ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು, ಮುಂಗಾರು ಉತ್ತಮ ಬೆಳೆ

ಚಂದಾಲಿಂಗೇಶ್ವರ ರೈತರ ಜಾತ್ರೆಯಲ್ಲಿ ವಗ್ಗಯ್ಯ ನುಡಿ, ವಿವಿಧ ಕಡೆಯ ಭಕ್ತರು ಭಾಗಿ
Last Updated 4 ಮೇ 2018, 10:43 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಐತಿಹಾಸಿಕ ಕ್ಷೇತ್ರ ಚಂದಾಲಿಂಗೇಶ್ವರದಲ್ಲಿ ಬುಧವಾರ ವಗ್ಗಯ್ಯನ ನುಡಿ ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಪರಂಪರೆಯಂತೆ ನುಡಿ ಹೇಳುವ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಸರನೇ ಮರವೇರಿದ ವಗ್ಗಯ್ಯನವರು, ಹಿಂಗಾರು ಮುಂಗಾರು ಉತ್ತಮ ಬೆಳೆ ತರುತ್ತವೆ ಎಂದು ಹೇಳಿ ರೈತರಿಗೆ ಸಂತಸದ ಚಿಲುಮೆ ಮೂಡಿಸಿದರು.

ಶತಮಾನಗಳಿಂದ ನಡೆಯುತ್ತಾ ಬಂದಿರುವ ಈ ಜಾತ್ರೆ ರೈತರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ರೈತರು ಈ ಬಾರಿ ಯಾವ ಬೆಳೆ ಬಿತ್ತನೆ ಮಾಡಬೇಕು, ಮಳೆಗಳ ಯೋಗ ಹೇಗಿದೆ, ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮುಗಳ ಫಲಾಫಲಗಳು ಹೇಗಿವೆ, ಯಾವ ಭಾಗದಲ್ಲಿ ಫಲವತ್ತಾದ ಇಳುವರಿ ಬರುತ್ತದೆ ಎಂಬ ಮಾಹಿತಿಯನ್ನು ರೈತರು ಈ ಜಾತ್ರೆಯಿಂದ ಪಡೆಯುತ್ತಾರೆ.

ಅಲ್ಲದೆ, ಹೊಗ್ಗಯ್ಯನವರ ಕಬ್ಬಿಣ ಸರಪಣಿ ಹರಿಯುವ ಪವಾಡ ನೋಡುವುದಕ್ಕೆ ಹಾಗೂ ನುಡಿ ಕೇಳುವುದಕ್ಕಾಗಿಯೇ ದೂರದಿಂದ ಸಾಗರದ ರೀತಿಯಲ್ಲಿ ರೈತರು ಕಿಕ್ಕಿರಿದು ಇಲ್ಲಿ ನೆರೆದಿದ್ದರು.

ಪ್ರತಿವರ್ಷ ಮುಂಗಾರು ಬಿತ್ತನೆ ಆರಂಭದಲ್ಲಿನ ಅಗಿಹುಣ್ಣಿಮೆಯ ನಂತರದ ಮೂರನೇ ದಿನ ಹಾಗೂ ಸುಗ್ಗಿಯ ಸಮಯದಲ್ಲಿ ವಿಜಯದಶಮಿಯ ನಂತರದ ಮೂರನೇ ದಿನ ಹೀಗೆ ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುವುದು ವಿಶೇಷ.

ಸಂಜೆ ದೇವರುಗಳನ್ನು ಹೊತ್ತ ಬೆತ್ತಕುದುರೆ, ಖಡ್ಗ, ಕಳಸ, ಸರಪಳಿ, ನಂದಿಕೋಲು, ಬದನೆಗೂಟ, ಮುಳ್ಳುಹಾವಿಗೆ ಮೆರವಣಿಗಯೊಂದಿಗೆ ಸಾವಿರಾರು ಜನರು ಗಂಗೆ ಸ್ಥಳದಲ್ಲಿ ಪೂಜೆ ಸಲ್ಲಿಸಿದರು. ಓಲಗ ನಡುವೆ ಒಡಪು ಹೇಳುವ ಕಂಚು ವೀರಗಾರರು, ಅವರ ಹಿಂದೆ ದೇವರುಗಳನ್ನು, ಪಲ್ಲಕ್ಕಿ ಹೊತ್ತವರು, ಶಂಖ ಊದಿ ಜನರನ್ನು ಹುರಿದುಂಬಿಸುತ್ತಿದ್ದ ಹೊಗ್ಗಯ್ಯನವರ ತಂಡ ಇಲ್ಲಿ ಕಂಡು ಬಂತು.

ನುಡಿ ಹೇಳುವ ಕಾರ್ಯಕ್ರಮ ಮುಗಿದ ಬಳಿಕ ಕೊಂತ ಪಂದ್ಯ ನಡೆಯಿತು. ಇದರಲ್ಲಿ ಯಾವ ದಿಕ್ಕಿಗೆ ಉತ್ತಮ ಬೆಳೆ ಬರುತ್ತದೆ ಎಂಬ ಬಗ್ಗೆ ರೈತರು ತಿಳಿದುಕೊಳ್ಳುತ್ತಾರೆ. ಬಳಿಕ ಜಾತ್ರೆಗೆ ಮೆರುಗು ತರುವ ಕಬ್ಬಿಣ ಸರಪಳಿ ಪವಾಡ ನಡೆಯಿತು.

ದಕ್ಷಿಣಕ್ಕೆ ದ್ವಾರವಿರುವ ಚಂದಾಲಿಂಗೇಶ್ವರನ ಗುಡಿಯ ಸುತ್ತಲೂ 101 ದೇವರ ವಿಭಿನ್ನ ಮೂರ್ತಿಗಳು, ಲಿಂಗಗಳು, ದೇಗುಲಗಳಿವೆ.

ಚಂದಾಲಿಂಗೇಶ್ವರನ ಬಲಭಾಗದಲ್ಲಿ ಬಿಸಿಲು ಬೀಳದ ಬಾವಿ ಇದ್ದು, ಇದರ ನೀರು ಪವಿತ್ರವಾದದ್ದು ಎಂದು ನಂಬಿರುವ ಭಕ್ತರು, ಇದನ್ನು ಹಾಲು ಬಾವಿ ಎಂದು ಪೂಜಿಸುತ್ತಾರೆ.

ಬೆಳಿಗ್ಗೆ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಕಳಸಾರೋಹಣ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಬಂದಿದ್ದರು.

ಹನುಮಸಾಗರ, ಮನ್ನೇರಾಳ, ಬೀಳಗಿ, ಗುಡೂರ, ದಮ್ಮೂರ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಯರಗೇರಿ ಗ್ರಾಮಗಳ ಭಕ್ತರು ಚಂದಾಲಿಂಗನಿಗೆ ಹರಕೆ ಸಮರ್ಪಿಸಿದರು.

ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT