ಶುಕ್ರವಾರ, ಅಕ್ಟೋಬರ್ 23, 2020
26 °C
ಕೊಳಚೆ ನೀರು ಹರಿಯುವ ರಾಜಕಾಲುವೆಯಾದ ರಸ್ತೆ l ಸಂಚಾರಕ್ಕೆ ಸಾರ್ವಜನಿಕರ ಪರದಾಟ

ಅರ್ಧಕ್ಕೆ ನಿಂತ ಕಾಮಗಾರಿ: ರಸ್ತೆಯೇ ಮಾಯ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅತ್ಯಂತ ಜನನಿಬಿಡ ಮತ್ತು ವಾಹನ ದಟ್ಟಣೆ ಪ್ರದೇಶಗಳಲ್ಲಿ ಒಂದಾದ ಜೆ.ಸಿ. ರಸ್ತೆ ಸುತ್ತಮುತ್ತಲ ಬಡಾವಣೆಗಳಲ್ಲಿ ಈಗ ಕಾಲಿಡಲೂ ಜಾಗವಿಲ್ಲ. ಎಲ್ಲ ರಸ್ತೆಗಳನ್ನು ಅಗೆದು ಬಿಡಲಾಗಿದ್ದು, ವಾಹನ ಮತ್ತು ಜನ ಸಂಚಾರವೇ ದುಸ್ತರವಾಗಿದೆ. ಅದರಲ್ಲೂ ಎಂಟಿಬಿ ರಸ್ತೆಯೇ ರಾಜಕಾಲುವೆಯಂತಾಗಿದೆ.

ಮಿನರ್ವ ವೃತ್ತದಿಂದ ಚಿನ್ನಪ್ಪ ಗಾರ್ಡನ್ ಕಡೆಗೆ ಹೋಗುವ ಎಂಟಿಬಿ (ಮಳವಳ್ಳಿ ಟ್ಯಾಂಕ್ ಬಂಡ್‌) ರಸ್ತೆ ಮತ್ತು ಸುತ್ತಮುತ್ತಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಲು ಬಿಬಿಎಂಪಿಯಿಂದ ಕಾಮಗಾರಿ ಆರಂಭಿಸಲಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಧಾಮನಗರ ವಾರ್ಡ್ ವ್ಯಾಪ್ತಿಯಲ್ಲಿ ಈ ರಸ್ತೆ ಇದೆ. ಶಾಸಕರ ನಿಧಿಯಲ್ಲಿ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.

ಅಗೆದು ಬಿಡಲಾಗಿರುವ ರಸ್ತೆ ನೋಡಿದರೆ ಇಲ್ಲಿ ರಸ್ತೆ ಇತ್ತು ಎಂಬುದೇ ಅರಿವಿಗೆ ಬಾರದ ಸ್ಥಿತಿಯಲ್ಲಿದೆ. ಕೊಳಚೆ ನೀರು ಮತ್ತು ಮಳೆ ನೀರು ರಸ್ತೆಯಲ್ಲೇ ಹರಿದು ಅಲ್ಲಲ್ಲಿ ನಿಂತಿದ್ದು, ರಸ್ತೆಯೋ, ರಾಜಕಾಲುವೆಯೋ ಎಂಬ ಅನುಮಾನ ಹುಟ್ಟಿಸುವಂತಿದೆ. ಇಲ್ಲಿ ವಾಹನಗಳಿರಲಿ, ಜನ ಓಡಾಡಲೂ ಕಷ್ಟಪಡುತ್ತಿದ್ದಾರೆ.

ಎರಡೂ ಬದಿಯಲ್ಲಿ ಆಟೋಮೊಬೈಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್ ಅಂಗಡಿಗಳೇ ಹೆಚ್ಚಿವೆ. ಎದುರಿನ ಅಂಗಡಿಗೆ ಹೋಗಬೇಕೆಂದರೂ ಕೊಳಚೆ ನೀರನ್ನು ದಾಟಿಕೊಂಡೇ ಹೋಗಬೇಕು. ಹೆಜ್ಜೆ ಹಾಕುವ ಜಾಗದಲ್ಲಿ ಕಲ್ಲುಗಳನ್ನು ಹಾಕಿಕೊಂಡು ಜನ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿದ್ದಾರೆ.

ಈ ಅಂಗಡಿಗಳಲ್ಲಿ ಖರೀದಿಸಿದ ಉಪಕರಣಗಳನ್ನು ಕೊಂಡೊಯ್ಯಲು ಅಥವಾ ಸರಕು ‍ಪೂರೈಸಲು ಅನಿವಾರ್ಯವಾಗಿ ವಾಹನಗಳು ಬಂದರೆ ರಸ್ತೆಯಲ್ಲಿ ಹೂತುಕೊಂಡು ಹೊರಬರಲು ಪರದಾಡಬೇಕಾದ ಸ್ಥಿತಿ ಇದೆ. ಜೆಸಿಬಿ ಅಥವಾ ಕ್ರೇನ್ ಕರೆಸಿ ವಾಹನಗಳನ್ನು ಹೊರಕ್ಕೆ ತೆಗೆದಿರುವ ಹಲವು ಉದಾಹರಣಗಳಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ದ್ವಿಚಕ್ರ ವಾಹನಗಳ ಸವಾರರೂ ಹಲವಾರು ಬಾರಿ ಕೊಳಚೆಗುಂಡಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಅಗೆದು ಬಿಟ್ಟು ಹೋಗಿರುವ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಕಾರಣಕ್ಕೆ ಮೊದಲೇ ವಹಿವಾಟು ಕುಸಿದಿದೆ. ಈಗ ರಸ್ತೆಗೆ ವಾಹನಗಳೇ ಇಳಿಯಲು ಆಗದ ಕಾರಣ ಗ್ರಾಹಕರೂ ಇಲ್ಲವಾಗಿದ್ದಾರೆ. ನಮ್ಮ ಕಷ್ಟ ಯಾರ ಬಳಿ ಹೇಳಿಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

ಒಂದೇ ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗ ಸಬೂಬುಗಳನ್ನು ಹೇಳುತ್ತಿದ್ದಾರೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳದೆ ರಸ್ತೆ ಅಗೆದಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಹತ್ತೇ ದಿನದಲ್ಲಿ ಕಾಮಗಾರಿ ಪೂರ್ಣ

ಕಾಮಗಾರಿ ಪೂರ್ಣಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಣ್ಣಪುಟ್ಟ ತೊಡಕುಗೊಳಿವೆ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ ಪ್ರಸನ್ನ ವೆಂಕಟೇಶ್ ಹೇಳಿದರು.

‘ಕೆಲ ಕಟ್ಟಡಗಳ ಮಾಲೀಕರು ಶೌಚಗುಂಡಿ ಸಂಪರ್ಕವನ್ನು ಒಳಚರಂಡಿ ಪೈಪ್‌ಲೈನ್‌ಗೆ ಜೋಡಿಸುವ ಬದಲು ರಸ್ತೆ ಬದಿಯ ಎರಡೂ ಚರಂಡಿಗಳಿಗೆ ಹರಿಯಲು ಬಿಟ್ಟಿದ್ದಾರೆ. ಅವರಿಗೆ ತಿಳುವಳಿಕೆ ನೀಡಿ ಒಳಚರಂಡಿಗೆ ಸಂಪರ್ಕ ಕೊಡಿಸಲಾಗುತ್ತಿದೆ. ಹೀಗಾಗಿ ವಿಳಂಬವಾಗಿದೆಯೇ ಹೊರತು ಬೇರಾವ ಕಾರಣವೂ ಇಲ್ಲ’ ಎಂದು ತಿಳಿಸಿದರು.

‘ಒಳಚರಂಡಿ ಸಂಪರ್ಕ ಸರಿಯಾದರೆ 10 ದಿನಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು