ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ಜ್ಞಾನ ವಿನಿಮಯ: ಇಂಗ್ಲೆಂಡ್‌ ಜತೆ ಒಪ್ಪಂದ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ: ಕಲಿಕೆ–ಗಳಿಕೆಗೆ ಒತ್ತು ನೀಡುವ ಉದ್ದೇಶ
Last Updated 11 ಅಕ್ಟೋಬರ್ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು:ಇಂಗ್ಲೆಂಡ್‌ನ ಆರೋಗ್ಯ ಶಿಕ್ಷಣ ಸಂಸ್ಥೆ ಎನ್‌ಎಚ್‌ಎಸ್‌ ಮತ್ತು ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಯುಜಿಎಚ್‌) ಆರೋಗ್ಯ ಶಿಕ್ಷಣ ಮತ್ತು ಜ್ಞಾನ ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದವು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಇಂಗ್ಲೆಂಡ್‌ನ ಶಿಕ್ಷಣ ವ್ಯವಸ್ಥೆ, ಕಲಿಕೆ ಮತ್ತು ಕೆಲಸದ ಅವಕಾಶಗಳು, ಆರೋಗ್ಯ ಸೇವೆಗಳ ಕುರಿತು ಅರಿಯಲು ವಿದ್ಯಾರ್ಥಿಗಳಿಗೆ ಈ ಒಪ್ಪಂದ ಸುವರ್ಣಾವಕಾಶ ನೀಡಲಿದೆ’ ಎಂದರು.

‘ಜೊತೆಯಾಗಿ ಕಲಿಯುವ, ಜೊತೆಯಾಗಿ ಕೆಲಸ ಮಾಡುವ ಅವಕಾಶ ಈ ಒಪ್ಪಂದದಿಂದಾಗಿ ಸಿಗಲಿದೆ. ನಮ್ಮ ಮಾನವ ಸಂಪನ್ಮೂಲವೂ ಇಂಗ್ಲೆಂಡ್‌ನ ಎನ್‌ಎಚ್‌ಎಸ್‌ಗೆ ಲಭಿಸಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಕರೂ ಇಂಗ್ಲೆಂಡ್‌ನಲ್ಲಿ ಕಲಿಯುವ ಮತ್ತು ಕೆಲಸ ಮಾಡುವ ಅವಕಾಶವನ್ನು ಮಾಡಿಕೊಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಎನ್‌ಎಚ್‌ಎಸ್‌ನ ಮುಖ್ಯ ಕಾರ್ಯನಿರ್ವಾಹಕ ಐಯಾನ್‌ ಕಮ್ಮಿಂಗ್‌, ‘ಆರೋಗ್ಯ ರಕ್ಷಣೆ ವಿಶ್ವದಾದ್ಯಂತ ಈಗ ಆದ್ಯತೆಯ ವಿಷಯ. ಆರೋಗ್ಯ ಸೇವೆ ಒದಗಿಸುವವರಿಗೆ ಇಂದು ಹೆಚ್ಚು ಬೇಡಿಕೆ ಇದೆ. ಶುಶ್ರೂಷಕರು, ವೈದ್ಯರು ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಈ ಒಪ್ಪಂದದಿಂದ ಅನುಕೂಲವಾಗಲಿದೆ’ ಎಂದರು.

ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ
‘ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರವೇಶ ಬಯಸುವಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಆರ್‌ಯುಜಿಎಚ್‌ನ ಕುಲಪತಿ ಡಾ.ಎಸ್. ಸಚ್ಚಿದಾನಂದ ಹೇಳಿದರು.

‘ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಇದಕ್ಕೆ ಅರ್ಜಿ ಸಲ್ಲಿಸಬಹುದು. ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್‌, ಆಯುರ್ವೇದ ಹೀಗೆ ಎಲ್ಲ ವಿಭಾಗದ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹15ಸಾವಿರದಿಂದ ₹25 ಸಾವಿರದವರೆಗೆ ವಿದ್ಯಾರ್ಥಿವೇತನ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಒಪ್ಪಂದದ ಅನುಕೂಲಗಳು
* ಆರ್‌ಯುಜಿಎಚ್‌ನ ವಿದ್ಯಾರ್ಥಿ ವೃಂದ ಮತ್ತು ಅಧ್ಯಾಪಕ ವೃಂದವು ಇಂಗ್ಲೆಂಡ್‌ನಲ್ಲಿನ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ಅರಿಯಲು ಹಾಗೂ ಜ್ಞಾನ ಮತ್ತು ಕೌಶಲ ವಿನಿಮಯ ಮಾಡಿಕೊಳ್ಳಬಹುದು

* ‘ವೀಕ್ಷಣಾ ಕಾರ್ಯಕ್ರಮ’ದ ಅಡಿ ಅಲ್ಲಿನ ಆರೋಗ್ಯ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಸಿಗಲಿದೆ ನೇರ ಅನುಭವ

* ನಮ್ಮ ವಿದ್ಯಾರ್ಥಿಗಳುಇಂಗ್ಲೆಂಡ್‌ನಲ್ಲಿ ದೊರೆಯುತ್ತಿರುವ ಎಂಎಂಇಡಿ ಮತ್ತು ಎಂಸಿಎಚ್‌ ಕೋರ್ಸ್‌ ಸೇರಬಹುದು

* ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ನಿರ್ದಿಷ್ಟ ವಿಷಯದಲ್ಲಿ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ತರಬೇತಿ ಪಡೆಯಬಹುದು

*ನರ್ಸಿಂಗ್‌ ಪದವಿ ಪಡೆದವರು ‘ಕಲಿಯಿರಿ–ಗಳಿಸಿರಿ–ಮರಳಿರಿ’ (ಅರ್ನ್‌–ಲರ್ನ್‌ ಆ್ಯಂಡ್‌ ರಿಟರ್ನ್‌) ಕಾರ್ಯಕ್ರಮದಡಿ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT