಅದೇಶದ ಮೇರೆಗೆ ಗರುಡಾಚಾರಪಾಳ್ಯ ಕೆರೆಯಿಂದ ಮಹದೇವಪುರ ಕೆರೆಗೆ ಸೇರುವ ಮಳೆ ನೀರುಗಾಲುವೆಯನ್ನು ಪುರ್ವ ಪಾರ್ಕ್‌ರಿಡ್ಜ್‌ ಸ್ವತ್ತು ಹಾಗೂ ಬಾಗ್ಮನೆ ಟೆಕ್‌ಪಾರ್ಕ್‌ ಸ್ವತ್ತಿನ ಮೂಲಕ ಆದು ಹೋಗುವ ಈ ಕಾಲುವೆ ಸರ್ವೆಯನ್ನು ತಹಶೀಲ್ದಾರ್‌, ಸರ್ವೆಯರ್‌ಗಳ ಮೂಲಕ ನಡೆಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿ 2.5 ಮೀಟರ್ ಅಗಲದ ರಾಜಕಾಲುವೆ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಪುರ್ವ ಪಾರ್ಕ್ರಿಡ್ಜ್ ನಲ್ಲಿ 2.5 ಮೀಟರ್ ಅಗಲದ ಸ್ಥಳದಲ್ಲಿ ಕಟ್ಟಡ, ಖಾಲಿ ಜಾಗ ಹಾಗೂ ರಸ್ತೆಯನ್ನು ನಿರ್ಮಿಸಲಾಗಿದೆ. ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಯ ಭಾಗದಲ್ಲಿ ಸುಮಾರು 13 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಗೋಡೆ, ಕಟ್ಟಡ ಹಾಗೂ ಶೆಡ್ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಸರ್ವೆ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.

ತೆರವಿಗೆ ಅಡ್ಡಿಯಾಗಿಲ್ಲ: ನಂದೀಶ್‌ ರೆಡ್ಡಿ

‘ಚಿನ್ನಪ್ಪನಹಳ್ಳಿಯಲ್ಲಿ 20X30 ನಿವೇಶನದಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಕೆಡವಬೇಡಿ. ಅದರ ಬದಲಿಗೆ ಮನೆಗಳ ಪಕ್ಕದಲ್ಲಿರುವ ರಸ್ತೆಯಲ್ಲಿ ಕಾಲುವೆ ಮಾಡಿ. ಅದರ ಮೇಲೆ ಸ್ಲ್ಯಾಬ್‌ ಅಳವಡಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ದೊಡ್ಡ ಮನೆ, ಐಷಾರಾಮಿ ಬಂಗಲೆಗಳಿಂದಾಗಿರುವ ರಾಜಕಾಲುವೆ ತೆರವು ಮಾಡಬೇಡಿ ಎಂದು ಹೇಳಿಲ್ಲ’ ಎಂದು ಬಿಜೆಪಿಯ ಮಾಜಿ ಶಾಸಕ ನಂದೀಶ್‌ ರೆಡ್ಡಿ ಹೇಳಿದರು.

‘ಬಸವನಪುರದಲ್ಲಿ 10 ವರ್ಷದ ಹಿಂದೆ ಇಂತಹದ್ದೇ ಸುಮಾರು 200 ಸಣ್ಣ ಮನೆ ಗಳನ್ನು ಉಳಿಸಲು ರಸ್ತೆಯ ಕೆಳಗೇ ರಾಜಕಾಲುವೆಯನ್ನು ಮಾಡಿದ್ದೇವೆ. ಬಾಕ್ಸ್‌ ರೀತಿಯಲ್ಲಿ ಮಾಡಿದ್ದೇವೆ. ಯಾವುದೇ ತೊಂದರೆ ಇಲ್ಲ. ಅದರಂತೆ ಇಲ್ಲಿಯೂ ಮಾಡಿ ಎಂದು ಹೇಳಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT