ಸೋಮವಾರ, ಸೆಪ್ಟೆಂಬರ್ 23, 2019
22 °C
ಪ್ರಿಯಕರನಿಗೆ ನ್ಯಾಯಾಂಗ ಬಂಧನ

ತಂದೆಯನ್ನೇ ಕೊಂದ ಪ್ರಕರಣ: ಫೋಟೊಶೂಟ್‌ಗೆ ಮುಂಬೈಗೆ ಹೋಗಿದ್ದಳು ಮಗಳು

Published:
Updated:

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ (40) ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ‘ಮಾಡೆಲಿಂಗ್‌’ನಲ್ಲಿ ಆಸಕ್ತಿ ಹೊಂದಿದ್ದ ಮಗಳು, ‘ಫೋಟೊಶೂಟ್‌’ಗಾಗಿ ಮುಂಬೈಗೆ ಹೋಗಿ ಬಂದಾಗಿನಿಂದ ತಂದೆ ವಿರುದ್ಧ ವೈರತ್ವ ಸಾಧಿಸಲಾರಂಭಿಸಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಹದಿನಾರರ ಮಗಳೇ ತಂದೆಯ ಕೊಂದಳು: ‘ಅಪ್ಪ ಅಲ್ಲ, ವೈರಿ ಕೊಂದಿದ್ದೇನೆ, ನಿಮಗೇನು?’

ಜೈಕುಮಾರ್‌ ಹತ್ಯೆ ಸಂಬಂಧ ಮಗಳು ಹಾಗೂ ಆಕೆಯ ಪ್ರಿಯಕರ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕಿಯನ್ನು ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದ್ದು, ಅಲ್ಲಿಂದಲೇ ನ್ಯಾಯಾಲಯಕ್ಕೆ ಮಂಗಳವಾರ ಮಧ್ಯಾಹ್ನ ಹಾಜರುಪಡಿಸಲಾಯಿತು.


ಪ್ರಿಯಕರ  ಪ್ರವೀಣ್‌

‘ಪ್ರವೀಣ್‌ನನ್ನು ಪ್ರೀತಿಸುತ್ತಿದ್ದ ಬಾಲಕಿ, ಆತನ ಜೊತೆಗೆ ಎಲ್ಲೆಂದರಲ್ಲಿ ಓಡಾಡುತ್ತಿದ್ದಳು. ಅವರಿಬ್ಬರ ನಡುವೆ ಹೆಚ್ಚು ಸಲುಗೆಯೂ ಇತ್ತು. ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಬಾಲಕಿ, ಪ್ರಿಯಕರನ ಜೊತೆ ಸೇರಿಕೊಂಡು ಹಲವು ಫ್ಯಾಷನ್ ಶೋಗಳಿಗೂ ಹೋಗಿಬರುತ್ತಿದ್ದಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಳೆದ ತಿಂಗಳು ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿದ್ದ ಮಗಳು ಮುಂಬೈಗೆ ಹೋಗಿದ್ದಳು. ಅಲ್ಲಿಂದಲೇ ತಾಯಿಗೆ ಕರೆ ಮಾಡಿ, ‘ಫೋಟೊಶೂಟ್‌ಗಾಗಿ ಸ್ನೇಹಿತೆಯರ ಜೊತೆ ಮುಂಬೈಗೆ ಬಂದಿದ್ದೇನೆ. ನಾಲ್ಕು ದಿನ ಬಿಟ್ಟು ವಾಪಸ್ ಮನೆಗೆ ಬರುತ್ತೇನೆ’ ಎಂದು ಹೇಳಿದ್ದಳು. ಆ ವಿಚಾರ ತಂದೆಗೂ ಗೊತ್ತಾಗಿತ್ತು’.

‘ಆಕೆಯ ಸ್ನೇಹಿತರನ್ನು ವಿಚಾರಿಸಿದಾಗ, ಪ್ರವೀಣ ಜೊತೆ ಮುಂಬೈಗೆ ಪ್ರವಾಸಕ್ಕೆ ಹೋಗಿದ್ದಾಳೆಂಬ ಸಂಗತಿ ತಿಳಿದಿತ್ತು. ಮುಂಬೈನಲ್ಲೇ ಅವರಿಬ್ಬರು ನಾಲ್ಕು ದಿನ ಉಳಿದುಕೊಂಡಿದ್ದರು. ಮನೆಗೆ ಬಂದ ದಿನವೇ ತಂದೆ, ಮೊಬೈಲ್ ಕಸಿದುಕೊಂಡು ಬುದ್ಧಿವಾದ ಹೇಳಿದ್ದರು. ಪ್ರವೀಣ್‌ ಜೊತೆ ಮಾತನಾಡದಂತೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಬಗ್ಗೆ ತಾಯಿಯೇ ಹೇಳಿಕೆ ನೀಡಿದ್ದಾರೆ. ಅಂದು ಮನೆಯಲ್ಲಾದ ಆ ಗಲಾಟೆಯಿಂದಾಗಿಯೇ ಮಗಳು, ತಂದೆಯನ್ನು ಕೊಲೆ ಮಾಡಲು ಸಂಚು ರೂಪಿಸಲಾರಂಭಿಸಿದ್ದಳು’ ಎಂದು ಮೂಲಗಳು ಹೇಳಿವೆ.

‘ಠೇವಣಿ’ಯಿಂದ ಜೀವನ ನಿರ್ವಹಣೆ’

ಬೆಂಗಳೂರು: ಆರೋಪಿ ಪ್ರವೀಣ್‌ನದ್ದು ಮಧ್ಯಮ ವರ್ಗದ ಕುಟುಂಬ. ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿಯಿಂದ ಬರುವ ಬಡ್ಡಿಯಿಂದಲೇ ಆತನ ತಂದೆ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

‘ರಾಜಾಜಿನಗರದ ನಿವಾಸಿ ಕೆ.ಪ್ರಕಾಶ್ (67) ಹಾಗೂ ಪ್ರತಿಮಾ ದಂಪತಿಯ ಒಬ್ಬನೇ ಮಗ ಪ್ರವೀಣ್‌. ಆತನನ್ನು ಮುದ್ದಿನಿಂದ ಬೆಳೆಸಿದ್ದರು. ಮಗ ಜೈಲಿಗೆ ಹೋಗಿರುವುದರಿಂದ, ಪೋಷಕರು ಕಂಗಾಲಾಗಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಪ್ರಕಾಶ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯನ್ನು ಬೇರೊಂದು ಆಡಳಿತ ಮಂಡಳಿ ಖರೀದಿ ಮಾಡಿತ್ತು. ಆಗ ಪ್ರಕಾಶ್ ಸೇರಿ ಹಲವರನ್ನು ಕೆಲಸದಿಂದ ತೆಗೆಯಲಾಗಿತ್ತು. ಆಗ ಬಂದಿದ್ದ ಹಣವನ್ನು ಪ್ರಕಾಶ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಅದಕ್ಕೆ ಬರುತ್ತಿರುವ ಬಡ್ಡಿಯಿಂದಲೇ ಜೀವನ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ರಕ್ತ ಹತ್ತಿದ್ದ ಬಟ್ಟೆ ಒಣಗಲು ಹಾಕಿದ್ದಳು

‘ಜೈಕುಮಾರ್‌ ಅವರನ್ನು ಹತ್ಯೆ ಮಾಡಿದ್ದ ಬಾಲಕಿ ಹಾಗೂ ಪ್ರವೀಣ್‌ನ ಬಟ್ಟೆಗಳಿಗೆ ರಕ್ತ ಹತ್ತಿತ್ತು. ಆ ಬಟ್ಟೆಗಳನ್ನು ಬಾಲಕಿಯೇ ವಾಷಿಂಗ್ ಮಶಿನ್‌ನಲ್ಲಿ ಹಾಕಿ ತೊಳೆದಿದ್ದಳು. ನಂತರ, ಮನೆಯ ಚಾವಣಿ ಮೇಲೆ ಒಣಗಲು ಹಾಕಿದ್ದಳು. ಸ್ಥಳಕ್ಕೆ ಹೋದಾಗ ಆ ಬಟ್ಟೆಗಳು ಪೊಲೀಸರ ಕಣ್ಣಿಗೆ ಬಿದ್ದಿದ್ದವು. ಅವುಗಳಿಂದಲೂ ಕೊಲೆ ಸುಳಿವು ಸಿಕ್ಕಿತ್ತು’ ಎಂದು ಮೂಲಗಳು ತಿಳಿಸಿವೆ.

8 ಲೀಟರ್‌ ಪೆಟ್ರೋಲ್‌

‘ಆರೋಪಿಗಳಿಬ್ಬರು ಸೇರಿಯೇ ಪೆಟ್ರೋಲ್‌ ಬಂಕ್‌ಗೆ ಹೋಗಿ ನಾಲ್ಕು ನೀರಿನ ಬಾಟಲಿಗಳಲ್ಲಿ 8 ಲೀಟರ್ ಪೆಟ್ರೋಲ್‌ ತಂದಿದ್ದರು. ಅದನ್ನು ಜೈಕುಮಾರ್ ಮೇಲೆ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಉರಿಯುತ್ತಿದ್ದಾಗಲೇ ಬಾಟಲಿಯಲ್ಲಿ ಉಳಿದಿದ್ದ ಪೆಟ್ರೋಲ್‌ ಅನ್ನು ಸುರಿಯಲು ಆರೋಪಿಗಳು ಮುಂದಾಗಿದ್ದರು. ಅದೇ ವೇಳೆ ಅವರಿಗೂ ಬೆಂಕಿ ತಗುಲಿ ಗಾಯವಾಗಿತ್ತು’ ಎಂದು ಮೂಲಗಳು ಹೇಳಿವೆ.

Post Comments (+)